ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ನಷ್ಟದ ಮಧ್ಯೆಯೂ ಭತ್ತ ನಾಟಿಗೆ ಸಿದ್ಧತೆ

ಕೃಷ್ಣಾ ಅಚ್ಚುಕಟ್ಟು ಪ್ರದೇಶ; ಕಾಲುವೆಗೆ ನೀರು ಬಿಡಲು ಆಗ್ರಹ
Last Updated 16 ಜುಲೈ 2022, 4:39 IST
ಅಕ್ಷರ ಗಾತ್ರ

ಹುಣಸಗಿ: ಎರಡು ಭಾರಿ ಬೆಲೆ ಕುಸಿತ, ರಸಗೊಬ್ಬರ ಬೆಲೆ ಏರಿಕೆ ಮಧ್ಯೆಯೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹುಣಸಗಿ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕಿನ ರೈತರು ಭತ್ತ ನಾಟಿಗೆ ಅಣಿಯಾಗುತ್ತಿದ್ದಾರೆ. 3 ವಾರಗಳ ಹಿಂದೆ ಹಾಕಿದ್ದ ಭತ್ತದ ಸಸಿಗಳು ಚೆನ್ನಾಗಿ ಬಂದಿದ್ದು, ಕಾಲುವೆಗೆ ನೀರು ಬಿಡುವದಕ್ಕಾಗಿ ಕಾದು ಕುಳಿತಿದ್ದೇವೆ ಎಂಬ ಮಾತುಗಳು ರೈತ ವಲಯದಲ್ಲಿ ಕೇಳಿ ಬರುತ್ತಿವೆ.

ಸಾಕಷ್ಟ ನಷ್ಟ ಅನುಭವಿಸುತ್ತಿದ್ದರೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬಹುತೇಕ ರೈತರು ಅನಿವಾರ್ಯವಾಗಿ ಭತ್ತ ಬೆಳೆಯುತ್ತಿದ್ದೇವೆ. ಅದನ್ನು ಬಿಟ್ಟು ಪರ್ಯಾಯ ಬೆಳೆಗೆ ಹೋಗಲು ನಮ್ಮ ಭೂಮಿ ಸದೃಢವಾಗಿಲ್ಲ ಎಂದು ದ್ಯಾಮನಹಾಳ ಗ್ರಾಮದ ರೈತ ಲಕ್ಷೀಕಾಂತ ಕುಲಕರ್ಣಿ ಹೇಳುತ್ತಾರೆ.

‘ಜಮೀನಿನ ಮೇಲ್ಬಾರುವ ರೈತರು ಭತ್ತ ನಾಟಿ ಮಾಡುತ್ತಾರೆ. ಇದರಿಂದಾಗಿ ನಮ್ಮ ಜಮೀನುಗಳಲ್ಲಿ ಅನಿವಾರ್ಯವಾಗಿ ಜವಳು ಉಂಟಾಗುತ್ತದೆ. ಬೇರೆ ಯಾವುದೇ ಫಸಲು ಬೆಳೆದರೂ ಅದು ಹುಲುಸಾಗಿ ಬೆಳೆಯುವದಿಲ್ಲ. ಆದ್ದರಿಂದ ಭತ್ತ ನಮಗೆ ಅನಿವಾರ್ಯ‘ ಎಂದು ಕೆಲ ರೈತರು ಹೇಳಿದರು.

ಜೂನ್ ಆರಂಭದಲ್ಲಿಯೇ ಎರಡು ಬಾರಿ ಟಿಲ್ಲರ್ ಹೊಡೆದು ಹೊಲ ಹದ ಮಾಡಿಟ್ಟುಕೊಂಡಿದ್ದೇವೆ. ಜುಲೈ ಮೂರನೇ ವಾರದಲ್ಲಿ ಕಾಲುವೆಗೆ ನೀರು ಬರುವ ನಿರೀಕ್ಷೆಯಿದ್ದು, ನೀರು ಬಂದ ತಕ್ಷಣವೇ ಪಟ್ಲರ್ ಹೊಡೆದು ನಾಟಿ ಮಾಡುತ್ತೇವೆ ಎಂದು ವಜ್ಜಲ ಗ್ರಾಮದ ಬಸವರಾಜ ಮೇಟಿ ಹಾಗೂ ಶ್ರೀಶೈಲ ದೇವತಕಲ್ಲ ತಿಳಿಸಿದರು.

ಕಳೆದ ಬಾರಿ ಬೆಲೆ ಕುಸಿತದಿಂದಾಗಿ ಲೀಜ್ ಮಾಡುವರು ಕೂಡಾ ನಷ್ಟ ಅನುಭವಿಸಿದ್ದು, ಈ ಬಾರಿ ಭತ್ತದ ಕೃಷಿಯಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುತ್ತೀದ್ದೇವೆ ಎಂದು ಯುವ ರೈತ ನಿಂಗನಗೌಡ ಬಸನಗೌಡ್ರ ತಮ್ಮದೇ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT