ಮಂಗಳವಾರ, ಜೂನ್ 2, 2020
27 °C
ಸೋಂಕಿತರ ಪಟ್ಟಿಯಲ್ಲಿ ಶುಕ್ರವಾರ 21, ಶನಿವಾರ 8ನೇ ಸ್ಥಾನಕ್ಕೆ ‘ಮಹಾ’ ಜಿಗಿತ

ಯಾದಗಿರಿ | ಜಿಲ್ಲೆಯಲ್ಲಿ ಒಂದೇ ದಿನ 72 ಪ್ರಕರಣಗಳು ಪತ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 72 ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ. 72 ಜನ ಮಹಾರಾಷ್ಟ್ರ ರಾಜ್ಯದಿಂದ ಜಿಲ್ಲೆಗೆ ಬಂದವರು. ಇವರೆಲ್ಲರನ್ನೂ ಯಾದಗಿರಿಯ ಕೋವಿಡ್ ಆಸ್ಪತ್ರೆಯಲ್ಲಿ ಅವಲೋಕನೆಗಾಗಿ ಇರಿಸಲಾಗಿದೆ.

ರಾಜ್ಯದಲ್ಲಿ ಸೋಂಕಿತರ ಪಟ್ಟಿಯಲ್ಲಿ ಶುಕ್ರವಾರ 21ನೇ ಸ್ಥಾನದಲ್ಲಿ ಜಿಲ್ಲೆ ಕಾಣಸಿಕೊಂಡಿತ್ತು. ಶನಿವಾರ 72 ‍ಪ್ರಕರಣಗಳು ಪತ್ತೆಯಾಗಿದ್ದರಿಂದ 8ನೇ ಸ್ಥಾನಕ್ಕೆ ಬಂದಿದೆ. ಈ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಒಂದೇ ದಿನ ಅತಿ ಹೆಚ್ಚು ಪ್ರಕರಣ ಇದೇ ಮೊದಲ ಬಾರಿ ದಾಖಲಾಗಿದೆ.

ಮೇ 12ರ ತನಕ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎರಡು ಪ್ರಕರಣಗಳು ಪತ್ತೆಯಾಗಿದ್ದವು. ಆನಂತರ 6 ದಿನಗಳ ನಂತರ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು. ಅಂದಿನಿಂದ ಏರುಗತಿಯಲ್ಲಿ ಪ್ರಕರಣ ಸಂಖ್ಯೆ ಏರುತ್ತಲಿದೆ. ಆದರೆ, ಶನಿವಾರ ‘ಮಹಾ’ ಜಿಗಿತ ಕಂಡಿದೆ.

ಪ್ರಕರಣಗಳು ಹೆಚ್ಚಳ: ಜಿಲ್ಲೆಯಲ್ಲಿ 71 ಜನ ವಿದೇಶದಿಂದ ವಾಪಸ್ಸಾಗಿದ್ದಾರೆ. ಅವರು 28 ದಿನಗಳ ಹೋ ಕ್ವಾರಂಟೈನ್‌ ಅವಧಿ ಮುಗಿಸಿದ್ದಾರೆ. ಅವರಲ್ಲಿ ಸೋಂಕಿನ ಲಕ್ಷಣಗಳು ಬಂದಿಲ್ಲ. ಆದರೆ, ಲಾಕ್‌ಡೌನ್‌ ಸಡಿಲಿಕೆ ನಂತರ ಜಿಲ್ಲೆಗೆ ಮಹಾರಾಷ್ಟ್ರ, ಗುಜರಾತ್‌ನಿಂದ ಅತಿ ಹೆಚ್ಚು ವಲಸೆ ಕಾರ್ಮಿಕರು ಬಂದಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಅವರನ್ನು ವಿವಿಧ ವಸತಿ ಶಾಲೆ, ಹಾಸ್ಟೆಲ್‌, ಕಲ್ಯಾಣ ಮಂಟಪಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಆದರೆ, ಇಲ್ಲಿ ಸರಿಯಾದ ಸೌಲಭ್ಯ ಇಲ್ಲದಿದ್ದರಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಕ್ವಾರಂಟೈನ್‌ಗಳಲ್ಲಿ ಇದ್ದವರಲ್ಲೇ ಇಲ್ಲಿಯವರೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಊರೊಳಗೆ ಇರುವ ಶಾಲಾ ಕಾಲೇಜುಗಳಲ್ಲಿ ಕ್ವಾರಂಟೈನ್‌ ಮಾಡದಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಈಗ ಅಂಥ ಕೇಂದ್ರಗಳಲ್ಲಿಯೇ ಸೋಂಕು ಹೆಚ್ಚಳವಾಗಿದ್ದು, ಜನರ ಆತಂಕ ಹೆಚ್ಚಾಗಿದೆ.

ಡಿಸಿ ಮನವಿ: ‘ಹೊರ ರಾಜ್ಯಗಳಿಂದ ಜಿಲ್ಲೆಗೆ ಯಾರೇ ಬಂದರೂ ಅವರನ್ನು 14 ದಿನ ಕ್ವಾರಂಟೈನ್ ಮಾಡಬೇಕಾಗುತ್ತದೆ. ಹೊರ ರಾಜ್ಯಗಳಿಂದ ಬಂದವರ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬಹುದು. ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಜನಪ್ರತಿನಿಧಿಗಳು, ಮಾಧ್ಯಮ, ಸಂಘ-ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಅವರು ಮನವಿ ಮಾಡಿದ್ದಾರೆ.

***

ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಸೋಂಕು ಕಾಣಿಸಿಕೊಂಡಿದೆ. ಅವರೆಲ್ಲರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.
-ಎಂ.ಕೂರ್ಮಾರಾವ್‌, ಜಿಲ್ಲಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು