ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಿದ್ದು, ಆಗದೇ ಉಳಿದಿದ್ದು- ಭರಪೂರ ಅನುದಾನ: ಹರಿಯಬೇಕಿದೆ ಅಭಿವೃದ್ಧಿ ಹೊಳೆ

ರದ್ದಾಗಿದ್ದ ವೈದ್ಯಕೀಯ ಕಾಲೇಜು ಮರುಮಂಜೂರು, ತಪ್ಪದ ಗುಳೆ
Last Updated 16 ಮಾರ್ಚ್ 2023, 20:45 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಠಾಣಗುಂದಿ, ವಡಗೇರಾ ತಾಲ್ಲೂಕಿನ ಗಡ್ಡೆಸೂಗುರು ಬಳಿ ಭೀಮಾನದಿಗೆ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಿಸುವುದು ಕನಸಾಗಿ ಉಳಿದಿದೆ. ಐದು ವರ್ಷಗಳಲ್ಲಿ ಮತಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ಬಂದಿದ್ದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ ಎನ್ನುವುದು ಕ್ಷೇತ್ರದ ಜನರ ಅಭಿಪ್ರಾಯ.

2018ರಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಶಾಸಕ ವೆಂಕಟರೆಡ್ಡಿ ಮುದ್ನಾಳ, ರದ್ದಾಗಿದ್ದ ವೈದ್ಯಕೀಯ ಕಾಲೇಜುನ್ನು ಮರು ಮಂಜೂರು ಮಾಡಿಕೊಂಡು ಬಂದಿರುವುದು ಹೆಗ್ಗಳಿಕೆ. ಮತಕ್ಷೇತ್ರದ ಶಾಲಾ ಕೋಣೆಗಳ ನಿರ್ಮಾಣ, ದೋರನಹಳ್ಳಿ ಮತ್ತು ವಡಗೇರಾ ಭಾಗದಲ್ಲಿ ನೀರಾವರಿಗೆ ಆದ್ಯತೆ ನೀಡಲಾಗಿದೆ.

ವಡಗೇರಾ ತಾಲ್ಲೂಕಿನ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದಿಂದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಭೀಮಾ ಫ್ಲ್ಯಾಂಕ್‌ ಯೋಜನೆಗೆ ₹300 ಕೋಟಿ ಹಣ, ಯಾದಗಿರಿ ತಾಲ್ಲೂಕಿನ ಮುಂಡರಗಿ ಗ್ರಾಮದ ಬಳಿ ₹2 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೇಜ್, ವಡಗೇರಾ ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ಬಳಿ ₹3 ಕೋಟಿ ವೆಚ್ಚ, ಬಸವಂತಪುರ ಗ್ರಾಮದ ಹತ್ತಿರ ₹5 ಕೋಟಿ ವೆಚ್ಚದಲ್ಲಿ ಬ್ರಿಜ್‌ ಕಂ ಬ್ಯಾರೇಜ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಗ್ರಾಮೀಣ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಗೆ ₹10 ಕೋಟಿ ವೆಚ್ಚದಲ್ಲಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣ, ಆರೋಗ್ಯ ಯೋಜನೆಯಡಿ ಆಸ್ಪತ್ರೆಗಳ ಮೇಲ್ದರ್ಜೆಗೆ, ಜಲಾಧಾರೆ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ, ಯಾದಗಿರಿ ನಗರದಲ್ಲಿ ನಗರೋತ್ಥಾನ ಯೋಜನೆಯಡಿ ಸುಮಾರು ₹90 ಕೋಟಿ ಕಾಮಗಾರಿ, ಮತಕ್ಷೇತ್ರದ ವಿವಿಧ ಕಡೆ ವಿದ್ಯುತ್‌ ಕೇಂದ್ರ ಸ್ಥಾಪನೆ, ಕ್ರೀಡಾಂಗಣ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ನೀಡಲಾಗಿದೆ. ವೈದ್ಯಕೀಯ ಕಾಲೇಜು, ವಿವಿಧ ವಸತಿ ಶಾಲೆ ನಿರ್ಮಾಣ, ಶಾಲಾ–ಕಾಲೇಜುಗಳಿಗೆ ಹೆಚ್ಚುವರಿ ಕೋಣೆ, ಆವರಣಗೋಡೆ ಹೀಗೆ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಅನುದಾನ ನೀಡಲಾಗಿದೆ.

ಪ‍ರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನಗರದಲ್ಲಿ ನಿವೇಶನ ನೀಡಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಒಂದು ವಾರದಲ್ಲಿ ತೀರ್ಮಾನ ಮಾಡಲಾಗುತ್ತಿದೆ ಎಂದು ಶಾಸಕರು ತಿಳಿಸಿದ್ದಾರೆ.

ಶಾಸಕರು ಸಾರ್ವಜನಿಕರಿಗೆ ಸುಲಭವಾಗಿ ಸಿಗುತ್ತಾರೆ ಎನ್ನುವುದು ಬಿಟ್ಟರೆ ಶಿಫಾರಸು ‍ಪತ್ರಗಳನ್ನು ನೀಡುವುದಿಲ್ಲ ಎಂಬ ಆರೋಪವೂ ಇದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ನಿಯಮಿತವಾಗಿ ಕುಂದು ಕೊರತೆ ಸಭೆಗಳನ್ನು ಮಾಡಿಲ್ಲ. ಇದರಿಂದ ಜನರು ಯಾರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಬೇಕು ಎಂದು ಅಸಹಾಯಕರಾಗಿದ್ದಾರೆ.

ತಮ್ಮನ್ನು ಭೇಟಿ ಮಾಡಲು ತೆರಳಿದವರಿಗೆ ಸೌಜನ್ಯದಿಂದ ಮಾತನಾಡಿಸುವುದಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂಬುದು ಜನರ ಆರೋಪ.

ಮತಕ್ಷೇತ್ರವೂ ಜಿಲ್ಲಾ ಕೇಂದ್ರವನ್ನು ಒಳಗೊಂಡಿದ್ದರಿಂದ ಅಭಿವೃದ್ಧಿ ಕೆಲಸಗಳು ಹೆಚ್ಚಾಗಬೇಕು ಎಂಬುದು ಜನರ ಆಶಯ. ಆದರೆ, ಇನ್ನೂ ಅಭಿವೃದ್ಧಿಯಲ್ಲಿ ಹಿಂದುಳಿದ ನಗರವಾಗಿ ಉಳಿದುಕೊಂಡಿದೆ ಎನ್ನುವುದು ಜನರ ಮಾತಾಗಿದೆ.

ಮತಕ್ಷೇತ್ರದ ವಡಗೇರಾ ಜಿಲ್ಲೆಯಲ್ಲೇ ಅತಿ ಹಿಂದುಳಿದ ತಾಲ್ಲೂಕು. ಹೇಳಿಕೊಳ್ಳಲು ಮಾತ್ರ ತಾಲ್ಲೂಕು ಕೇಂದ್ರ. ಇನ್ನೂ ಹಲವು ಕಚೇರಿಗಳು ಅಲ್ಲಿ ಸ್ಥಾಪನೆಯಾಗಿಲ್ಲ. ಕಾಲೇಜು ಕಟ್ಟಡ ಇದ್ದರೂ ಕಾಲೇಜು ಸ್ಥಳಾಂತರಗೊಂಡಿದ್ದರಿಂದ ವಿದ್ಯಾರ್ಥಿನಿಯರು ಅರ್ಧಕ್ಕೆ ಕಾಲೇಜು ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ.

ಮತಕ್ಷೇತ್ರದಲ್ಲಿ ತಮ್ಮ ಸಹೋದರರ ಮೂಲಕ ಗುತ್ತಿಗೆ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ. ಬೇರೆಯವರಿಗೆ ಅವಕಾಶಗಳು ಕಡಿಮೆ. ಅಧಿಕಾರವನ್ನು ತಮ್ಮ ಮನೆಗೆ ಮಾತ್ರ ಸೀಮಿತ ಮಾಡಿಕೊಂಡಿದ್ದಾರೆ ಎನ್ನುವ ಆಪಾದನೆಗಳು ಇವೆ.

***

ಯಾದಗಿರಿ ಮತ ಕ್ಷೇತ್ರದಲ್ಲಿ 10–15ವರ್ಷಗಳಿಂದ ಆಗದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೊಲ, ಹಳ್ಳದ ರಸ್ತೆಗಳು ಅಭಿವೃದ್ಧಿ ಆಗಬೇಕಿದೆ. ಸಾಧ್ಯವಿರುವ ಎಲ್ಲ ಅಭಿವೃದ್ಧಿಗೆ ಪ್ರಯತ್ನಿಸಿದ್ದೇನೆ
ವೆಂಕಟರೆಡ್ಡಿ ಮುದ್ನಾಳ, ಯಾದಗಿರಿ ಮತಕ್ಷೇತ್ರದ ಶಾಸಕ

***

ಅಭಿವೃದ್ಧಿಯೇ ಬಿಜೆಪಿ ಸರ್ಕಾರದ ಮೂಲಮಂತ್ರ. ಶಾಸಕ ಮುದ್ನಾಳ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೋಟ್ಯಂತರ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಉಳಿದವನ್ನು ನಮ್ಮ ಸರ್ಕಾರದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡುತ್ತೇವೆ
ಡಾ.ಶರಣಭೂಪಾಲರಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ

***

ಮತಕ್ಷೇತ್ರದಲ್ಲಿ ಯಾವುದೇ ಕಾರ್ಖಾನೆಗಳಿಲ್ಲದ್ದರಿಂದ ಜನತೆ ಬೆಂಗಳೂರು, ಹೈದರಾಬಾದ್‌, ಗೋವಾ, ಮುಂಬೆ, ಪೂನಾಕ್ಕೆ ಗುಳೆ ತೆರಳುವುದು ತಪ್ಪಿಲ್ಲ. ಹೇಳಿಕೊಳ್ಳುವಂತ ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ. ರಸ್ತೆಗಳು ಹದಗೆಟ್ಟಿವೆ
ಚನ್ನಪ್ಪಗೌಡ ಮೋಸಂಬಿ, ಜೆಡಿಎಸ್‌ ಜಿಲ್ಲಾಧ್ಯಕ್ಷ

***

ಮತಕ್ಷೇತ್ರ ಹಿಂದುಳಿದಿದ್ದು, ಅಭಿವೃದ್ಧಿಗಳು ಕಣ್ಣಿಗೆ ಕಾಣುತ್ತಿಲ್ಲ. ನಗರ ಪ್ರದೇಶದಲ್ಲೇ ಮಹಿಳಾ ಶೌಚಾಲಯಗಳು ಇಲ್ಲ. ಕಾಂಗ್ರೆಸ್‌ ಅವಧಿಯಲ್ಲಿನ ಕಾಮಗಾರಿಗಳನ್ನು ಉದ್ಘಾಟಿಸಲಾಗಿದೆ
ಮಂಜುಳಾ ಗೂಳಿ, ಅಧ್ಯಕ್ಷೆ, ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT