ವಡಗೇರಾ: ತಾಲ್ಲೂಕಿನ ಯಕ್ಷಿಂತಿ ಗ್ರಾಮದ ಬಾಲಕ ರಾಮಯ್ಯ, ಕೂಲಿ ಕೆಲಸ ಮಾಡಿ 79 ವರ್ಷದ ಅಂಧ ಅಜ್ಜಿಯನ್ನು ಸಾಕುತ್ತಿದ್ದಾನೆ.
15 ದಿನಗಳ ಹಿಂದೆ ಅಜ್ಜ ಭೀಮಣ್ಣ ಮೃತಪಟ್ಟಿದ್ದಾರೆ. ರಾಮಯ್ಯ ಅವರ ತಂದೆ ರಂಗಪ್ಪ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ತಾಯಿ, 4 ವರ್ಷಗಳ ಹಿಂದೆಯೇ ಬಿಟ್ಟು ಹೋಗಿ ರಾಯಚೂರಿನಲ್ಲಿ ವಾಸ ಮಾಡುತ್ತಿದ್ದಾರೆ.
ಅಜ್ಜಿಯನ್ನು ನೋಡಿಕೊಳ್ಳುವುದಕ್ಕಾಗಿಯೇ 8ನೇ ತರಗತಿಗೆ ಶಿಕ್ಷಣ ಮೊಟುಕುಗೊಳಿಸಿದ್ದಾನೆ. ತಾನೇ ಅಡುಗೆ ಮಾಡಿ ಅಂಧ ಅಜ್ಜಿ ಬಸಮ್ಮ ಭೀಮಣ್ಣ (79) ಅವರಿಗೆ ಕೈ ತುತ್ತು ತಿನ್ನಿಸುತ್ತಾನೆ.
ಅಜ್ಜಿಗೆ ಸ್ನಾನ ಮಾಡಿಸಿ ಬಟ್ಟೆ ತೊಡಿಸುತ್ತಾನೆ. ನಂತರ ಕೂಲಿ ಕೆಲಸಕ್ಕೆ ತೆರಳುತ್ತಾನೆ. ಕೂಲಿಯಿಂದ ಬಂದ ಹಣದಲ್ಲಿಯೇ ಬದುಕು ಸಾಗಿಸುತ್ತಿದ್ದಾನೆ.
ಐದು ವರ್ಷಗಳ ಹಿಂದೆ ಮಳೆಗೆ ಮನೆ ಕುಸಿದಿದೆ. ಆದ್ದರಿಂದ ಅವರ ಮನೆ ಪಕ್ಕದಲ್ಲಿರುವ ಬೇರೆಯವರಿಗೆ ಸೇರಿದ ತಗಡಿನ ಶೀಟ್ ಹಾಗೂ ಪ್ಲಾಸ್ಟಿಕ್ ಚೀಲಗಳ ಹೊದಿಕೆಯಿಂದ ಕೂಡಿದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಮಳೆ ಬಂದರೆ ನೀರು ಒಳಗಡೆ ನುಗ್ಗುತ್ತದೆ. ಆಗ ರಾತ್ರಿಪೂರ್ತಿ ಜಾಗರಣೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಆಧಾರ್ ಕಾರ್ಡ್ ಬಿಟ್ಟರೆ ಬೇರೆ ದಾಖಲೆಗಳಿಲ್ಲ.
ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ರಾಮಯ್ಯ ಹಾಗೂ ಅಜ್ಜಿಗೆ ಸೂರು ಒದಗಿಸಬೇಕು ಎಂದು ಜನ ಒತ್ತಾಯಿಸುತ್ತಾರೆ.
‘ನನ್ನ ಅಜ್ಜಿಯನ್ನು ಹೇಗಾದರೂ ಕೂಲಿ ಮಾಡಿ ದುಡಿದು ಸಾಕುತ್ತೇನೆ. ಆದರೆ ಇರಲು ಮನೆಯಿಲ್ಲ. ಯಾರಾದರೂ ಸಹಾಯ ಮಾಡಿ ಮನೆ ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ’ ಎಂದು ರಾಮಯ್ಯ ಹೇಳುತ್ತಾನೆ.
ಈ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಅವರಿಗೆ ಪಡಿತರ ಚೀಟಿಯ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕವಾಗಿ ಇರಲು ವ್ಯವಸ್ಥೆ ಮಾಡಲು ಪಿಡಿಒಗೆ ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಮನೆ ಕಟ್ಟಿಸಿಕೊಡಲು ವ್ಯವಸ್ಥೆ ಮಾಡಲಾಗುವದು
-ಮಲ್ಲಿಕಾರ್ಜುನ ಸಂಗ್ವಾರ ಇಒ ವಡಗೇರಾ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.