ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ತಡೆಗೆ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ: ಯಾದಗಿರಿ ಜಿಲ್ಲಾಧಿಕಾರಿ

ಸಾರ್ವಜನಿಕರಲ್ಲಿ ಗೊಂದಲ ಬೇಡ: ಜಿಲ್ಲಾಧಿಕಾರಿ ಕೂರ್ಮಾರಾವ್ ಮನವಿ
Last Updated 31 ಮೇ 2020, 16:25 IST
ಅಕ್ಷರ ಗಾತ್ರ

ಯಾದಗಿರಿ: ಕೊರೊನಾ ವೈರಸ್ ಅನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಅದರಂತೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ವಲಸೆ ಕಾರ್ಮಿಕರನ್ನು ನಿಗದಿತ ಅವಧಿಯವರೆಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಿದ ನಂತರ ಅವರನ್ನು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡು ಮನೆ ದಿಗ್ಬಂಧನ (ಹೋಂ ಕ್ವಾರಂಟೈನ್) ಕ್ಕಾಗಿ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

‘ಕೊರೊನಾ ತಡೆಗಾಗಿ ಸರ್ಕಾರ ನಿರ್ದೇಶಿಸಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‍ಓಪಿ) ಅನುಸರಿಸಲಾಗುತ್ತಿದೆ. ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸುವಾಗ ಅವರಿಗೆ ಸ್ಟ್ಯಾಂಪಿಂಗ್ ಮತ್ತು ಹೆಲ್ತ್ ಸ್ಕ್ರೀನಿಂಗ್ ಮಾಡಿ ವೈದ್ಯಕೀಯ ಪ್ರಮಾಣ ಪತ್ರ ನೀಡಲಾಗುತ್ತಿದೆ. ವಲಸೆ ಕಾರ್ಮಿಕರ ಮನೆಗೆ ಪೋಸ್ಟರ್ ಅಂಟಿಸುವ ಜೊತೆಗೆ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳಿಂದ ನಿಗಾವಹಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ರೀತಿಯ ಗೊಂದಲ ಮತ್ತು ಆತಂಕ ಬೇಡ’ ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ಸಾರ್ವಜನಿಕರು ಕೂಡ ಮನೆ ದಿಗ್ಬಂಧನಲ್ಲಿರುವವರಿಗೆ ಯಾವುದೇ ರೀತಿಯ ತೊಂದರೆ ಕೊಡದೆ ಸಹಕರಿಸಬೇಕು. ಅಕ್ಕಪಕ್ಕದ ಮನೆಯವರು ಅಥವಾ ಇತರೆ ಯಾವುದೇ ವ್ಯಕ್ತಿಗಳು ದಿಗ್ಬಂಧನದಲ್ಲಿದ್ದವರ ಮನೆಗೆ ಹೋಗಬಾರದು. ಒಂದು ವೇಳೆ ಮನೆ ದಿಗ್ಬಂಧನದಲ್ಲಿರುವವರು ಮನೆ ಬಿಟ್ಟು ಹೊರಗಡೆ ಓಡಾಡುವುದು ಕಂಡುಬಂದಲ್ಲಿ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಅಥವಾ ಜಿಲ್ಲಾಡಳಿತದ ಕಂಟ್ರೋಲ್ ರೂಂ:08473 253950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ’ ಎಂದು ಸಾರ್ವಜನಿಕರಲ್ಲಿ ಕೋರಿದರು.

ಪಾಸಿಟಿವ್ ಬಂದ ವ್ಯಕ್ತಿಗಳು ಆಸ್ಪತ್ರೆಗೆ ದಾಖಲು: ಜಿಲ್ಲೆಯಲ್ಲಿ ಈಗಾಗಲೇ ನಿಗದಿತ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಸುಮಾರು 15 ದಿನಗಳ ಅವಲೋಕನ ಅವಧಿಯನ್ನು ಪೂರೈಸಿದ ವಲಸೆ ಕಾರ್ಮಿಕರ ಗಂಟಲು ದ್ರವ ಮಾದರಿಯನ್ನು ಮೇ 22 ಮತ್ತು 23 ರಂದು ಪಡೆದು ಮನೆ ದಿಗ್ಬಂಧನಕ್ಕಾಗಿ ಮೇ 30ರಂದು ಕಳುಹಿಸಲಾಗಿದೆ. ಬಿಡುಗಡೆ ಹೊಂದಿದ ಕೆಲವರಲ್ಲಿ ಪಾಸಿಟಿವ್ ವರದಿ ಬಂದಿರುವ ಪ್ರಯುಕ್ತ ತಕ್ಷಣ ಅಂಥವರನ್ನು ಗುರುತಿಸಿ ನಿಗದಿತ ಆಸ್ಪತ್ರೆಗೆ ಕರೆತಂದು ಅವಲೋಕನೆಗಾಗಿ ಇರಿಸಲಾಗಿರುತ್ತದೆ’ಎಂದರು.

ಜಿಲ್ಲಾ ಪಂಚಾಯಿತಿಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ,ಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ ಇದ್ದರು.

***

ಸರ್ಕಾರದ ನಿರ್ದೇಶನದಂತೆ ಹಂತಹಂತವಾಗಿ ಲಾಕ್‍ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಕೊರೊನಾ ವೈರಸ್‍ಗೆ ಔಷಧಿ ಇಲ್ಲ. ಮುಂಜಾಗ್ರತಾ ಕ್ರಮಗಳೇ ಇದಕ್ಕೆ ಪರಿಹಾರ

–ಎಂ.ಕೂರ್ಮಾರಾವ್‌,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT