ಸೋಮವಾರ, ಸೆಪ್ಟೆಂಬರ್ 27, 2021
22 °C
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗಿರುವ ಹತ್ತಿ ಕ್ಷೇತ್ರ

ಯಾದಗಿರಿ ಜಿಲ್ಲೆಯಲ್ಲಿ ‘ಬಿಳಿ, ಬಂಗಾರ’ದ ಬೆನ್ನು ಬಿದ್ದ ರೈತರು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹತ್ತಿ ಬಿತ್ತನೆ ಪ್ರದೇಶ ಹೆಚ್ಚಳವಾಗುತ್ತಿದೆ. 2021ರ ಮುಂಗಾರು ಹಂಗಾಮಿನಲ್ಲಿ 1.30 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಹತ್ತಿ ಬಿತ್ತನೆಯಾಗಿದೆ.

180 ರಿಂದ 190 ದಿನಗಳ ಬೆಳೆಯಾಗಿದೆ ಹತ್ತಿ. ಜಿಲ್ಲೆಯಲ್ಲಿ ಜೂನ್‌, ಜುಲೈನಲ್ಲಿ ಹತ್ತಿ ಬಿತ್ತನೆ ಮಾಡುವುದು ವಾಡಿಕೆ. ಜಿಲ್ಲೆಯಲ್ಲಿ 3.92 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಯಿದ್ದು, ಇದರಲ್ಲಿ ಸಿಂಹಪಾಲು ಹತ್ತಿ ಬಿತ್ತನೆಯಾಗಿದೆ. 

ಶಹಾಪುರದಲ್ಲಿ ಅತಿಹೆಚ್ಚು ಹತ್ತಿ ಬಿತ್ತನೆ

ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಅತಿಹೆಚ್ಚು ಶಹಾಪುರ ತಾಲ್ಲೂಕಿನಲ್ಲಿಯೇ ಹತ್ತಿ ಬಿತ್ತನೆಯಾಗಿದೆ. ಎರಡನೇ ಸ್ಥಾನದಲ್ಲಿ ಯಾದಗಿರಿ, ಮೂರನೇ ಸ್ಥಾನದಲ್ಲಿ ಸುರಪುರ ತಾಲ್ಲೂಕಿಗಿದೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿಳಿ ಬಂಗಾರ ಅರ್ಥಾತ್‌ ಹತ್ತಿ ಬಿತ್ತನೆಗೆ ರೈತರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಶಹಾಪುರ ಭಾಗದಲ್ಲಿ ಹೆಚ್ಚು ಕಪ್ಪು ಭೂಮಿ ಇದ್ದು, ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತಿದೆ.

ಮಾಲೀಕ, ಕೂಲಿ ಕಾರ್ಮಿಕರಿಗೆ ಆದಾಯ

ಹತ್ತಿ ಬಿತ್ತನೆ ಮಾಡಿದ ರೈತನಿಗೂ, ಹತ್ತಿ ಬಿಡಿಸುವ ಕೂಲಿ ಕಾರ್ಮಿಕರಿಗೂ ಈ ಬೆಳೆಯಿಂದ ಆದಾಯ ಇದೆ. ಕೂಲಿ ಕಾರ್ಮಿಕರು ಸಿಗದೆ ದೂರದ ಪ್ರದೇಶಗಳಲ್ಲಿ ಆಟೊ, ಟಂಟಂಗಳಲ್ಲಿ ಬಂದು ಕೂಲಿ ಮಾಡುವುದು ಸಾಮಾನ್ಯವಾಗಿದೆ. ದೊಡ್ಡವರ ಜೊತೆಗೆ ಮಕ್ಕಳು ಕೂಲಿ ಮಾಡುತ್ತಿದ್ದರು. ಕೋವಿಡ್‌ ಕಾರಣದಿಂದ ಶಾಲೆ ತೆಗೆಯದ ಕಾರಣ ವಿದ್ಯಾರ್ಥಿಗಳು ಹತ್ತಿ ಬಿಡಿಸುವುದರಲ್ಲಿ ತೊಡಗಿಸಿಕೊಂಡಿದ್ದರು. 

ಹತ್ತಿ ಬಿತ್ತನೆ ಕ್ಷೇತ್ರ

2018–19ರ ಸಾಲಿನಲ್ಲಿ 69,309 ಹೆಕ್ಟೇರ್‌, 2019–20ರಲ್ಲಿ 1,22,973 ಹೆಕ್ಟೇರ್‌, 2020–21ರ ಅವಧಿಯಲ್ಲಿ 1,52,798 ಹೆಕ್ಟೇರ್‌, 2021–22 ಮುಂಗಾರು ಅವಧಿಯಲ್ಲಿ 1,30,802 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ.

8-ರಿಂದ 9 ತಿಂಗಳು ಬೆಳೆ

ನಿರಂತರವಾಗಿ ಹತ್ತಿ ಆದಾಯ ತರುತ್ತಿರುವುದರಿಂದ ಹೆಚ್ಚಿನ ರೈತರು ಇದನ್ನು ಬೆಳೆಯುತ್ತಾರೆ. ಅಲ್ಲದೇ ಒಂದು ಬಾರಿ ಬಿತ್ತನೆ ಮಾಡಿದರೆ 8, 9 ತಿಂಗಳು ಆದಾಯ ಬರುತ್ತದೆ. ಎಲ್ಲ ಹಂತದ ಹತ್ತಿಗೂ ಬೆಲೆ ಇದೆ. ಇದು ರೈತರನ್ನು ಸೆಳೆಯುತ್ತಿದೆ.

ಕಪ್ಪು ಭೂಮಿಯಲ್ಲಿ ಬಿಳಿ ಬಂಗಾರ; ಜಿಲ್ಲೆಯ ಕಪ್ಪು ಭೂಮಿಯಲ್ಲಿ ಯಥೇಚ್ಛವಾಗಿ ಹತ್ತಿ ಬೆಳೆಯುತ್ತದೆ. ದರವೂ ಹೆಚ್ಚಿದ್ದರಿಂದ ರೈತಾಪಿ ವರ್ಗವನ್ನು ಸೆಳೆಯುತ್ತಿದೆ.

ಮೂರು ವರ್ಷಗಳಲ್ಲಿ ಕ್ಷೇತ್ರ ಏರಿಕೆ

ಜಿಲ್ಲೆಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಹತ್ತಿ ಬಿತ್ತನೆ ಕ್ಷೇತ್ರ ವಿಸ್ತಾರವಾಗುತ್ತಿದೆ. ಹೊಸ ರೈತರು ಇದನ್ನು ಪ್ರಯೋಗ ಮಾಡುತ್ತಿದ್ದಾರೆ. ಕೋವಿಡ್‌ ಕಾರಣದಿಂದ ಉದ್ಯೋಗ ಕಳೆದಕೊಂಡವರು, ಗುಳೆಯಿಂದ ವಾಪಸ್‌ ಆದವರು ಹತ್ತಿ ಬಿತ್ತನೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಸಂಶೋಧನೆ ಕೇಂದ್ರ ಸ್ಥಾಪನೆಯಾಗಲಿ

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆ ಹೆಚ್ಚುತ್ತಿರುವುದರಿಂದ ಹತ್ತಿ ಸಂಶೋಧನೆ ಕೇಂದ್ರ ಸ್ಥಾಪನೆ ಮಾಡಲು ಈ ಭಾಗದ ರೈತರು ಆಗ್ರಹಿಸುತ್ತಿದ್ದಾರೆ. ಈ ಮೂಲಕ ಹೊಸ ತಳಿ ಮತ್ತು ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.

***

ಮಾರುಕಟ್ಟೆ ಕೊರತೆ ನಡುವೆಯೂ ಬೆಳೆ

ಜಿಲ್ಲೆಯಲ್ಲಿ 1.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದ್ದರೂ ಸೂಕ್ತ ಮಾರುಕಟ್ಟೆಯೇ ಇಲ್ಲ. ಪಕ್ಕದ ಜಿಲ್ಲೆಗಳಾದ ರಾಯಚೂರು, ಕಲಬುರ್ಗಿಯ ಅವಲಂಬನೆ ತಪ್ಪಿಲ್ಲ.

ಯಾದಗಿರಿ, ಗುರುಮಠಕಲ್, ಸೈದಾಪುರ ಭಾಗದ ರೈತರು ರಾಯಚೂರು ಜಿಲ್ಲೆಗೆ ಹತ್ತಿಯನ್ನು ಸಾಗಿಸುತ್ತಿದ್ದಾರೆ. ಶಹಾಪುರ, ಸುರಪುರ, ಕೆಂಭಾವಿ ವಲಯದವರು ಕಲಬುರ್ಗಿ ಕಡೆ ಮುಖ ಮಾಡುತ್ತಾರೆ. ಜಿಲ್ಲೆಯಲ್ಲಿ ವರ್ಷ ಪೂರ್ತಿ ಹತ್ತಿ ಮಾರುಕಟ್ಟೆ ಲಭ್ಯವಿದ್ದರೆ ಮತ್ತಷ್ಟು ಅನುಕೂಲವಾಗಲಿದೆ ಎನ್ನುವುದು ಹತ್ತಿ ಬೆಳೆಗಾರರ ಆಗ್ರಹವಾಗಿದೆ.

ಹತ್ತಿ ಖರೀದಿ ಕೇಂದ್ರಗಳು ಸ್ಥಾಪನೆಗೆ ವಿಳಂಬವಾಗಲು ಕಾರ್ಖಾನೆಗಳ ನೀತಿಯೇ ಕಾರಣವಾಗಿದೆ. ಸಾಲ ಮಾಡಿದ ರೈತರು ಶೀಘ್ರವಾಗಿ ಹಣ ಸಿಗಲು ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಾರೆ. ಆ ನಂತರ ಬೆಂಬಲ ಬೆಲೆಗೆ ಕಾರ್ಖಾನೆಗಳವರು ಸರ್ಕಾರಕ್ಕೆ ರೈತರ ಹೆಸರಿನಲ್ಲಿ ಮಾರಾಟ ಮಾಡುವುದು ಗುಟ್ಟಾಗಿ ಉಳಿದಿಲ್ಲ.
****
ಅಂಕಿಅಂಶ

ಹತ್ತಿ ಬಿತ್ತನೆ ಕ್ಷೇತ್ರ (2018ರಿಂದ 2021ರವರೆಗೆ)
ತಾಲ್ಲೂಕು: ಹೆಕ್ಟೇರ್‌
ಶಹಾಪುರ; 2,17,098
ಸುರಪುರ; 1,08,038
ಯಾದಗಿರಿ;1,50,746
ಒಟ್ಟು; 4,75,882
ಆಧಾರ: ಕೃಷಿ ಇಲಾಖೆ

***

ಕೊರೊನಾ ಸಂಕಷ್ಟದಿಂದ ಎಂಜಿನಿಯರಿಂಗ್ ವೃತ್ತಿ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡು ಪ್ರಥಮ ಬಾರಿಗೆ 30 ಎಕರೆಯಲ್ಲಿ ₹4 ಲಕ್ಷ ಖರ್ಚು ಮಾಡಿ ಹತ್ತಿ ಬೆಳೆ ಬಿತ್ತನೆ ಮಾಡಿದ್ದೇನೆ. ಫಸಲು ಉತ್ತಮವಾಗಿದೆ
ವಿಜಯಕುಮಾರ ಕಂದಳ್ಳಿ, ಯುವ ರೈತ

***

ಸುಮಾರು 7 ವರ್ಷದಿಂದ ಹತ್ತಿ ಬಿತ್ತನೆ ಮಾಡುತ್ತಿದ್ದೇನೆ. ಈ ಬಾರಿಯೂ 12 ಎಕರೆ ಜಮೀನಿನಲ್ಲಿ ₹2 ಲಕ್ಷ ಖರ್ಚು ಮಾಡಿ ಹತ್ತಿ ಬಿತ್ತನೆ ಮಾಡಿದ್ದೇನೆ. ಸಕಾಲಕ್ಕೆ ಮಳೆಯಾದರೆ ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದೇನೆ
ಸಂಗಪ್ಪ ಬಾಲಚೇಡೋರ್ ಬದ್ದೇಪಲ್ಲಿ, ರೈತ

***

ಹತ್ತಿ ಆದಾಯ ಕೊಡುವ ಬೆಳೆ. ಕೆಂಪು ಭೂಮಿಯಲ್ಲಿ ಶೇ 60 ರಿಂದ 70ರಷ್ಟು ಮಾತ್ರ ಇಳುವರಿ ಬರುತ್ತದೆ. ಕಪ್ಪು ಭೂಮಿ ಹತ್ತಿ ಬೆಳೆಗೆ ಸೂಕ್ತವಾಗಿದೆ. ಈಗ ಶೀಘ್ರ ಬೆಳೆ ಬರುವ ಹತ್ತಿಯೂ ಇದೆ 
ಡಾ.ಜಯಪ್ರಕಾಶ ನಿಡಗುಂಡಿ, ಹತ್ತಿ ತಳಿ ವರ್ಧಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು