ಮಂಗಳವಾರ, ನವೆಂಬರ್ 24, 2020
26 °C
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿಕೆ

'ಅತಿವೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ₹15 ಸಾವಿರ ಕೋಟಿ ನಷ್ಟ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ₹15 ಸಾವಿರ ಕೋಟಿ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ಶಾಸಕ ರಾಜೂಗೌಡ ಅವರ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕದ ಬಹುತೇಕ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಒಂದೇ ವರ್ಷದಲ್ಲಿ 3 ಬಾರಿ ಪ್ರವಾಹ ಬಂದು ಈ ಭಾಗದ ರೈತರನ್ನು ಹೈರಾಣಾಗಿಸಿದೆ. 5 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮನೆಗಳು ಬಿದ್ದಿವೆ’ ಎಂದರು.

‘ಬೆಳೆ ನಷ್ಟ ಮತ್ತು ಮನೆ ಬಿದ್ದಿರುವ ಕುರಿತು ಸಮೀಕ್ಷೆ ನಡೆದಿದೆ. ಪ್ರವಾಹ ನಿಂತ ನಂತರ ಹಾನಿ ಕುರಿತು ಸ್ಪಷ್ಟ ವರದಿ ಕೈಸೇರಲಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಂದಾಜು ಮಾಹಿತಿ ನೀಡಿದ್ದಾರೆ. ಈ ವರದಿ ಅಂತಿಮವಲ್ಲ. ಸರ್ವೆ ನಂತರ ಹೆಚ್ಚಾಗಬಹುದು’ ಎಂದು ತಿಳಿಸಿದರು.

‘ಯಾದಗಿರಿ ಜಿಲ್ಲೆಯಲ್ಲಿ 2 ಸಾವಿರ ಹೆಕ್ಟೇರ್ ಭತ್ತ, ಹತ್ತಿ, ತೊಗರಿ, ಸಜ್ಜೆ, ಮೆಣಸಿನಕಾಯಿ ಸೇರಿದಂತೆ ಅಂದಾಜು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 700ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಸುಮಾರು ₹200 ಕೋಟಿಯಷ್ಟು ನಷ್ಟವಾಗಿದೆ’ ಎಂದರು.

‘ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿರುವ ಈ ಭಾಗದ 177 ಗ್ರಾಮಗಳನ್ನು ಸ್ಥಳಾಂತರಿಸಲು ಸಂಸದರು, ಸಚಿವರು, ಶಾಸಕರು ಶಿಫಾರಸ್ಸು ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳಲಿದ್ದಾರೆ. ಮನೆ ಕಳೆದುಕೊಂಡವರಿಗೆ ₹5 ಲಕ್ಷ, ಭಾಗಶಃ ಮನೆಗೆ ₹2 ಲಕ್ಷ ಪರಿಹಾರ ನೀಡಲಾಗುವುದು. ಈಗಾಗಲೇ ಮನೆ ಕಳೆದುಕೊಂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತ್ವರಿತ ಪರಿಹಾರ ₹10 ಸಾವಿರ ಹಾಕುವ ಕಾರ್ಯ ನಡೆದಿದೆ’ ಎಂದರು.

‘ವಿಧಾನ ಪರಿಷತ್ ಮತ್ತು ವಿಧಾನ ಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಶಿರಾದಲ್ಲಿ ಈ ಬಾರಿ ಪಕ್ಷ ದಾಖಲೆ ಗೆಲುವು ಪಡೆಯಲಿದೆ. ಪಕ್ಷದಲ್ಲಿ ಸಂಘ ಪರಿವಾರದವರಿಗೆ ಆದ್ಯತೆ ಇದೆ. ಹಿಂದುಳಿದವರನ್ನು ತುಳಿಯಲಾಗುತ್ತಿದೆ ಎಂಬುದು ತಪ್ಪು ಕಲ್ಪನೆ’ ಎಂದರು.

‘ಶ್ರೀರಾಮುಲು ಅವರಿಂದ ಖಾತೆ ಕಿತ್ತುಕೊಂಡಿಲ್ಲ. ಅಭಿವೃದ್ಧಿ ವೇಗ ಹೆಚ್ಚಿಸಲು ಖಾತೆ ಬದಲಾವಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೂ ಮತ್ತು ಶಾಸಕ ರಾಜೂಗೌಡ ಅವರಿಗೂ ಹೆಚ್ಚಿನ ಸ್ಥಾನಮಾನ ಸಿಗಬಹುದು’ ಎಂಬ ಸುಳಿವು ನೀಡಿದರು.

ಶಾಸಕರಾದ ರಾಜೂಗೌಡ, ರಾಜಕುಮಾರ ಪಾಟೀಲ ತೇಲ್ಕೂರ, ವೆಂಕಟರೆಡ್ಡಿಗೌಡ ಮುದ್ನಾಳ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲರೆಡ್ಡಿ ನಾಯ್ಕಲ್, ತಾಲ್ಲೂಕು ಘಟಕದ ಅಧ್ಯಕ್ಷ ಮೇಲಪ್ಪ ಗುಳಗಿ, ಅಮರಣ್ಣ ಹುಡೇದ, ದೇವರಾಜ ನಾಯ್ಕ, ದೇವಿಂದ್ರ ನಾದ್, ರಾಜಾ ಹನುಮಪ್ಪ ನಾಯಕ ತಾತಾ, ಬಿ.ಎಂ ಹಳ್ಳಿಕೋಟಿ, ಭೀಮಾಶಂಕರ ಬಿಲ್ಲವ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು