ಭಾನುವಾರ, ಏಪ್ರಿಲ್ 2, 2023
32 °C
ಮೌನೇಶ್ವರ ಮಹಾರಾಜಕೀ ಜೈ

ಯಾದಗಿರಿ: ದಕ್ಷಿಣ ಕಾಶಿ ತಿಂಥಣಿಯಲ್ಲಿ ಭವ್ಯ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿರಯಾಗಿರುವ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವದ ಶನಿವಾರ ಸಂಜೆ ಲಕ್ಷಾಂತರ ಭಕ್ತರ ಮಧ್ಯದಲ್ಲಿ ಸಡಗರ, ಸಂಭ್ರಮದಿಂದ ರಥೋತ್ಸವ ಜರುಗಿತು. ಮೌನೇಶ್ವರ ಮಹಾರಾಜಕೀ ಜೈ ಎಂಬ ಜಯಘೋಷ ಮೊಳಗಿದವು.

ರಥೋತ್ಸದ ವೇಳೆ ಬಾಳೆಹಣ್ಣು, ಉತ್ತುತ್ತಿ ಎಸೆದು ಭಕ್ತಿ ಪ್ರದರ್ಶಿಸಿದರು.  

ಜಿಲ್ಲೆ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದಲೂ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿದ್ದರು.

ಜಾತ್ರೆಗೆ ಆಗಮಿಸಿದ ಭಕ್ತರು ಕೃಷ್ಣಾ ನದಿ ದಡದಲ್ಲಿ ಸ್ನಾನ ಮಾಡಿ ಮೌನೇಶ್ವರರ ದರ್ಶನ ಪಡೆದರು.

ಹೊರ ರಾಜ್ಯ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತಿಂಥಣಿಗೆ ಪಾದಯಾತ್ರೆ, ವಾಹನಗಳ ಮೂಲಕ ಆಗಮಿಸಿದ್ದರು. 

ಜಾತ್ರೆಗೆ ಬರುವ ಭಕ್ತರು ದ್ವಿಚಕ್ರ ವಾಹನಗಳ ನಿಲುಗಡೆಗೆ ಸರ್ಕಾರಿ ಪ್ರೌಢಶಾಲಾ ಆವರಣ, ಸುರಪುರ ಮಾರ್ಗವಾಗಿ ಬರುವ ವಾಹನಗಳಿಗೆ ಜಮೀನುದಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿವಿಧ ಜಿಲ್ಲಾ, ತಾಲ್ಲೂಕುಗಳಿಂದ ಸಾರಿಗೆ ವ್ಯವಸ್ಥೆ ಮಾಡಿತ್ತು. ಜಾತ್ರೆಗೆ ಬರುವ ಭಕ್ತರಿಗೆ ಧೂಳಿನಿಂದ ಮುಕ್ತಿಗೊಳಿಸಲು ನೀರಿನ ಟ್ಯಾಂಕರ್‌ಗಳನ್ನು ರಸ್ತೆಗೆ ಬಳಸಿಕೊಳ್ಳಲಾಗುತ್ತಿದೆ.

ಗ್ರಾಮದ ಹೊರವಲಯದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಟೆಂಟ್‌ಗಳನ್ನು ಹಾಕಿ ದಾಸೋಹ ನಡೆಸುತ್ತಿದ್ದರು. ಜಾತ್ರೆಗೆ ಆಗಮಿಸಿದ ಭಕ್ತ ಸಮೂಹ ಮಾದಲಿ ಪ್ರಸಾದ ಸ್ವೀಕರಿಸಿ ಸಂತೃಷ್ಟರಾದರು. ಫೆ.5ರಂದು ಧೂಳಗಾಯಿ ಹಾಗೂ ಗುಹಾಪ್ರವೇಶ ಇರುವುದರಿಂದ ಜಾತ್ರೆಗೆ ಜನರು ಬರುವ ನಿರೀಕ್ಷೆ ಇದೆ.

ಭಕ್ತರಿಗೆ ಸುಲಭವಾಗಿ ದೇವರ ದರ್ಶನ ಪಡೆಯಲು ಅನುಕೂಲ ಕಲ್ಪಿಸಲಾಗಿತ್ತು. ಭಕ್ತರು ದೇವಸ್ಥಾನಕ್ಕೆ ನೀಡುವ ಚಿನ್ನಾಭರಣಗಳು ಮತ್ತು ಹಣ ಸ್ವೀಕರಿಸಲು ದೇವಸ್ಥಾನದ ಕಾರ್ಯಾಲಯಕ್ಕೆ ಖುದ್ದಾಗಿ ನೀಡಿ ರಸೀದಿ ಪಡೆಯುತ್ತಿದ್ದು, ಕಂಡು ಬಂದಿತು.

ಜಾತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾರ್ಗದರ್ಶನಲ್ಲಿ ಡಿವೈಎಸ್‌ಪಿ, ಪಿಎಸ್‌ಐ, ಎಎಸ್‌ಐ, ಮಹಿಳಾ ಪೊಲೀಸ್ ಸಿಬ್ಬಂದಿ, ಗೃಹರಕ್ಷಕದಳ ಸಿಬ್ಬಂದಿ ಸೂಕ್ತ ಬಂದೋಬಸ್ತ್‌ ಮಾಡಿದರು.

ದೇವಸ್ತಾನದ ಮುಂದೆ ತೆಂಗಿನಕಾಯಿ ಒಡೆದು ಹರಿಕೆ ತೀರಿಸಿದರು. ಜಾತ್ರೆಯ ಅಂಗವಾಗಿ ವಿವಿಧ ಸಿಹಿ ಖ್ಯಾದಗಳು ಆಗಮಿಸಿವೆ. ಕಬ್ಬು, ಬೆಂಡು ಬತ್ತಾಸು, ಕಲ್ಲಂಗಡಿ, ಐಸ್‌ಕ್ರಿಸ್‌ ವ್ಯಾಪಾರ ಭರ್ಜರಿಯಾಗಿ ನಡೆಯಿತು. ನವಿಲುಗರಿ ಹಿಡಿದು ಮುಸ್ಲಿಮರು ಅಲ್ಲಲ್ಲಿ ಆರ್ಶಿವಾದ ಮಾಡುತ್ತಿರುವುದು ಕಂಡು ಬಂತು.

ಆರ್ಚಕ ಮೌನೇಶ್ವರ ಸ್ವಾಮೀಜಿ, ಶಾಸಕ ರಾಜೂಗೌಡ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಉಪತಹಶೀಲ್ದಾರ್ ರೇವಪ್ಪ ತೆಗ್ಗಿಮನಿ, ಬಸವರಾಜ ಶೆಟ್ಟಿ, ಸುರಪುರ ಅರಸು ಸಂಸ್ಥಾನದ ರಾಜರು, ದೇವಿಂದ್ರಪ್ಪ ಅಂಬಿಗರ, ಮಲ್ಲಪ್ಪ ದಾದಲಾಪುರ, ಚಂದ್ರಶೇಖರ ಪತ್ತಾರ, ಮೌನೇಶ್ವರ ಪತ್ತಾರ, ವೆಂಕಟೇಶ ಯರಡೋಣಿ, ಮೌನೇಶ ಬೋಯಿ, ಸಂಜೀವನಾಯಕ, ಭೈರಣ್ಣ ಅಂಬಿಗರ, ತಿಪ್ಪಣ್ಣ ಖುರ್ಲಿ, ತಾಲ್ಲೂಕಾಡಳಿತದ ಅಧಿಕಾರಿಗಳು, ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು, ಜನಪ್ರತಿನಿಧಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು