ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ‌ | ನಾರಾಯಣಪುರ ಬಸವಸಾಗರ ಡ್ಯಾಂ ಬಳಿ ನಿರ್ಮಾಣವಾಗದ ಉದ್ಯಾನ

ಪ್ರಸ್ತಾವನೆಯಲ್ಲೇ ಉಳಿದ ಆಲಮಟ್ಟಿ ಡ್ಯಾಂ ಮಾದರಿ ಗಾರ್ಡನ್‌
Published 23 ಆಗಸ್ಟ್ 2024, 4:44 IST
Last Updated 23 ಆಗಸ್ಟ್ 2024, 4:44 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಬಳಿ ಇರುವ ಜಲಾಶಯದ ಬಳಿ ಆಲಮಟ್ಟಿಯ ಮಾದರಿಯಂತೆ ಉದ್ಯಾನವನ ನಿರ್ಮಾಣ ಮಾಡಬೇಕು ಎಂಬ ಕೂಗು ಹಲವಾರು ವರ್ಷಗಳಿದ್ದರೂ ಅದು ಇನ್ನೂ ಅನುಷ್ಠಾನವಾಗುತ್ತಿಲ್ಲ.

ಉದ್ಯಾನ ವನ ನಿರ್ಮಾಣ ಪ್ರಸ್ತಾವನೆಯಲ್ಲೇ ಕೊಳೆಯುತ್ತಿದ್ದು, ಅನುಮೋದನೆ ಇಲ್ಲಿಯವರೆಗೆ ಸಿಕ್ಕಿಲ್ಲ. ಇದರಿಂದ ಜಿಲ್ಲೆಯ ಜನರ ಆಶೆ ಇನ್ನೂ ಜೀವಂತವಾಗಿದೆ.

ನಾಲ್ಕು ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೃಷ್ಣಾ ನದಿಯಿಂದ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು ಬಾಗಿನ ಅರ್ಪಿಸಿದರು. ಈ ಮೂಲಕ ಉದ್ಯಾನವನ ನಿರ್ಮಾಣ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ ಬಂದಿದೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಫಲಾನುಭವಿ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ವಿಜಯಪುರ, ಕಲಬುರಗಿಯ ಅಂದಾಜು 6.22 ಲಕ್ಷ ಹೆಕ್ಟೇರ್ ಕೃಷಿ ಜಮೀನುಗಳಿಗೆ ಜಲಾಶಯದಿಂದ ನೀರಾವರಿ ಸೌಲಭ್ಯ ಒದಗಿಸಲಿದೆ. ಪ್ರಮುಖವಾಗಿ ಎಡ ಹಾಗೂ ಬಲದಂಡೆ ಮುಖ್ಯ ಕಾಲುವೆಗಳು ಹಾಗೂ ಇತರೆ ಏತ ನೀರಾವರಿ ಯೋಜನೆಗಳ ಕಾಲುವೆ ಜಾಲಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸುತ್ತದೆ. ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಮುಂಭಾಗದ ಕೃಷ್ಣಾ ನದಿ ತೀರದಲ್ಲಿನ ನಗರ, ಪಟ್ಟಣಗಳಿಗೆ ಕುಡಿಯುವ ನೀರು ಜೀವಜಲ ಪೂರೈಕೆಗೆ ಪ್ರಮುಖ ಜಲಮೂಲವಾಗಿದೆ.

ಹೀಗಾಗಿ ಉದ್ಯಾನ ವನ ನಿರ್ಮಾಣಕ್ಕೆ ಸಾಕಷ್ಟು ಜಾಗ ಇದೆ. ಹಲವಾರು ವರ್ಷಗಳ ಕೂಗು ಇದಾಗಿದ್ದರೂ ಸಂಬಂಧಿತರ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳಲ್ಲಿ ನಿರ್ಲಕ್ಷ್ಯದಿಂದ ಅನುಷ್ಠಾನವಾಗುತ್ತಿಲ್ಲ ಎನ್ನುವ ಆರೋಪ ಕನ್ನಡಪರ, ಸಾಮಾಜಿಕ ಸಂಘಟಕರ ದೂರಾಗಿದೆ.

‘ಮೂರು ಜಿಲ್ಲೆಗಳಿಗೆ ಪ್ರವಾಸಿ ತಾಣವಾಗಿರುವ ಜಲಾಶಯದ ಬಳಿ ಉದ್ಯಾನವನ ನಿರ್ಮಾಣ ಆಗುತ್ತದೆ ಎನ್ನುವ ಭರವಸೆಯಲ್ಲೇ ಕಾಲ ಕಳೆಯುತ್ತಿದ್ದೇವೆ. ಆದರೂ ಇನ್ನೂ ಕಾಮಗಾರಿ ಚಾಲನೆಯಾಗುತ್ತಿಲ್ಲ. ಕೂಡಲೇ ನಿರ್ಮಾಣಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಮಾಡಿಕೊಳ್ಳಬೇಕು’ ಎನ್ನುತ್ತಾರೆ ನಾರಾಯಣಪುರ ನಿವಾಸಿ ಬಸವರಾಜ ಕಟ್ಟಿಮನಿ.

ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಸಾರ್ವಜನಿಕರು ಮತ ನೀಡಿ ಆಯ್ಕೆ ಮಾಡುವ ಪಟ್ಟಿಯಲ್ಲಿ ಬಸವಸಾಗರ ಜಲಾಶಯವೂ ಒಂದಾಗಿದೆ. ಹೀಗಾಗಿ ಅಭಿವೃದ್ಧಿ ಜೊತೆಗೆ ಉದ್ಯಾನವನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದು ಜಿಲ್ಲೆಯ ಪ್ರವಾಸಿಗರ ಆಗ್ರಹವಾಗಿದೆ.

ಜಲಾಶಯದ ಬಳಿ ಉದ್ಯಾನವನ ನಿರ್ಮಾಣದ ಬಗ್ಗೆ ನಾನು ಸುರಪುರ ಶಾಸಕ ರಾಜಾ ವೇಣುಗೋಪಾಲನಾಯಕ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅನುಮೋದನೆ ನಂತರ ಇಲ್ಲಿಯೂ ಆಲಮಟ್ಟಿ ಮಾದರಿಯ ಐತಿಹಾಸಿಕ ಪ್ರವಾಸಿ ತಾಣ ಮಾಡಲಾಗುವುದು

– ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವರಿ ಸಚಿವ

ನಾರಾಯಣಪುರ ಬಸವಸಾಗರ ಜಲಾಶಯದ ಬಳಿ ಸುಂದರ ಉದ್ಯಾನ ನಿರ್ಮಾಣ ಮಾಡಲು ₹60 ಕೋಟಿಗೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಜಲಾಶಯದ ಎಡಭಾಗದಲ್ಲಿ 65ಕ್ಕೂ ಹೆಚ್ಚು ಎಕರೆ ವಿಸ್ತಿರ್ಣ ಪ್ರದೇಶವಿದೆ

–ವಿಜಯಕುಮಾರ ಅರಳಿ ಎಇ ಆಣೆಕಟ್ಟು ಗೇಟ್‌ ಉಪವಿಭಾಗ

ಮೂರು ಜಿಲ್ಲೆಗಳ ಪ್ರವಾಸಿ ತಾಣ

ನಾರಾಯಣಪುರ ಬಸವಸಾಗರ ಜಲಾಶಯವೂ ಮೂರು ಜಿಲ್ಲೆಗಳ ಪ್ರವಾಸಿ ತಾಣವಾಗಿದೆ. ಯಾದಗಿರಿ ರಾಯಚೂರು ವಿಜಯಪುರ ಗಡಿಯನ್ನು ಹೊಂದಿದ್ದು ಆಲಮಟ್ಟಿ ಮಾದರಿಯಲ್ಲಿ ಇಲ್ಲಿಯೂ ಉದ್ಯಾನ ವನ ನಿರ್ಮಿಸಿದರೆ ಸುಂದರ ಪ್ರವಾಸಿ ತಾಣವಾಗಿ ಹೊರ ಹೊಮ್ಮಲಿದೆ. ವಿಜಯಪುರ ಜಿಲ್ಲೆಯ ತಾಳಿಕೋಟಿ ರಾಯಚೂರು ಜಿಲ್ಲೆಯ ಲಿಂಗಸುಗೂರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿಗೆ ಜಲಾಶಯ ಹತ್ತಿರವಿದ್ದರಿಂದ ಕುಟುಂಬ ಸಮೇತ ಸ್ನೇಹಿತರ ಜೊತೆಗೆ ಆಗಮಿಸುತ್ತಿದ್ದಾರೆ. ಭಾನುವಾರ ಸೇರಿದಂತೆ ಸರ್ಕಾರಿ ರಜಾ ದಿನಗಳಿಂದ ಹಲವಾರು ಪ್ರವಾಸಿಗರು ಜಲಾಶಯ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಜಲಾಶಯಕ್ಕೆ ಒಳಹರಿವು ಜಾಸ್ತಿ ಇದ್ದರೆ ಜಲಾಶಯದ 30 ಕ್ರಸ್ಟ್‌ಗೇಟ್‌ಗಳಿಂದ ಮೂಲಕ ಧುಮ್ಮಿಕ್ಕಿ ರಭಸದಿಂದ ಸಾಗುವ ಜಲಧಾರೆ ವೀಕ್ಷಿಸಲು ಸುತ್ತಮುತ್ತಲಿನ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದು ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗೆ ಉದ್ಯಾನವನ ಶೀಘ್ರ ನಿರ್ಮಾಣ ಮಾಡಬೇಕು ಎನ್ನುವುದು ಜಿಲ್ಲೆಯ ಪ್ರವಾಸಿಗರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT