ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕ್ರಮವಹಿಸಿ’

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೀದ್ ಅಖ್ತರ್ ಸೂಚನೆ
Last Updated 16 ಆಗಸ್ಟ್ 2019, 15:10 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ನೀರು ಬಿಟ್ಟಿರುವುದರಿಂದ ಜಿಲ್ಲೆಯ ನದಿಪಾತ್ರದ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೀದ್ ಅಖ್ತರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

‘ಪ್ರವಾಹದಿಂದಾಗಿ ನದಿಪಾತ್ರದ ಗ್ರಾಮಗಳಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಹಾಗಾಗಿ, ಅಗತ್ಯ ಔಷಧಗಳನ್ನು ಸಂಗ್ರಹಿಸಿ, ಜನರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಪ್ರವಾಹ ಕಡಿಮೆಯಾದ ನಂತರ ಹಳ್ಳಿಗಳಿಗೆ ಭೇಟಿ ನೀಡಿ ಆರೋಗ್ಯ ಶಿಬಿರ ನಡೆಸಬೇಕು’ ಎಂದರು.

‘ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸ್ವಚ್ಛತೆಗೆ ಕ್ರಮ ವಹಿಸಬೇಕು. ಕುಡಿಯುವ ನೀರು ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರವಾಹ ತಗ್ಗಿದ ನಂತರ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಬೇಕು. ಪ್ರವಾಹದಲ್ಲಿ ಮನೆಗಳ ಹಾನಿಯಾದ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಬೇಕು. ಮನೆಗಳ ಹಾನಿ ಸರ್ವೆಯಲ್ಲಿ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಮಾತನಾಡಿ, ‘ಕೃಷ್ಣಾ ಮತ್ತು ಭೀಮಾ ನದಿಗಳಲ್ಲಿ ಪ್ರವಾಹ ಉಂಟಾಗಿ ಜಿಲ್ಲೆಯ ಹಲವು ಸೇತುವೆಗಳು ಮುಳುಗಡೆಯಾಗಿವೆ. ನೀರಿನ ಹರಿವು ಕಡಿಮೆಯಾದ ನಂತರ ಸೇತುವೆಗಳ ಸ್ಥಿತಿಗತಿ ಕುರಿತು ತಿಳಿದುಬರಲಿದೆ. ಪ್ರವಾಹದಿಂದ ಎನ್‍ಡಿಆರ್ಎಫ್ ಮತ್ತು ಎನ್‍ಸಿಆರ್‌ಎಫ್ ನಿಯಮಗಳ ಪ್ರಕಾರ ಜಿಲ್ಲೆಯಲ್ಲಿ ₹ 26.16 ಕೋಟಿ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್., ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT