ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ಮಿನಿ ವಿಧಾನಸೌಧಕ್ಕೆ 15 ಎಕರೆ ಮೀಸಲು

Last Updated 28 ಡಿಸೆಂಬರ್ 2018, 14:36 IST
ಅಕ್ಷರ ಗಾತ್ರ

ಯಾದಗಿರಿ: ‘ನೂತನ ತಾಲ್ಲೂಕು ಕೇಂದ್ರ ವಡಗೇರಾ ಗ್ರಾಮದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೆ ಒಟ್ಟು 15 ಎಕರೆ ಭೂಮಿ ನಿಗದಿಪಡಿಸಲಾಗಿದೆ’ ಎಂದು ಉಪ ವಿಭಾಗಾಧಿಕಾರಿ ಡಾ.ಬಿ.ಎಸ್.ಮಂಜುನಾಥ್ ಸ್ವಾಮಿ ತಿಳಿಸಿದರು.

ಸಮೀಪದ ವಡಗೇರಾ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಂತರ ಅವರು ಮಾಹಿತಿ ನೀಡಿದರು.

‘ತಾಲ್ಲೂಕು ರಚನೆಯಾದ ಮೇಲೆ ಅವುಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈಗಾಗಲೇ ಪ್ರತಿ ತಾಲ್ಲೂಕುಗಳಲ್ಲಿ ತಾಲ್ಲೂಕು ಆಡಳಿತ ವ್ಯವಸ್ಥೆಗೆ ಬೇಕಾಗಿರುವ ಪೀಠೋಪಕರಣ ಖರೀದಿಗೆ ₹5 ಲಕ್ಷ ಅನುದಾನ ಒದಗಿಸಲಾಗಿದೆ. ಅದೇ ರೀತಿಯಲ್ಲಿ ಸರ್ಕಾರದ ಆದೇಶದಂತೆ ಮಿನಿವಿಧಾನ ಸೌಧ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ’ ಎಂದು ತಿಳಿಸಿದರು.

‘ಗುರುಮಠಕಲ್‌ ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ ಇಲ್ಲ. ಹಾಗಾಗಿ, ಅಲ್ಲಿ ರೈತರ ಭೂಮಿ ಖರೀದಿಸಲು ಚಿಂತನೆ ನಡೆದಿದ್ದು, ಶಾಸಕರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ವಡಗೇರಾದಲ್ಲಿ ರಸ್ತೆ ಪಕ್ಕದಲ್ಲಿಯೇ 15 ಎಕರೆ ಸರ್ಕಾರಿ ಭೂಮಿ ಇರುವುದರಿಂದ ಮಿನಿವಿಧಾನಸೌಧ ನಿರ್ಮಾಣಕ್ಕೆ ಮೀಸಲಿಡಲಾಗಿದೆ’ ಎಂದು ಮಾಹಿತಿ ನೀಡಿದರು.

ಅಲೆಮಾರಿಗಳ ನಿವೇಶನಕ್ಕೆ ಎರಡು ಎಕರೆ ಭೂಮಿ ಮೀಸಲು: ವಡಗೇರಾ ತಾಲ್ಲೂಕಿನ ಹಂಚನಾಳ ಗ್ರಾಮದಲ್ಲಿ ಅಲೆಮಾರಿಗಳು ಹಚ್ಚಾಗಿ ನೆಲೆಸಿದ್ದು, ಸೂರು ಕಲ್ಪಿಸುವ ನಿಟ್ಟಿನಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು. ಅದಕ್ಕಾಗಿ ಎರಡು ಎಕರೆ ಸರ್ಕಾರಿ ಭೂಮಿಯನ್ನು ಮೀಸಲಿಡಲಾಗುವುದು’ ಎಂದು ಉಪ ವಿಭಾಗಾಧಿಕಾರಿ ಮಂಜುನಾಥ ಸ್ವಾಮಿ ತಿಳಿಸಿದರು.

ಶುಕ್ರವಾರ ಹಂಚನಾಳ ಗ್ರಾಮಕ್ಕೆ ಭೇಟಿ ನೀಡಿ ನಿವೇಶನ ಹಂಚಿಕೆ ಭೂಮಿ ಪರಿಶೀಲಿಸಿದರು.

‘ಹಂಚನಾಳ ಗ್ರಾಮದಲ್ಲಿ ಹಲವು ವರ್ಷಗಳಿಂದ 50ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಈ ಕುಟುಂಬಗಳಿಗ ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿವೇಶನ ಕಂಚಿಕೆಗೆ ಮುಂದಾಗಿದೆ’ ಎಂದರು.

ವಡಗೇರಾ ತಹಶೀಲ್ದಾರ್ ಪ್ರಕಾಶ್ ಹೊಸಮನಿ, ಸಿಬ್ಬಂದಿ ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT