ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಬೇಸಿಗೆಯಲ್ಲೂ ಆರಂಭವಾಗದ ಸರ್ಕಾರಿ ಈಜುಕೊಳ

ಕೋವಿಡ್‌ ಕಾರಣಕ್ಕೆ 2 ವರ್ಷಗಳಿಂದ ಸ್ಥಗಿತ
Last Updated 27 ಏಪ್ರಿಲ್ 2022, 5:05 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಈಜುಕೊಳ ಈ ಬಾರಿ ಬೇಸಿಗೆ ಅವಧಿಯಲ್ಲಿ ಇನ್ನೂ ಆರಂಭವಾಗಿಲ್ಲ. ಶಾಲೆಗಳಿಗೆ ರಜೆ ಇರುವುದರಿಂದ ನಗರ ಪ್ರದೇಶದವರು ಈಜಾಡಲು, ಈಜು ಕಲಿಯಲು ಗ್ರಾಮೀಣ ಪ್ರದೇಶದಲ್ಲಿನ ಬಾವಿಗಳನ್ನು ಹುಡುಕಿಕೊಂಡು ತೆರಳುವಂತಹ ಪರಿಸ್ಥಿತಿ ಉಂಟಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ₹ 1.70 ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಮಾಡಲಾಗಿದೆ. 2019ರ ಜೂನ್‌ 7ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಾಜಶೇಖರ ಬಿ.ಪಾಟೀಲ ಉದ್ಘಾಟಿಸಿದ್ದರು.

ಆರಂಭದ ಎರಡ್ಮೂರು ತಿಂಗಳು ಮಾತ್ರ ಈಜುಕೊಳ ಚಾಲನೆಯಲ್ಲಿತ್ತು. ಮಳೆಗಾಲ ಬಂದ ನಂತರ ಮುಚ್ಚಿದ್ದು, ಇಲ್ಲಿಯತನಕ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಈಜುಕೊಳ ಆರಂಭವಾಗಿದ್ದಾಗ ವಯಸ್ಕರಿಗೆ ₹50, ಮಕ್ಕಳಿಗೆ ₹30 ಶುಲ್ಕ ನಿಗದಿ ಮಾಡಲಾಗಿತ್ತು.

ಪ್ರತ್ಯೇಕ ಈಜುಗೊಳ: ವಯಸ್ಕರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ಈಜುಕೊಳ ನಿರ್ಮಿಸಲಾಗಿದೆ. 25X25 ಮೀಟರ್‌ ಉದ್ದ, ಅಗಲದ ಈಜುಕೊಳವು ವಯಸ್ಕರ ಬಳಕೆಗೆ ಇದೆ.

ಶಾಲೆಗಳಿಗೆ ರಜೆ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಮೇ ಮಧ್ಯಭಾಗದಿಂದ ಮತ್ತೆ ಶಾಲೆಗಳು ಆರಂಭವಾಗಲಿವೆ. ಆದರೆ, ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಮಾತ್ರ ಇನ್ನೂ ಆರಂಭವಾಗಿಲ್ಲ. ಇದರಿಂದ ಬೇಸಿಗೆಯಲ್ಲಿ ಈಜು ಕಲಿಯಲು ಗ್ರಾಮೀಣ ಪ್ರದೇಶದತ್ತ ಮುಖ ಮಾಡುವ ಪರಿಸ್ಥಿತಿ ತಲೆದೋರಿದೆ.

ಹೆಚ್ಚುತ್ತಿರುವ ಬಿಸಿಲ ಬೇಗೆ: ಜಿಲ್ಲೆಯಲ್ಲಿ 41ರಿಂದ 42 ಡಿಗ್ರಿ ಸೆಲ್ಸಿಯಸ್‌ ಬಿಸಿಲು ಇದೆ. ಮೇ ತಿಂಗಳಲ್ಲಿ ಸೂರ್ಯನ ಪ‍್ರಖರತೆ ಇನ್ನೂ ಹೆಚ್ಚಾಗಿ ಇರಲಿದೆ. ಇಂತಹ ಬಿರುಬಿಸಿಲಿನಲ್ಲಿ ಈಜುಕೊಳದ ಉಪಯುಕ್ತತೆ ಹೆಚ್ಚಿಗೆ ಇರುತ್ತದೆ. ಆದರೆ, ಇದಕ್ಕೆ ಅಧಿಕಾರಿಗಳು ಇನ್ನೂ ಮನಸ್ಸು ಮಾಡದಿರುವುದು ಸೋಜಿಗವಾಗಿದೆ.

ಈಜು ಕಲಿಯಲು ತೊಂದರೆ: ನಗರ ಪ್ರದೇಶದಲ್ಲೇ ಈಜುಕೊಳ ಇದ್ದರೂ ನಗರ ನಿವಾಸಿಗಳಿಗೆ ಅನುಕೂಲವಾಗುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ ಕಾರಣದಿಂದ ಈಜುಕೊಳ ಆರಂಭಿಸಿರಲಿಲ್ಲ. ಈಗಾಗಲೇ ಏಪ್ರಿಲ್‌ ತಿಂಗಳು ಮುಗಿಯುತ್ತಾ ಬಂದಿದೆ. ಈಗಾಗಲೇ ಈಜುಕೊಳವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದ್ದರೆ ಮಕ್ಕಳು ಈಜು ಕಲಿಯಲು ಅನುಕೂಲವಾಗುತ್ತಿತ್ತು.

ಸಿಬ್ಬಂದಿ ಕೊರತೆ: ಈಜುಕೊಳ ನಿರ್ವಹಣೆಗೆ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಒಬ್ಬರು ಲೈಫ್‌ಗಾರ್ಡ್‌ ಮಾತ್ರ ಇದ್ದಾರೆ. ಸೂಪರ್‌ ವೈಸರ್‌, ಸ್ವಚ್ಛತಾ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಇಲ್ಲ. ಎರಡು ವರ್ಷ ಕೋವಿಡ್‌ನಲ್ಲೇ ಕಾಲ ಕಳೆದರೂಸಿಬ್ಬಂದಿ ನೇಮಕ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.

‘ನಗರದ ಪ್ರದೇಶದಲ್ಲಿ ಸುಸಜ್ಜಿತ ಈಜುಕೊಳ ಇದ್ದರೆ ಮಕ್ಕಳು, ವಯಸ್ಕರು, ಮಹಿಳೆಯರು ಈಜು ಕಲಿಯಲು ಸಾಧ್ಯವಾಗುತ್ತದೆ. ಆದರೆ, ಅಧಿಕಾರಿಗಳು ಮಾತ್ರ ಏಪ್ರಿಲ್‌ ತಿಂಗಳು ಮುಗಿಯುತ್ತ ಬಂದರೂ ಇನ್ನೂ ಆರಂಭಿಸಿಲ್ಲ. ಇದರಿಂದ ಈಜುಗಾರರಿಗೆ ಅವಕಾಶ ಇಲ್ಲದಂತಾಗಿದೆ’ ಎನ್ನುತ್ತಾರೆ ಜಯಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್‌.ವಿಶ್ವನಾಥ ನಾಯಕ.

‘ಜಿಲ್ಲಾ ಕ್ರೀಡಾಂಗಣದಲ್ಲಿ ರಸ್ತೆ ಕಾಮಗಾರಿ ಮಾಡುವ ವೇಳೆ ಈಜುಕೊಳ ಸಂಪರ್ಕಿಸುವ ವಿದ್ಯುತ್‌ ತಂತಿ ಸಮಸ್ಯೆ ಆಗಿತ್ತು. ಈಗ ಹೊಸದಾಗಿ ವಿದ್ಯುತ್‌ ಪರಿವರ್ತಕ ಅಳವಡಿಸಲಾಗಿದೆ. ಈಚೆಗೆ ಮಳೆ ಬಂದಿದ್ದರಿಂದ ಈಜುಗೊಳದಲ್ಲಿ ನೀರು ಮಿಶ್ರಣವಾಗಿದೆ. ಇದರಿಂದ ಸಮಸ್ಯೆಯಾಗಿದ್ದು, ಇದೇ ವಾರದಲ್ಲಿ ಸಾರ್ವಜನಿಕರಿಗೆ ಮುಕ್ತಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌ ತಿಳಿಸಿದ್ದಾರೆ.

ಬಿರುಕು ಬಿಟ್ಟ ಕಟ್ಟಡ!
2019ರಲ್ಲಿ ಕಟ್ಟಡ ಉದ್ಘಾಟನೆಯಾಗಿದ್ದರೂ ಆಗಲೇ ಕಟ್ಟಡ ಬಿರುಕು ಬಿಡಲು ಆರಂಭಿಸಿದೆ. ಜಿಲ್ಲಾ ಕ್ರೀಡಾಂಗಣದ ಭೂಮಿ ಕಪ್ಪು ಮಣ್ಣಾಗಿದ್ದು, ಈಜುಕೊಳದ ಕಟ್ಟಡ ಅಲ್ಲಲ್ಲಿ ಬಿರುಕು ಬಿಡಲು ಆರಂಭಿಸಿದೆ.

ಟೈಲ್ಸ್‌ ಮೇಲೆದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದೆ. ನೀರು ಶುದ್ಧೀಕರಣ ಘಟಕ, ಮಹಿಳಾ ಮತ್ತು ಪುರುಷ ಶೌಚಾಲಯ, ಸ್ಟೋರ್‌ ರೂಂ ಪಕ್ಕದಲ್ಲಿ ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ.

ಶೌಚಾಲಯಗಳಲ್ಲಿ ಬಾಗಿಲುಗಳು ಮುರಿದಿವೆ. ಚಿಲಕಗಳು ಸರಿಯಾಗಿ ಕೂಡುತ್ತಿಲ್ಲ. ಮುಂಭಾಗದಲ್ಲಿಯೂ ವಾಹನಗಳು ತೆರಳಲು ಸರಿಯಾದ ಮಾರ್ಗ ಇಲ್ಲ. ಮೂರು ವರ್ಷಗಳಲ್ಲೇ ಕಟ್ಟಡ ದುರಸ್ತಿಗೆ ಬಂದಿದೆ.

***

ಎರಡ್ಮೂರು ದಿನಗಳಲ್ಲಿ ಈಜುಕೊಳ ಆರಂಭಿಸಲಾಗುತ್ತಿದೆ. ಈಚೆಗೆ ಮಳೆ ಬಂದು ಈಜುಕೊಳದಲ್ಲಿ ನೀರು ನಿಂತು ಸಮಸ್ಯೆ ಆಗಿದೆ. ಈಗ ವಿದ್ಯುತ್‌ ಸಮಸ್ಯೆಯನ್ನು ನಿವಾರಿಸಲಾಗಿದೆ
–ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

***

ಬೇಸಿಗೆ ಕಾಲದಲ್ಲಿ ಈಜುಕೊಳ ಆರಂಭ ಮಾಡದಿರುವುದಕ್ಕೆ ನಮ್ಮ ವಿರೋಧವಿದೆ. ಶೀಘ್ರವೇ ಸಾರ್ವಜನಿಕರಿಗೆ ಮುಕ್ತ ಮಾಡುವ ಮೂಲಕ ಅನುಕೂಲ ಮಾಡಿಕೊಡಬೇಕು
–ಬಿ.ಎನ್.ವಿಶ್ವನಾಥ್ ನಾಯಕ, ಜಿಲ್ಲಾ ಅಧ್ಯಕ್ಷ, ಜಯಕರ್ನಾಟಕ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT