ಶಹಭಾಸ್‌ ಅಬ್ಬಾಸ್‌! ‘ಪಾಲಕ್‌ ಪಟೇಲ್‌’ ಎಂದೇ ಖ್ಯಾತಿ ಪಡದ ರೈತ

ಭಾನುವಾರ, ಮಾರ್ಚ್ 24, 2019
34 °C
ಎರಡೇ ಎಕರೆಯಲ್ಲಿ ಸ್ವಾವಲಂಬಿ ಜೀವನ

ಶಹಭಾಸ್‌ ಅಬ್ಬಾಸ್‌! ‘ಪಾಲಕ್‌ ಪಟೇಲ್‌’ ಎಂದೇ ಖ್ಯಾತಿ ಪಡದ ರೈತ

Published:
Updated:
Prajavani

ವಡಗೇರಾ: ಬರದ ಬವಣೆ, ಅಂತರ್ಜಲ ಕುಸಿತ, ಬತ್ತಿಹೋದ ಬೋರ್‌ವೆಲ್‌, ಬಾವಿಗಳು... ಹೀಗೆ ಹತ್ತಾರು ಸಮಸ್ಯೆಗಳ ಮಧ್ಯೆ ಜಿಲ್ಲೆಯ ರೈತರು ತತ್ತರಿಸಿಹೋಗಿದ್ದಾರೆ. ಆದರೆ, ಇಲ್ಲೊಬ್ಬ ರೈತ ಬರಡು ಭೂಮಿಯಲ್ಲೂ ಅಮೃದ್ಧ ತರಕಾರಿ ಬೆಳೆಯುವ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ.

ಹೌದು. ತಾಲ್ಲೂಕಿನ ಉಳ್ಳೆಸುಗುರ ಗ್ರಾಮದ ರೈತ ಅಬ್ಬಾಸ್‌ಅಲಿ ಚಾಂದಸಾಬಖಾನ್ ಪಟೇಲ್‌ ಅವರ ಹೊಲಕ್ಕೆ ಒಮ್ಮೆ ಬರಬೇಕು ನೀವು. ತಮ್ಮ ಪಾಲಿಗೆ ಬಂದ ಕೇವಲ ಎರಡು ಎಕರೆ ಜಮೀನಿನಲ್ಲಿ ಇವರು ವಿವಿಧ ತರಕಾರಿ, ಸೊಪ್ಪುಗಳನ್ನು ಬೆಳೆಯುವ ಮೂಲಕ ಸ್ವಾವಲಂಬನೆ ಸಾಧಿಸಿದ್ದಾರೆ. ಈವರೆಗೆ ಅವರು ಬೆಳೆದ ಪ್ರತಿಯೊಂದು ಬೆಳಯೂ ಕೈಹಿಡಿದಿದೆ!

‘ನಾನು ಬೆಳೆಗಳನ್ನು ಕೂಸಿನಂತೆ ಜೋಪಾನ ಮಾಡಿದೆ, ಅದು ನನ್ನನ್ನು ಕೂಸಿನಂತೆ ಜೋಪಾನ ಮಾಡುತ್ತಿದೆ’ ಎನ್ನುವ ಅಬ್ಬಾಸ್‌ಅಲಿ; ಕೃಷಿ ಬಗ್ಗೆ ತಮಗೆ ಇರುವ ಕಾಳಜಿಯನ್ನು ತೋರಿಸಿದ್ದಾರೆ.

ಇದೇ ಹೊಲದಲ್ಲಿ ಅವರು ಒಂದು ದಶಕದಿಂದ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬದನೆ, ಮೆಂತ್ಯಸೊಪ್ಪು, ಕೊತ್ತಂಬರಿ, ಮೂಲಂಗಿ ಇವುಗಳನ್ನು ಹೆಚ್ಚಾಗಿ ಬೆಳೆದಿದ್ದಾರೆ. ಪ್ರತಿ ಬಾರಿ ಒಂದಲ್ಲ ಒಂದು ಬೆಳೆ ಕೈ ಹಿಡಿಯುತ್ತಿದೆ. ಈ ರೀತಿ ಮಿಶ್ರ ಬೇಸಾಯ ಮಾಡಿದ್ದರಿಂದ ಒಂದು ಬೆಳೆಯ ಬೆಲೆ ಕುಸಿದಾಗ ಇನ್ನೊಂದು ಅವರ ಸಹಾಯಕ್ಕೆ ಬಂದಿದೆ.

ಅಬ್ಬಾಸ್‌ಅಲಿ ಅವರ ಮುಖ್ಯ ಬೆಳೆ ಪಾಲಕ್‌ ಸೊಪ್ಪು. ಅವರು ಪಾಲಕ್‌ ಬೆಳೆ ಹಾಕಲು ಶುರು ಮಾಡಿದ ಮೇಲೆ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತ ಸಾಗಿದೆ.

‘ನಮ್ಮ ತಂದೆ ಸಹ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದರು. ಅವರಿಂದ ಬಂದ ಬಳುವಳಿಯಂತೆ ತರಕಾರಿ ಬೆಳೆ ಬೆಳೆಯು ಪದ್ಧತಿ ರೂಢಿಸಿಕೊಂಡೆ. ಅಣ್ಣ ಅಲ್ಲಿಸಾಬ್‌ ಜೊತೆಗೂಡಿ ಬೋರ್‌ವೆಲ್ ಕೊರೆಯಿಸಿದೆ. ಈಗ ಒಂದು ಎಕರೆ ಜಮೀನಿನಲ್ಲಿ ವಿವಿಧ ಬೆಳೆಗೆ ₹ 2 ಲಕ್ಷ ವೆಚ್ಚ ಮಾಡಿದ್ದೇನೆ. ಎಲ್ಲ ವೆಚ್ಚ ತೆಗೆದು ನಿವ್ವಳ ಲಾಭ ₹ 3 ಲಕ್ಷ ಬಂದಿದೆ’ ಎನ್ನುತ್ತಾರೆ ಅವರು.

‘ಸೊಪ್ಪಿನ ಬೆಳೆ ಕೇವಲ 40 ರಿಂದ 50 ದಿನಗಳಲ್ಲಿ ಕೈಗೆ ಬರುತ್ತದೆ. ಒಮ್ಮೆ ಕಟಾವು ಆರಂಭಿಸಿದರೆ ನಿರಂತರವಾಗಿ ವಾರದಲ್ಲಿ ಎರಡು ದಿನ ಕಟಾವ್ ಮಾಡಿ ಮಾರುಕಟ್ಟೆಗೆ ಕಳಹಿಸುತ್ತವೆ. ನಮ್ಮ ಕುಟುಂಬದವರು ಮಾತ್ರ ಇದರಲ್ಲಿ ಭಾಗಿಯಾಗುತ್ತೇವೆ. ಆಳು– ಕಾಳಿನ ಅವಶ್ಯಕತೆಯೂ ಇಲ್ಲ’ ಎನ್ನುವುದು ಅವರ ಅನುಭವದ ನುಡಿ.

ಭೂಮಿಯನ್ನು ಹದಗೊಳಿಸಿ, ಉಳುಮೆ ಮಾಡುವ ಸಮಯದಲ್ಲಿಯೇ ತಿಪ್ಪೆ ಗೊಬ್ಬರವನ್ನು ಹಾಕುವುದು ಅಬ್ಬಾಸ್‌ ಅವರು ಪದ್ಧತಿ. ನಂತರದಲ್ಲಿ ಬೆಳೆಗೆ ಅವಶ್ಯಕತೆ ಬಿದ್ದಲ್ಲಿ ರಸಗೊಬ್ಬರ ಹಾಕುತ್ತಾರೆ. ರೋಗದ ಬಾಧೆ ಬರದಂತೆ ಎಚ್ಚರಿಕೆವಹಿಸಲು ಕೃಷಿ ಅಧಿಕಾರಿಗಳ ಸಹಾಯದಂತೆ ಔಷಧಿ ಸಿಂಪಡಣೆ ಮಾಡುತ್ತಾರೆ.

ತೋಟಗಾರಿಕೆಯಲ್ಲಿ ಹೆಚ್ಚಿನ ಶ್ರಮ ಹಾಗೂ ಕಾಳಜಿ ವಹಿಸಬೇಕಾಗುತ್ತದೆ. ಆದ್ದರಿಂದ ರೈತರು ಹತ್ತಿ, ಭತ್ತ ಮತ್ತು ಶೇಂಗಾ ಬೆಳೆಗಳತ್ತ ವಾಲುತ್ತಾರೆ. ಆದರೆ, ಲಾಭದಾಯಕ ಬೆಳೆಗಳನ್ನು ಬೆಳೆದರೆ ಮಾತ್ರ ರೈತ ಬದುಕಲು ಸಾಧ್ಯ ಎನ್ನುವುದು ಅವರ ಅನಿಸಿಕೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಬರುವ ತರಕಾರಿ ಬೆಳೆಯು ಯಾವತ್ತೂ ರೈತರನ್ನು ಮೋಸ ಮಾಡುವುದಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.

*
ತೋಟಗಾರಿಕೆ ಬೆಳೆಗೆ ಹೆಚ್ಚು ಶ್ರಮ ಹಾಕುವುದು ಅಗತ್ಯ. ಕಾಲಕ್ಕೆ ತಕ್ಕಂತೆ ತರಕಾರಿ ಬೆಳೆಯುವ ಜಾಣ್ಮೆಯನ್ನು ನಾವು ಮೈಗೂಡಿಸಿಕೊಂಡರೆ ನಷ್ಟ ಆಗುವುದಿಲ್ಲ.
-ಅಬ್ಬಾಸ್‌ಅಲಿ ಚಂದಸಾಬ್‌ಖಾನ್ ಪಟೇಲ್, ರೈತ

ಮಾಹಿತಿಗಾಗಿ 8660547112 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !