ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗುವಳಿ ಚೀಟಿಗಾಗಿ ‘ತಬರ’ಳಾದ ಅಜ್ಜಿ

Last Updated 6 ಮಾರ್ಚ್ 2018, 19:38 IST
ಅಕ್ಷರ ಗಾತ್ರ

ಮೂಡಿಗೆರೆ: ‘ನಾನು ಸಾಯುವುದರೊಳಗಾಗಿ ನಮ್ಮೆಜಮಾನ್ರು ಮಾಡಿರುವ ಕೃಷಿ ಭೂಮಿಗೆ ಸಾಗುವಳಿ ಚೀಟಿ ನೀಡಬೇಕು.... 30 ವರ್ಷಗಳಿಂದ ಸಾಗುವಳಿ ಚೀಟಿಗೆ ಅಲೆದಾಡಿದರೂ ನಮ್ಗೆ ಮಂಜುರಾತಿ ನೀಡಿಲ್ಲ. ಚೀಟಿ ಕೊಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ' ತಾಲ್ಲೂಕು ಕಚೇರಿ ಬಾಗಿಲಿನಲ್ಲಿ ಕುಳಿತು ಪಿಳಿ ಪಿಳಿ ಕಣ್ಣು ಬಿಡುತ್ತಾ ಹಣ್ಣು ಹಣ್ಣು ಮುದುಕಿಯೊಬ್ಬರು ನಡುಗುವ ದನಿಯಲ್ಲಿ ಸೋಮವಾರ ಅಳಲು ತೋಡಿಕೊಂಡ ಬಗೆ ಇದು.

ಕೋಳೂರು ಗ್ರಾಮದ ಬಡವನದಿಣ್ಣೆಯ ಸುಬ್ಬಮ್ಮ ಧರಣಿ ಕುಳಿತವರು. ಗ್ರಾಮದಲ್ಲಿ ಕಳೆದ 50 ವರ್ಷಗಳ ಹಿಂದೆಯೇ 4 ಎಕರೆ ಕಾಫಿ ತೋಟವನ್ನು ಮಾಡಿದ್ದು, ಅಡಿಕೆಯನ್ನೂ ಬೆಳೆಯಲಾಗಿದೆ. ಆದರೆ ಇದುವರೆಗೂ ಕೃಷಿ ಭೂಮಿಗೆ ಸಾಗುವಳಿ ಚೀಟಿ ನೀಡಿಲ್ಲ. ಹೀಗಾಗಿ ಅವರು ಧರಣಿ ಕುಳಿತಿದ್ದಾರೆ.

ಸಾಗುವಳಿ ಚೀಟಿ ಸಂಬಂಧಿಸಿದ ಸಭೆ ಇದೆ ಎಂಬ ಮಾಹಿತಿ ಅರಿತ ಸುಬ್ಬಮ್ಮ, ಪುತ್ರ ಲಕ್ಷ್ಮಣಗೌಡ ಅವರ ನೆರವಿನಲ್ಲಿ ತಾಲ್ಲೂಕು ಕಚೇರಿಗೆ ಬಂದಿದ್ದರು ‘ತುಂಬಾ ಸಲ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ನಾಲ್ಕೈದು ಬಾರಿ ಸರ್ವೇ ನಡೆಸಿದ್ದಾರೆ. 50 ವರ್ಷಗಳ ಹಿಂದೆಯೇ ಕೃಷಿ ಮಾಡಿರುವುದಕ್ಕೆ ಸಾಕ್ಷಿಯಾಗಿ ಹಳೆಯದಾದ ಕಾಫಿ, ಅಡಿಕೆ ಗಿಡಗಳಿದ್ದು, ನಮ್ಮ ಜಮೀನಿನ ಅಕ್ಕಪಕ್ಕದವರಿಗೆ ಸಾಗುವಳಿ ಚೀಟಿ ನೀಡಿರುವ ಅಧಿಕಾರಿಗಳು ನಮ್ಮ ಹೆಸರಿನಲ್ಲಿ ಯಾವುದೇ ಜಮೀನು ಇಲ್ಲದಿದ್ದರೂ ಸಾಗುವಳಿ ಚೀಟಿ ನೀಡಲು ಮೀನಮೇಷ ಎಣಿಸುತ್ತಿದ್ದಾರೆ’ ಎಂದರು.

‘ಅಜ್ಜಿ ನಿಮಗೆ ವಯಸ್ಸೆಷ್ಟು ಎನ್ನುತ್ತಿದ್ದಂತೆ ನೂರು ದಾಟಿದೆ ಎಂದು ಬೊಚ್ಚುಬಾಯಿ ತೆರೆದ ಅಜ್ಜಿ, ಅದು... ನಾನು ಮದುವೆಯಾದ ಹೊಸದರಲ್ಲಿ ನಮ್ಮನೆರು ಬೆವರು ಸುರಿಸಿ ಮಾಡಿದ ಭೂಮಿ. ಅದಕ್ಕೆ ಸಾಗುವಳಿ ಚೀಟಿ ಬೇಕೆ ಬೇಕು ಎಂದು ಮತ್ತೊಮ್ಮೆ ಬೊಚ್ಚು ಬಾಯಿಯನ್ನು ಪ್ರದರ್ಶಿಸಿದರು!

ಸೋಮವಾರ ಫಾರಂ 53 ಅರ್ಜಿ ವಿಚಾರಣೆ ಸಭೆ ನಿಗದಿಯಾಗಿತ್ತು. ಸಂಜೆವರೆಗೂ ಸಭೆ ಆರಂಭವಾಗದ ಕಾರಣ, ಮುಂಜಾನೆ ಕಚೇರಿಗೆ ಬಂದ ಅಜ್ಜಿ. ರಾತ್ರಿಯವರೆಗೂ ಕಚೇರಿ ಬಾಗಿಲಿನಲ್ಲಿಯೇ ಕುಳಿತಿದ್ದರು. ಕಚೇರಿಗೆ ಬಂದ ಸಾರ್ವಜನಿಕರು ಕನಿಕರ ವ್ಯಕ್ತಪಡಿಸಿದರು.

ಸಂಜೆ 5 ಕ್ಕೆ ಪ್ರಾರಂಭವಾದ ಸಭೆ ರಾತ್ರಿ 8 ಕ್ಕೆ ಮುಕ್ತಾಯವಾಗಿದ್ದು, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಬಗೆಹರಿಯಬೇಕು ಎಂಬ ಕಾರಣಕ್ಕಾಗಿ ಸುಬ್ಬಮ್ಮ ಅವರ ಅರ್ಜಿಯನ್ನು ತಿರಸ್ಕರಿಸಿದ್ದು, ವಿಚಾರ ತಿಳಿದ ಅಜ್ಜಿ ನಿರಾಸೆಯೊಂದಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT