ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುಗಲಭೆ: ಕಠಿಣ ಕ್ರಮಕ್ಕೆ ಆಗ್ರಹ

ಮಹಿಳಾ ಕೃಷಿ ಕೂಲಿಕಾರರ ಸಮಾವೇಶದ ಪ್ರತಿನಿಧಿಗಳ ಅಧಿವೇಶನದಲ್ಲಿ 34 ನಿರ್ಣಯ ಮಂಡನೆ
Last Updated 24 ಮೇ 2022, 4:41 IST
ಅಕ್ಷರ ಗಾತ್ರ

ಶಹಾಪುರ: ಇಲ್ಲಿ ಸೋಮವಾರ ನಡೆದ ಮಹಿಳಾ ಕೃಷಿ ಕೂಲಿಕಾರರ 4ನೇ ರಾಜ್ಯಮಟ್ಟದ ಸಮಾವೇಶದ ಪ್ರತಿನಿಧಿಗಳ ಅಧಿವೇಶನದಲ್ಲಿ 34 ನಿರ್ಣಯ ಮಂಡಿಸಲಾಯಿತು.

‘ಕೋಮು ದ್ವೇಷದ ವಿಷಬೀಜ ಬಿತ್ತುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ರಾಜ್ಯ ಸರ್ಕಾರದ ಮೇಲೆ ಪರೋಕ್ಷ ತೆರಿಗೆ ಹೊರೆ ಕಡಿಮೆ ಮಾಡಬೇಕು ಎನ್ನುವುದು ಸೇರಿ ಒಟ್ಟು 34 ನಿರ್ಣಯಗಳನ್ನು ಮಂಡಿಸಲಾಗಿದೆ’ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದಸ್ವಾಮಿ ತಿಳಿಸಿದರು.

‘ಪ್ರತಿಯೊಬ್ಬರಿಗೂ ಪಡಿತರಧಾನ್ಯ ಸಿಗಬೇಕು. ಕುಡಿಯುವ ನೀರಿನ ಕೊರತೆ ಇರುವ ಎಲ್ಲ ಗ್ರಾಮಗಳಿಗೆ ತ್ವರಿತವಾಗಿ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಿ ನಿಜವಾದ ಕಾರ್ಮಿಕರಿಗೆ ಕೂಲಿ ಸಿಗುವಂತಾಗಬೇಕು. ಬೇಸಿಗೆಯಲ್ಲಿ ಮಣ್ಣು ಗಟ್ಟಿಯಾಗಿರುವುದರಿಂದ ಕೂಲಿ ಹಣ ಹೆಚ್ಚಿಸಬೇಕು.

ಉದ್ಯೋಗ ಖಾತ್ರಿಯಲ್ಲಿಯ ಎಂಟು ಗಂಟೆ ಕೆಲಸದ ಆದೇಶ ಹಿಂಪಡೆಯಬೇಕು. ನಿಗದಿತ ಕೆಲಸ ಮುಗಿದ ಬಳಿಕ ಮನೆಗೆ ತೆರಳಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಮಹಿಳೆಯರಿಗೆ ಪುರುಷರಿಗೆ ನೀಡುವಷ್ಟೇ ಕೂಲಿ ಹಣ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಪ್ರತಿ 2 ಕಿ.ಮೀ ಅಂತರದಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಮಹಿಳೆಯರಿಗೆ ಹೆರಿಗೆ ಭತ್ಯೆ ಸೌಲಭ್ಯ ವಿಸ್ತರಿಸಬೇಕು ಎಂದು ಮಹಿಳಾ ಕೃಷಿ ಕೂಲಿಕಾರರ ರಾಜ್ಯ ಉಪ ಸಮಿತಿ ಸಂಚಾಲಕಿ ಮಲ್ಲಮ್ಮ ಕೋಡ್ಲಿ ಆಗ್ರಹಿಸಿದರು.

ಎಲ್ಲ ಗ್ರಾಮಗಳಲ್ಲಿ ಶಿಶು ಪಾಲನಾ ಕೇಂದ್ರ ಸ್ಥಾಪಿಸಬೇಕು. ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಎಲ್ಲ ಮಹಿಳೆಯರಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡಬೇಕು. ಮಾಸಾಶನ ಹೆಚ್ಚಿಸಬೇಕು. ಪ್ರತಿಯೊಂದು ಮದುವೆಯನ್ನೂ ನೋಂದಾಯಿಸಬೇಕು ಎಂದು ಹೇಳಿದರು.

ಕೆಲಸದ ವೇಳೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮಹಿಳೆಯರ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಬೇಕು’ ಎಂದು ಮಹಿಳಾ ಕೃಷಿ ಕೂಲಿಕಾರರ ರಾಜ್ಯ ಉಪ ಸಮಿತಿ ಸಂಚಾಲಕಿ ಮಲ್ಲಮ್ಮ ಕೋಡ್ಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT