ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಯಕರ್ತರೇ ಕಾಂಗ್ರೆಸ್‌ ಜೀವಾಳ’

ಬಿಜೆಪಿಯವರು 6 ವರ್ಷಗಳಿಂದ ಬರೀ ಭಾಷಣ ಮಾಡುತ್ತಿದ್ದಾರೆ: ದರ್ಶನಾಪುರ ಟೀಕೆ
Last Updated 9 ಜನವರಿ 2021, 16:10 IST
ಅಕ್ಷರ ಗಾತ್ರ

ಯಾದಗಿರಿ: ‘ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎನ್ನುವವರು ನೀರಾವರಿ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಗಮನಿಸಲಿ. ಕಾಂಗ್ರೆಸ್‌ ಬಲಿಷ್ಠವಾಗಲು ಕಾರ್ಯಕರ್ತರೇ ಜೀವಾಳವಾಗಿದ್ದಾರೆ’ ಎಂದು ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಎಂದು ಹೇಳಿದರು.

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬೆಂಬಲಿತ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ಕಾಂಗ್ರೆಸ್‌ ಸರ್ಕಾರ ನೀರಾವರಿ ಯೋಜನೆ, ಆಣೆಕಟ್ಟು, ಬ್ರಿಜ್‌ ಕಂ ಬ್ಯಾರೇಜ್‌, ವಿದ್ಯುಚ್ಛಕ್ತಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿ ಮಾಡಿದೆ. ಆದರೆ, ಕಳೆದ 6 ವರ್ಷಗಳಿಂದ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.

‘ಕಾರ್ಯಕರ್ತರು ಇದ್ದರೆ ಮಾತ್ರ ನಾವು. ಕಾಂಗ್ರೆಸ್ ಬಡವರ ಪಕ್ಷ. ನೀವು ಬಲ ತುಂಬಿದರೆ ಪಕ್ಷ ಮುಂಬರುವ ತಾ.ಪಂ., ಜಿ.ಪಂ. ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಜನರ ಸೇವೆ ಮಾಡಲು ಸಹಕಾರವಾಗುತ್ತದೆ’ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ಬಿಜೆಪಿ ಸರ್ಕಾರ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಅನುದಾನ ಘೋಷಣೆ ಮಾಡಿಲ್ಲ. ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ಸುಳ್ಳು ಭರವಸೆಗಳನ್ನೇ ನೀಡುತ್ತಾ ಕಾಲ ದೂಡುತ್ತಿದೆ ಎಂದು ಹೇಳಿದರು.

ಮೋದಿ ಮಾತಿಗೆ ಜನ ಮರುಳಾಗಿದ್ದರು. ಆದರೆ, ಅವರು ಅಭಿವೃದ್ಧಿ ಕಾರ್ಯ ಮಾಡದೆ ಸುಳ್ಳನ್ನೇ ಹೇಳುತ್ತಾ ಅಧಿಕಾರ ನಡೆಸುತ್ತಿದ್ದಾರೆ. ವಾಟ್ಸ್‌ ಆ್ಯಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳುಗಳನ್ನು ಜನರು ಇನ್ನಾದರೂ ನಂಬದಿರಲಿ’ಎಂದರು.

ವೇದಿಕೆಯ ಮೇಲೆ ಯುವ ಮುಖಂಡ ವೆಂಕಟರೆಡ್ಡಿ ಅಬ್ಬೆ ತುಮಕೂರು ಅವರನ್ನು ಕರೆಯದಿ ರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಗೊಂದಲ ಉಂಟಾದ ಘಟನೆಯನ್ನು ಪ್ರಸ್ತಾಪಿಸಿ, ‘ಕೆಲವೊಮ್ಮೆ ನನಗೂ ಹೀಗೆ ಆಗಿದೆ. ನಿಷ್ಠಾವಂತರಿಗೆ ಪಕ್ಷದಲ್ಲಿ ಈ ತರ ಆಗುತ್ತದೆ. ಈ ಕುರಿತು ನಾನು ಕ್ಷಮೆ ಕೇಳಿ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ಪಕ್ಷವೇ ನಮಗೆ ಎಲ್ಲ. ಪಕ್ಷಕ್ಕಾಗಿ ಎಲ್ಲರೂ ದುಡಿಯೋಣ’ ಎಂದು ಹೇಳಿದರು.

ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಲಾಯಕ್‌ ಹುಸೇನ್ ಬಾದಲ್‌, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಗೂಳಿ, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರು, ನಗರಸಭೆ ಮಾಜಿ‌ ಸದಸ್ಯ ಮಲ್ಲಣ್ಣ ದಾಸನಕೇರಿ ಮಾತನಾಡಿ, ಮುಂದಿನ ಚುನಾವಣೆಗಳಲ್ಲಿ ಹಿರಿಯ ನಾಯಕರ ಮಾರ್ಗದರ್ಶನದಂತೆ ಎಲ್ಲರೂ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.

ಈ ವೇಳೆ ಯಾದಗಿರಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಬೆಂಬಲದಿಂದ ಗೆದ್ದು ಬಂದ ಗ್ರಾಮ ಪಂ‌ಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

ಬ್ಲಾ‌ಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುದರ್ಶನ ನಾಯಕ, ನಗರಸಭೆ ಮಾಜಿ ಉಪಾಧ್ಯಕ್ಷ ಸ್ಯಾಂಸನ್ ಮಾಳಿಕೇರಿ, ಮಾಣಿಕರೆಡ್ಡಿ ಕುರಕುಂದಿ, ಮರೆಪ್ಪ ಬಿಳ್ಹಾರ, ಬಸ್ಸುಗೌಡ ಬಿಳ್ಹಾರ, ಸೋಮ ಶೇಖರ್ ಮಸ್ಕನಹಳ್ಳಿ, ಕಾರ್ಯಕರ್ತರು, ಮುಖಂಡರುಇದ್ದರು.

***

ಬಿಎಸ್‌ವೈ ಜೈಲಿಗೆ ಹೋಗಿದ್ದು ಯಾಕೆ?

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ಹಿಂದೆ ಜೈಲಿಗೆ ಹೋಗಿದ್ದು ಜನರಿಗಾಗಿ ಹೋರಾಟ ಮಾಡಿದ್ದಕ್ಕಾಗಿಯೇ? ದುಡ್ಡು ಮಾಡಿಕೊಂಡಿದ್ದರು. ಹೀಗಾಗಿ ಜೈಲಿಗೆ ಹೋದರು. ಜೈಲಿಗೆ ಹೋದವರನ್ನೇ ಬಿಜೆಪಿಯವರು ಮತ್ತೆ ಸಿಎಂ ಮಾಡಿದ್ದಾರೆ’ ಎಂದು ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಟೀಕಿಸಿದರು.

‘ಬಿಜೆಪಿ ಪಕ್ಷದವರು ದುಡ್ಡು ಹೊಡೆಯಲು ಪೈಪೋಟಿಯಲ್ಲಿ ತೊಡಗಿದ್ದರು. ಯಡಿಯೂರಪ್ಪ ಹಾಗೂ ರೆಡ್ಡಿ ಬಣದವರು ದುಡ್ಡು ಹೊಡೆದರು’ ಎಂದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರು ವರ್ಷಗಳಲ್ಲಿ ಯಾವ ಜನಪರ ಯೋಜನೆ ಕೈಗೊಂಡಿಲ್ಲ. ರಾಜ್ಯದಲ್ಲಿಯೂ ಸಿಎಂ ಮಗ ವಿಜಯೇಂದ್ರ ಹಸ್ತಕ್ಷೇಪ ಜಾಸ್ತಿಯಾಗಿದೆ ಎಂದು ಶಾಸಕರೇ ದೂರಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಹೀಗಾಗಿ ಇಂಥವರಿಗೆ ಬೆಂಬಲ ನೀಡುತ್ತೀರಾ’ ಎಂದು ಪ್ರಶ್ನಿಸಿದರು.

***

ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿ ಕೇವಲ 5 ನಿಮಿಷದಲ್ಲಿ ಭಾಷಣ ಮುಗಿಸಿ ಹೋಗಿದ್ದಾರೆ. ಅಭಿವೃದ್ಧಿಪರ ಯಾವುದೇ ಘೋಷಣೆ ಮಾಡಿಲ್ಲ. ಜಿಲ್ಲೆ ಬಗ್ಗೆ ಅವರಿಗೆ ಕಾಳಜಿ ಇಲ್ಲ

- ಚನ್ನಾರೆಡ್ಡಿ ಪಾಟೀಲ ತುನ್ನೂರು, ವಿಧಾನ ಪರಿಷತ್‌ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT