ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಚುರುಕು

ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ
Last Updated 8 ಜೂನ್ 2021, 1:44 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮು ಮೃಗಶಿರಾ ಮಳೆ ಆರಂಭಕ್ಕೂ ಮುನ್ನವೇ ಒಳ್ಳೆಯ ಮಳೆ ಬಿದ್ದಿದ್ದರಿಂದಾಗಿ ಮಳೆಯಾಶ್ರಿತ ಪ್ರದೇಶದ ರೈತರು ಕೂಡಾ ಮುಂಗಾರು ಹಂಗಾಮಿನ ಕೃಷಿಗಾಗಿ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಹುಣಸಗಿ ತಾಲ್ಲೂಕಿನಲ್ಲಿ ಹೆಚ್ಚು ಕೃಷ್ಣಾ ಕಾಲುವೆ ನೀರು ಆಧಾರಿತ ಕೃಷಿ ಇದ್ದರೂ ಹುಣಸಗಿ ಹಾಗೂ ಕೊಡೇಕಲ್ಲ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಪ್ರದೇಶವು ಮಳೆಯಾಶ್ರಿತ ಕೃಷಿ ಭೂಮಿಯನ್ನು ಹೊಂದಿದೆ. ಇದರಿಂದಾಗಿ ತಾಲ್ಲೂಕಿನ ಹುಣಸಗಿ ಹಾಗೂ ಕೊಡೇಕಲ್ಲ ರೈತ ಸಂಪರ್ಕ ಕೇಂದ್ರದ ಅಡಿಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದ್ದು, ರೈತರು ಅಗತ್ಯ ದಾಖಲಾತಿಗಳೊಂದಿಗೆ ಬೀಜ ಖರೀದಿಸುವಂತೆ ಹುಣಸಗಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸಿದ್ಧಾರ್ಥ ಪಾಟೀಲ ತಿಳಿಸಿದರು.

ಹುಣಸಗಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 35 ಹಳ್ಳಿಗಳು ಬರುತ್ತವೆ. ಒಟ್ಟು 30,208 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಪ್ರಮುಖವಾಗಿ ತೊಗರಿ ಬೀಜಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಈಗಾಗಲೇ ತೊಗರಿ 27 ಕ್ವಿಂಟಲ್ ಮತ್ತು ಹೆಸರು 9.4 ಕ್ವಿಂಟಲ್ ಸಂಗ್ರಹ ಮಾಡಿಕೊಳ್ಳಲಾಗಿದೆ. ಸೋಮವಾರ ಒಂದೇ ದಿನ 105 ರೈತರಿಗೆ ಬೀಜ ನೀಡಲಾಗಿದೆ ಎಂದು ಕೃಷಿ ಅಧಿಕಾರಿ ಸಿದ್ದಾರ್ಥ ಪಾಟೀಲ ತಿಳಿಸಿದರು.

ಅದರಂತೆ ಕೊಡೇಕಲ್ಲ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 37 ಹಳ್ಳಿಗಳು ಬರುತ್ತಿದ್ದು, 21,300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೊಡೇಕಲ್ಲ ಆರ್.ಎಸ್.ಕೆ ಅಧಿಕಾರಿ ರಾಮನಗೌಡ ಪಾಟೀಲ ತಿಳಿಸಿದರು.

ಇಲ್ಲಿ ಪ್ರಮುಖವಾಗಿ ತೊಗರಿ ಕ್ಷೇತ್ರವೇ ಹೆಚ್ಚಾಗಿದ್ದು, 17 ಸಾವಿರ ಹೆಕ್ಟೇರ್ ತೊಗರಿ, 3500 ಹೆಕ್ಟೇರ್ ಸಜ್ಜೆ, 25 ಹೆಕ್ಟೇರ್ ಹೆಸರು, 370 ಸೂರ್ಯಕಾಂತಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದಕ್ಕೆ ತಕ್ಕಂತೆ ಬೀಜ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ 27 ಕ್ವಿಂಟಲ್ ತೊಗರಿ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದ್ದು, ಸೋಮವಾರ 60ಕ್ಕೂ ಹೆಚ್ಚು ರೈತರಿಗೆ ಬೀಜ ವಿತರಿಸಿರುವುದಾಗಿ ತಿಳಿಸಿದರು.

ಅಲ್ಲದೇ 5 ಕ್ವಿಂಟಲ್ ಹೆಸರು, 5 ಕ್ವಿಂಟಲ್ ಸಜ್ಜೆ, 8 ಕ್ವಿಂಟಲ್ ಸೂರ್ಯಕಾಂತಿ ಬೀಜಗಳನ್ನು ಕೂಡಾ ತರಿಸಿಕೊಳ್ಳಗಿದ್ದು, ಕಳೆದ ಎರಡು ದಿನಗಳ ಹಿಂದೆ ಮಳೆಯಾಗಿದ್ದರಿಂದಾಗಿ ರೈತರು ಬಿತ್ತನೆ ಬೀಜ ಪಡೆಯಲು ಕೇಂದ್ರದತ್ತ ಆಗಮಿಸುತ್ತಿದ್ದಾರೆ ಎಂದು ವಿವರಿಸಿದರು.

ಈಗಾಗಲೇ ಜಮೀನುಗಳಲ್ಲಿ ನೇಗಿಲು ಹೊಡೆದು ಹೊಲವನ್ನು ಹದಗೊಳಿಸಲಾಗಿದ್ದು, ಬಿತ್ತನೆಗೆ ಮುಂದಾಗುತ್ತೇವೆ ಎಂದು ಹುಣಸಗಿಯ ಲಕ್ಷ್ಮಿಕಾಂತ ಜಮದರಖಾನ ಹಾಗೂ ಗುಂಡಲಗೇರಾ ಗ್ರಾಮದ ಶಾಂತಗೌಡ ಕವಿತಾಳ, ಶಂಕರಗೌಡ ಶ್ರೀನಿವಾಸಪುರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT