ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ನಗರಸಭೆಯಲ್ಲಿ ಅಧ್ಯಕ್ಷರಿಲ್ಲದೇ ಆಡಳಿತ ಅತಂತ್ರ

ಅಧಿಕಾರಿಗಳ ಕೈಯಲ್ಲಿ ಆಡಳಿತ, ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ
Last Updated 8 ಏಪ್ರಿಲ್ 2022, 3:19 IST
ಅಕ್ಷರ ಗಾತ್ರ

ಯಾದಗಿರಿ: ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ 22 ದಿನಗಳು ಕಳೆದಿದ್ದು, ಆಡಳಿತ ಯಂತ್ರ ಅಧಿಕಾರಿಗಳ ಮೇಲೆ ನಡೆಯುತ್ತಿದೆ.

ಅಧ್ಯಕ್ಷರು, ಉಪಾಧ್ಯಕ್ಷರು ಇಲ್ಲದ ಕಾರಣ ಆಡಳಿತ ಅತಂತ್ರವಾಗಿದ್ದು, ಜನ ಸಾಮಾನ್ಯರು ತಮ್ಮಕೆಲಸಗಳಿಗೆ ಪರದಾಡುತ್ತಿದ್ದಾರೆ.

ಪ‍್ರತಿ ವರ್ಷ ಆರ್ಥಿಕ ವರ್ಷ ಮುಗಿಯುವುದರೊಳಗೆ ಬಜೆಟ್‌ ಸಭೆ ಆಗಬೇಕು. ತೆರಿಗೆ ಪರಿಷ್ಕರಣೆ ಸೇರಿದಂತೆ ವಿವಿಧ ಖರ್ಚು ವೆಚ್ಚಗಳಿಗೆ ತಕ್ಕಂತೆ ಬಜೆಟ್‌ ನಿಗದಿ ಮಾಡಬೇಕು. ಆದರೆ, ರಾಜೀನಾಮೆಯಿಂದ ತೆರಿಗೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕೊಕ್ಕೆ ಬಿದ್ದಿದೆ. ಪ್ರತಿ ವರ್ಷ ಮಾರ್ಚ್‌ 31 ರೊಳಗೆ ಬಜೆಟ್‌ ಸಭೆ ಆಗಿ ಮಂಡನೆಯಾಗುತ್ತಿತ್ತು.

ತೆರಿಗೆ ಪಾವತಿದಾರರು ಪ್ರತಿ ವರ್ಷದಂತೆ ಈ ವರ್ಷವೂ ತೆರಿಗೆ ಕಟ್ಟಲು ಕಚೇರಿಗೆ ಬರುತ್ತಿದ್ದಾರೆ. ಆದರೆ, ತೆರಿಗೆ ಪರಿಷ್ಕರಣೆ ಆಗದ ಕಾರಣ ಅರ್ಜಿ ಭರ್ತಿ ಮಾಡಲು ಆಗುತ್ತಿಲ್ಲ. ಇದರಿಂದ ಅವರು ಅಧಿಕಾರಿಗಳ ಜೊತೆ ವಾಗ್ವಾದ ಮಾಡಿಕೊಂಡು ತೆರಳುತ್ತಿದ್ದಾರೆ.

ಖಾತಾ ನಕಲು, ನಲ್ಲಿ ಶುಲ್ಕ ಸೇರಿದಂತೆ ಯಾವ ಆದಾಯವೂ ನಗರಸಭೆಗೆ ಬರದಂತೆ ತಡೆಯಾಗಿದೆ ಎನ್ನುವುದು ನಗರಸಭೆ ಸದಸ್ಯರ ದೂರು.

‘ನಗರಸಭೆಯಲ್ಲಿ ಅಧಿಕಾರಿಗಳ ಆಟ ಆದಂತೆ ಆಗಿದೆ. ಯಾವ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಬಜೆಟ್‌ ಸಭೆ ಆಗಿಲ್ಲ. ಇದರಿಂದ ನಗರಸಭೆಗೆ ಅನುದಾನವೂ ಕುಸಿತ ಕಂಡಿದೆ. ತೆರಿಗೆ ಪರಿಷ್ಕರಣೆಯಾದರೆ ಅನುದಾನವೂ ಹೆಚ್ಚಳವಾಗಲಿದೆ. ಆದರೆ, ಇದು ಆಗುತ್ತಿಲ್ಲ’ ಎನ್ನುತ್ತಾರೆ ನಗರಸಭೆ ಸದಸ್ಯ ಹಣಮಂತ ನಾಯಕ.

ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು, ಬಿಜೆಪಿ 16, ಕಾಂಗ್ರೆಸ್‌ 12, ಜೆಡಿಎಸ್‌ 2, ಪಕ್ಷೇತರ 1 ಸೇರಿದಂತೆ 31 ಸದಸ್ಯರಿದ್ದಾರೆ. ವಿಲಾಸ ಪಾಟೀಲ ಅಧ್ಯಕ್ಷರಾಗಿ, ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್‌ 2020ರ ನವೆಂಬರ್‌ 2ರಂದು ಅಧಿಕಾರ ಸ್ವೀಕರಿಸಿದ್ದರು. ಮೊದಲ ಅವಧಿ 15 ತಿಂಗಳಿಗೆ ನಿಗದಿಯಾಗಿತ್ತು. ಹೀಗಾಗಿ ರಾಜೀನಾಮೆ ನೀಡಿದ್ದರು. ಈಗ ತೆರವಾದ ಸ್ಥಾನಕ್ಕೆ ತೀವ್ರ ಪೈಪೋಟಿ ಹೆಚ್ಚಿದೆ.

13 ತಿಂಗಳು ಉಳಿದ ಅವಧಿ ಇದ್ದು, ಇದಕ್ಕಾಗಿ ಬಿಜೆಪಿ ಸದಸ್ಯರಲ್ಲಿ ಪೈಪೋಟಿ ಶುರುವಾಗಿದೆ. ಪಕ್ಷಕ್ಕಾಗಿ ದುಡಿದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಸದಸ್ಯರು ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಯಾರಿಗೆ ಸೂಚಿಸುತ್ತಾರೊ ಅವರಿಗೆ ಅಧ್ಯಕ್ಷ ಪಟ್ಟ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ನಗರಸಭೆ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಉಪಾಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಪ್ರತಿ ಸಲ ಅಧ್ಯಕ್ಷ ರಾಜೀನಾಮೆ ನೀಡಿದ ನಂತರ ಉಪಾಧ್ಯಕ್ಷರು ಪ್ರಭಾರ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಇಬ್ಬರು ರಾಜೀನಾಮೆ ನೀಡಿದ್ದರಿಂದ ಅಧಿಕಾರಿಗಳಲ್ಲಿ ಅಧಿಕಾರ ನೀಡಿದಂತೆ ಆಗಿದೆ.

***

ಯಾದಗಿರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಏಪ್ರಿಲ್‌ 18ರಂದು ಚುನಾವಣೆ ನಡೆಸಲಾಗುವುದು. ಈಗಾಗಲೇ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗಿದೆ

- ಶಾ ಆಲಂ ಹುಸೇನ್, ಉಪವಿಭಾಗಾಧಿಕಾರಿ

***

ಮಾರ್ಚ್‌ 31ರೊಳಗೆ ಯಾದಗಿರಿ ನಗರಸಭೆ ಬಜೆಟ್‌ ಮಂಡನೆ ಮಾಡಬೇಕಿತ್ತು. ಆದರೆ, ಅದು ಆಗಿಲ್ಲ. ತೆರಿಗೆ ವಿಚಾರವಾಗಿ ಇನ್ನೆರಡು ದಿನಗಳಲ್ಲಿ ಗೊಂದಲ ಪರಿಹಾರವಾಗಲಿದೆ

- ಶರಣಪ್ಪ, ನಗರಸಭೆ ಪೌರಾಯುಕ್ತ

***

ಅಧ್ಯಕ್ಷ, ಉಪಾಧ್ಯಕ್ಷರ ರಾಜೀನಾಮೆಯಿಂದ ಬಜೆಟ್ ಸಭೆ ಆಗಿಲ್ಲ. ತೆರಿಗೆ ಕಟ್ಟಲು ಬರುವ ಸಾರ್ವಜನಿಕರು ಪರದಾಡುತ್ತಿದ್ದಾರೆ. ನಗರಸಭೆ ಆದಾಯ ಕುಸಿತವಾಗಲಿದೆ

- ಹಣಮಂತ ನಾಯಕ, ನಗರಸಭೆ ಸದಸ್ಯ

***

ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯದ ಕಾರಣ ತೆರಿಗೆ ಪರಿಷ್ಕರಣೆ ಆಗಿಲ್ಲ. ಇದರಿಂದ ಜನರು ಪರದಾಡುವಂತೆ ಆಗಿದೆ. ಸ್ಥಳೀಯ ಕೆಲಸಗಳು ಆಗುತ್ತಿಲ್ಲ. ಜನಪ್ರತಿನಿಧಿಗಳು ಇತ್ತ ಗಮನಹರಿಸಿ

- ಬಸವರಾಜ ಪಾಟೀಲ, ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT