ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

31 ವಾರ್ಡ್‌ಗಳಿಗೆ 72 ಪೌರ ಕಾರ್ಮಿಕರು!

ಸುರಕ್ಷಿತಾ ಸಾಧನೆಗಳಿಲ್ಲದೆ ಕಾರ್ಯನಿರ್ವಹಣೆ, ಸಿಬ್ಬಂದಿ ಕೊರತೆಯಿಂದ ಕೆಲಸದ ಹೊರೆ
Last Updated 31 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಜನಸಂಖ್ಯೆ ಒಂದು ಲಕ್ಷಕ್ಕೂ (2011ರ ಜನಗಣತಿಯಂತೆ 74,294) ಹೆಚ್ಚು. ಆದರೆ, ಪೌರಕಾರ್ಮಿಕರ ಸಂಖ್ಯೆ ಮಾತ್ರ ಅಗತ್ಯಕ್ಕೆ ತಕ್ಕಂತೆ ಇಲ್ಲ. ಇದರಿಂದ ಅವರ ಮೇಲೆ ಅಧಿಕ ಒತ್ತಡ ಬಿದ್ದಿದೆ.

ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, 150 ಪೌರ ಕಾರ್ಮಿಕರ ಅಗತ್ಯವಿದೆ. ಆದರೆ, 72 ಕಾಯಂ ಪೌರಕಾರ್ಮಿಕರು, 28 ಚಾಲಕರು, ಸೂಪರ್‌ವೈಸರ್‌ ಸೇರಿ 100 ಜನರಿದ್ದಾರೆ. 50 ಹುದ್ದೆ ಖಾಲಿ ಇವೆ.

ಸಚಿವರು, ಹಿರಿಯ ಅಧಿಕಾರಿಗಳು ನಗರಕ್ಕೆ ಬಂದರೆ ಕೆಲ ವಾರ್ಡ್‌ಗಳಲ್ಲಿ ಕಸ ಸಂಗ್ರಹವೇ ನಿಂತು ಹೋಗುತ್ತದೆ. ಏಕೆಂದರೆ ಕೆಲ ಪೌರಕಾರ್ಮಿಕರನ್ನು ಸಚಿವರು ತಿರುಗಾಡುವ ಪ್ರದೇಶಗಳಲ್ಲಿ ಸ್ವಚ್ಛತೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

ಪೌರ ಕಾಯ್ದೆಯಂತೆ 700 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕರು ಇರಬೇಕು. ಆದರೆ, ನಗರದಲ್ಲಿ ಈಗ 1000ಕ್ಕೂ ಅಧಿಕ ಜನಸಂಖ್ಯೆಗೆ ಒಬ್ಬ ಕಾರ್ಮಿಕರಿದ್ದಾರೆ. ಹೀಗಾಗಿ ಸ್ವಚ್ಛತೆ ಕಾಣುವುದು ಅಷ್ಟಕಷ್ಟೆ ಎಂಬಂತಾಗಿದೆ. ಅಲ್ಲಲ್ಲಿ ಒಳಚರಂಡಿಗಳು ತುಂಬಿ ಒಡೆದುಹೋದರೂ ಶೀಘ್ರ ಸ್ವಚ್ಛಗೊಳಿಸಲು ಸಿಬ್ಬಂದಿ ಕೊರತೆ ಇದೆ.

ಊಟಕ್ಕೆ ಸಮಸ್ಯೆ: ‘ಬೆಳಿಗ್ಗೆ 5ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿವಿಧ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತೇವೆ. ನಗರಸಭೆಯಿಂದ ತಿಂಡಿ, ಊಟದ ವ್ಯವಸ್ಥೆ ಮಾಡುತ್ತಿಲ್ಲ. ಮನೆಗೆ ಹೋಗಿ ಊಟ ಮಾಡುವಷ್ಟರಲ್ಲಿಮಧ್ಯಾಹ್ನ 3 ಗಂಟೆಯಾಗಿರುತ್ತದೆ.ಇದು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ನಮ್ಮ ಆರೋಗ್ಯ ಹಿತದೃಷ್ಟಿಯಿಂದ ತಿಂಡಿ, ನೀರು, ಊಟದ ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ಪೌರಕಾರ್ಮಿಕರು.

‘ಕೆಲಸಕ್ಕೆ ಮಾತ್ರ ನಾವು ಬೇಕು. ಆದರೆ, ಹೊಟ್ಟೆಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಕೊರೊನಾ ಸೋಂಕು ಹರಡದಂತೆ ಜನರನ್ನು ಮನೆಯಲ್ಲಿ ಇರುವಂತೆ ಹೇಳಿರುವುದು ಸರಿಯಾಗಿದೆ. ಆದರೆ, ನಾವು ಮಾತ್ರ ಕರ್ತವ್ಯದಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ, ನಮಗೆ ಅನುಕೂಲ ಕಲ್ಪಿಸಬೇಕು‌’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಒಲ್ಲದ ಕೆಲ ಪೌರಕಾರ್ಮಿಕರು.

‘ಬೆಳಿಗ್ಗೆ 7ರಿಂದ 9 ಗಂಟೆ ತನಕ ಮಾತ್ರ ಕಸ ಹಾಕುತ್ತೇವೆ. ನಂತರ ಬಂದರೆ ಕಸ ಮುಟ್ಟಲ್ಲ ಎಂದು ನಗರನಿವಾಸಿಗಳು ಹೇಳುತ್ತಾರೆ. ಎಲ್ಲ ಸಮಯದಲ್ಲಿ ಒಂದೇ ಕಡೆ ಆಟೊ ತೆರಳಲು ಆಗುವುದಿಲ್ಲ. ಇದರಿಂದ ಮತ್ತಷ್ಟು ಸಮಸ್ಯೆ ಆಗುತ್ತದೆ’ ಎಂದು ಕಿರಿಯ ಆರೋಗ್ಯನಿರೀಕ್ಷಕರು ಹೇಳುತ್ತಾರೆ.

ಪೌರಕಾರ್ಮಿಕರ ಎಲ್ಲ ಹುದ್ದೆಗಳನ್ನು ಭರ್ತಿ ಮಾಡದ ಹೊರತು ನಗರ ಸ್ವಚ್ಛವಾಗಿ ಕಾಣಲು ಸಾಧ್ಯವಾಗಿಲ್ಲ. ಶೀಘ್ರ ಅವರಿಗೆ ಸೌಲಭ್ಯ ಕಲ್ಪಿಸಿಕೊಡುಬೇಕು ಎಂದು ಸಾರ್ವಜನಿಕ ಆಗ್ರಹವಾಗಿದೆ.

***

ಘನತ್ಯಾಜ್ಯ ನಿರ್ವಹಣೆ ಸ್ಥಳದಲ್ಲಿ ಒಣ ಕಸ, ಹಸಿ ಕಸ ಬೇರ್ಪಡಿಸಲು 10 ಜನ ಬೇಕು. ಆದರೆ, ಪೌರಕಾರ್ಮಿಕರ ಕೊರತೆಯಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಸರಿದೂಗಿಸಲಾಗುತ್ತಿದೆ.

ಸುರೇಶ್ ಶೆಟ್ಟಿ, ಕಿರಿಯ ಆರೋಗ್ಯ ನಿರೀಕ್ಷಕರು, ನಗರಸಭೆ

***

ವಾರದ ಹಿಂದೆ ಎಲ್ಲರಿಗೂ ಅಗತ್ಯ ಪರಿಕರಗಳನ್ನು ವಿತರಿಸಲಾಗಿದೆ. ಕೆಲವರು ಅಭ್ಯಾಸವಿಲ್ಲದ ಕಾರಣ ಹಾಕಿಕೊಂಡಿಲ್ಲ. ಸಮವಸ್ತ್ರ ಅಳತೆ ನೀಡಿಲ್ಲದ ಕಾರಣ ಅವರು ಧರಿಸಿಕೊಂಡಿಲ್ಲ. ಸದ್ಯ ಅವರ ಮನೆಗಳಿಂದಲೇ ಊಟ ಮಾಡಿಕೊಳ್ಳಲು ಸೂಚಿಸಲಾಗಿದೆ
ಸಂಗಮೇಶ ಪನಿಶೆಟ್ಟಿ, ಪರಿಸರ ಎಂಜಿನಿಯರ್, ನಗರಸಭೆ

***

ಬೆಳಿಗ್ಗೆ 5ರಿಂದ 2 ಗಂಟೆ ವರೆಗೆ ಕೆಲಸ ಮಾಡುತ್ತೇವೆ. ಮನೆಗೆ ತೆರಳಿದ ನಂತರ ಅಧಿಕಾರಿಗಳು ಕರೆದರೆ ಮತ್ತೆ ಬರುತ್ತೇವೆ. ಹಬ್ಬ, ಅಮಾವಾಸ್ಯೆ, ಯಾವುದಕ್ಕೂ ರಜೆ ಇಲ್ಲ. ಆದರೆ, ನಮ್ಮ ಕರ್ತವ್ಯ ಮಾಡುತ್ತಿದ್ದೇವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT