ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಗೆ ಜನಸ್ಪಂದನ ಸೀಮಿತ!

ಜಿಲ್ಲಾಮಟ್ಟದ ಜನಸ್ಪಂದನಕ್ಕೆ ಪ್ರಚಾರದ ಕೊರತೆ
Last Updated 30 ಅಕ್ಟೋಬರ್ 2018, 13:22 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾಡಳಿತ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಜನ ಸ್ಪಂದನ’ ಸಮಾರಂಭದಲ್ಲಿ ಒಂದೂ ಸಮಸ್ಯೆಗಳಿಗೆ ಪರಿಹಾರ ಕಾಣಲಿಲ್ಲ. ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸಮಸ್ಯೆ ಹೊತ್ತು ಬಂದ ಜನರಿಂದ ವಿವರ ಪಡೆದು ಅಧಿಕಾರಿಗಳ ಗಮನ ಸೆಳೆದು ಸಮಸ್ಯೆ ಪರಿಹರಿಸುವುದಾಗಿ ಆಶ್ವಾಸನೆ ನೀಡಿ ಕಳುಹಿಸುತ್ತಿದ್ದರು.

ಕಾಟಾಚಾರಕ್ಕೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ದ ಜನಸ್ಪಂದನಕ್ಕೆ ಪ್ರಚಾರದ ಕೊರತೆ ಕಾರಣ ಸಭೆಗೆ 25ಕ್ಕೂ ಹೆಚ್ಚು ಜನರು ಆಗಮಿಸಿರಲಿಲ್ಲ. ಆದರೆ, ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಸಮಾರಂಭಕ್ಕೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಅವಧಿ ನಿಗದಿಯಾಗಿತ್ತು. ಆದರೆ, ಒಂದು ಗಂಟೆ ತಡವಾಗಿ ಸಮಾರಂಭ ಆರಂಭಗೊಂಡಿತು. ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಅಧಿಕಾರಿಗಳಿಗೆ ಚಾಟಿ ಬೀಸಿ ಹೋದ ನಂತರ ಸಮಾರಂಭದಲ್ಲಿ ಅಧಿಕಾರಿಗಳ ಹೊರತು, ಜನರೇ ಇರಲಿಲ್ಲ. ಖಾಲಿ ಕುರ್ಚಿಗಳು ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಅಣಕಿಸುವಂತಿತ್ತು.

ವಿವಿಧ ಇಲಾಖೆಗಳಿಗೆ ಅರ್ಜಿ ಸಲ್ಲಿಸಿ ವಿಳಂಬವಾಗಿರುವ ಬಗ್ಗೆ ಜಿಲ್ಲಾಡಳಿತ ಸ್ಥಳದಲ್ಲಿ ದೂರು ಸ್ವೀಕೃತಿ ವಿಭಾಗವನ್ನು ತೆರೆದಿತ್ತು. ಆದರೆ, ಮಧ್ಯಾಹ್ನದವರೆಗೂ ಸ್ವೀಕೃತಿ ಕೇಂದ್ರದಲ್ಲಿ ಕೇವಲ 25 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದ್ದವು.

ಕಂದಾಯ ಇಲಾಖೆಯಲ್ಲೇ ಹೆಚ್ಚು ವಿಳಂಬ: ‘ತತ್ಕಾಲ ಪೋಡಿ’, ‘ಪಹಣಿ ತಿದ್ದುಪಡಿ’,‘ಸರ್ವೇ ಟಿಪ್ಪಣಿ’, ‘ಫಾರಂ–10’ (ಏಕವ್ಯಕ್ತಿ ಪಹಣಿ).. ಹೀಗೆ ಕಂದಾಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ಜನಸಾಮಾನ್ಯರ ಅರ್ಜಿಗಳು ಹಲವು ವರ್ಷಗಳಿಂದ ಧೂಳು ಹಿಡಿದಿವೆ. ಸುರಪುರ,ಶಹಾಪುರ ತಾಲ್ಲೂಕುಗಳಲ್ಲಿ ಈ ಸಮಸ್ಯೆ ಹೆಚ್ಚಿದೆ ಎಂಬುದಾಗಿ ಜನರು ಜಿಲ್ಲಾಧಿಕಾರಿ ಎದುರು ಸಮಸ್ಯೆ ತೋಡಿಕೊಂಡರು. ಆದರೆ, ಜಿಲ್ಲಾಧಿಕಾರಿ ಸಿಬ್ಬಂದಿಯನ್ನೇ ಸಮರ್ಥಿಸಿಕೊಂಡಾಗ, ಜನರು ಸಪ್ಪೆಮೋರೆ ಹಾಕಿ ಹಿಂದಿರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಯಾವ ಅಧಿಕಾರಿಗೂ ಕರ್ತವ್ಯ ವಿಳಂಬ ಕುರಿತು ದಂಡಿಸಿ ಪ್ರಶ್ನಿಸಲಿಲ್ಲ.

‘ಟಿಪ್ಪಣಿ ಯಾರು ಮಾಡಬೇಕು ಹೇಳಿ ಸಾರ್?’.. ಅಧಿಕಾರಿಗಳ ಪರವಾಗಿಯೇ ಮಾತನಾಡುತ್ತಿದ್ದ ಜಿಲ್ಲಾಧಿಕಾರಿ ಕೂರ್ಮಾರಾವ್‌ ಅವರನ್ನು ವಕೀಲ ದೇವೇಂದ್ರಪ್ಪ ಯರಗೋಳ ಈ ರೀತಿ ಪ್ರಶ್ನಿಸಿದರು. ವಕೀಲರ ಪ್ರಶ್ನೆಗೆ ಜಿಲ್ಲಾಧಿಕಾರಿ ನಿರುತ್ತರಾದರು.

‘ಯರಗೋಳ ಸರ್ವೇ ನಂಬರ್ 321/1ರಲ್ಲಿ ಸರ್ವೇ ಟಿಪ್ಪಣಿ ಮಾಡಲು ಕೋರಿ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳು ಕಳೆದಿದೆ. ಅರ್ಜಿ ಸಲ್ಲಿಸಿದ 45 ದಿನಗಳಲ್ಲಿ ಟಿಪ್ಪಣಿ ಮಾಡಿಕೊಡಬೇಕು ಎಂಬುದಾಗಿ ನಿಯಮ ಇದೆ. ಆದರೆ, ಅಧಿಕಾರಿಗಳು ಇದನ್ನು ಏಕೆ ಪಾಲಿಸಿಲ್ಲ? ಯರಗೋಳ ಸರ್ವೇ ನಂಬರ್‌ 271/2ರಲ್ಲಿ ಖರೀದಿಸಿರುವ ಆಸ್ತಿಗೆ ಸಂಬಂಧಿಸಿದಂತೆ ಖರೀದಿ ಕ್ರಯಪತ್ರವನ್ನು ಮ್ಯುಟೇಶನ್ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ ಐದು ವರ್ಷ ಕಳೆದಿದೆ. ಇದುವರೆಗೂ ಖರೀದಿ ಪತ್ರದ ಪ್ರಕಾರ ಆಸ್ತಿ ವರ್ಗಾವಣೆ ಆಗಿಲ್ಲ’ ಎಂದು ದೂರಿದರು.

ಆದರೆ, ವಕೀಲರನ್ನು ಮಧ್ಯವರ್ತಿ ಎಂದು ತಿಳಿದ ಜಿಲ್ಲಾಧಿಕಾರಿ ಕೂರ್ಮಾರಾವ್,‘ನಿಮ್ಮಂತಹ ಮಧ್ಯವರ್ತಿಗಳು ಜನರ ಮಧ್ಯೆ ಬರಬಾರದು. ಇಷ್ಟೊಂದು ಪತ್ರಗಳು ನಿಮ್ಮ ಕೈಯಲ್ಲಿ ಏಕೆ ಇವೆ’ ಎಂದು ಪ್ರಶ್ನಿಸಿದರು. ‘ಇವೆಲ್ಲಾ ನನ್ನ ಸ್ವಂತ ಆಸ್ತಿ ಪತ್ರಗಳು..’ ಎಂದು ವಕೀಲರು ಹೇಳುತ್ತಿದ್ದಂತೆ ಜಿಲ್ಲಾಧಿಕಾರಿ ಸುಮ್ಮನಾದರು. ‘ಸಮಸ್ಯೆ ಎಲ್ಲಿ ಏನಾಗಿದೆ ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಹೆಸರು ಸೇರ್ಪಡೆಗೆ ನಾಲ್ಕು ವರ್ಷ:‘ಸರ್ವೇ ನಂಬರ್ 250ರಲ್ಲಿ ಇರುವ ಜಮೀನಿನ ಪಹಣಿಯಲ್ಲಿ ಹೆಸರು ಕೈಬಿಟ್ಟು ಹೋಗಿದೆ. ಹೆಸರು ಸೇರ್ಪಡೆಗೊಳಿಸಿಕೊಡಿ ಎಂಬುದಾಗಿ ಅರ್ಜಿ ಸಲ್ಲಿಸಿ ನಾಲ್ಕು ವರ್ಷ ಕಳೆದಿದೆ. ಕಚೇರಿಗೆ ಅಲೆದು ಸಾಕಾಗಿದ್ದೇನೆ’ ಎಂದು ಬಳಿಚಕ್ರ ಗ್ರಾಮದ ವೃದ್ಧ ಮಲ್ಲಯ್ಯ ಜಿಲ್ಲಾಧಿಕಾರಿ ಎದುರು ಅಲವತ್ತುಕೊಂಡರು. ‘ಹಿಂದಿದ್ದ ಜಿಲ್ಲಾಧಿಕಾರಿ ಹೆಸರು ಸೇರ್ಪಡೆಗೊಳಿಸುವಂತೆ ಆದೇಶ ಹೊರಡಿಸಿದ್ದರೂ, ಸ್ಥಳೀಯ ಅಧಿಕಾರಿಗಳು ಆದೇಶ ಪಾಲಿಸಿಲ್ಲ’ ಎಂದು ದೂರಿದರು.

ಎಡಿಎಲ್‌ಆರ್ ಹೊಣೆ: ಒಂದು ವರ್ಷಕ್ಕೂ ಹೆಚ್ಚು ಹಳೆಯ ಪಹಣಿಗೆ ಸಂಬಂಧಿಸಿದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸುವಂತೆ ಸೂಚಿಸಲಾಗಿದೆ. ಈ ಕುರಿತು ಎಡಿಎಲ್‌ಆರ್ ಅವರ ವಿರುದ್ಧ ಕ್ರಮ ಜರುಗಿಸಬಹುದು ಎಂದು ಉಪ ವಿಭಾಗಾಧಿಕಾರಿ ಡಾಬಿ.ಎಸ್.ಮಂಜುನಾಥ್ ಜಿಲ್ಲಾಧಿಕಾರಿಯ ಗಮನ ಸೆಳೆದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಚಾಟಿ ಬೀಸಿದ ಶಾಸಕ
ಭೂಮಿ ಸರ್ವೇಗೆ ಸಂಬಂಧಿಸಿದಂತೆ ಜನರಿಂದ ಸಾಕಷ್ಟೂ ದೂರು ಕೇಳಿಬರುತ್ತಿವೆ. ಸರ್ವೇ ಅಧಿಕಾರಿಗಳು ಲಂಚದ ನಿರೀಕ್ಷೆಯಿಂದಾಗಿ ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ. ಇದರಿಂದ ಜಿಲ್ಲಾಡಳಿತಕ್ಕೂ ಕೆಟ್ಟ ಹೆಸರು ಬರುತ್ತಿದೆ. ಕೂಡಲೇ ಗಮನಹರಿಸಿ ಎಂದು ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರು ಅಧಿಕಾರಿಗಳತ್ತ ಚಾಟಿ ಬೀಸಿದರು.

ಸಭೆಯಲ್ಲಿ 15 ನಿಮಿಷ ಇದ್ದ ಎಸ್‌ಪಿ
ಸ್ಥಳದಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ವೇದಿಕೆ ಜನಸ್ಪಂದನ ಸಮಾರಂಭಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಸಭೆ ಅರ್ಧ ಮುಗಿದ ಮೇಲೆ ಆಗಮಿಸಿದರು. ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ದೂರು ಅರ್ಜಿಗಳನ್ನು ಪರಿಶೀಲಿಸುವ ಗೊಡವೆಗೂ ಅವರು ಹೋಗಲಿಲ್ಲ. ಕೇವಲ 15 ನಿಮಿಷ ಮಾತ್ರ ಇದ್ದ ಅವರು ಸಭೆಯಿಂದ ನಿರ್ಗಮಿಸಿದರು.

ಇತ್ಯರ್ಥವಾಗದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅತ್ತ ಅರ್ಜಿ ಸಲ್ಲಿಸಿದ್ದ ಜನರು ಎಸ್‌ಪಿಗಾಗಿ ಕಾದು ಕುಳಿತಿದ್ದರು. ಎಸ್‌ಪಿ ಏಕಾಏಕಿ ಸಭೆಯಿಂದ ನಿರ್ಗಮಿಸುತ್ತಿದ್ದಂತೆ ಜನರು ಬೇಸರ ವ್ಯಕ್ತಪಡಿಸಿದರು. ಇಂಥಾ ಅಧಿಕಾರಿಗಳಿಂದ ಸರ್ಕಾರದ ಯಾವ ಉದ್ದೇಶ ಈಡೇರಲು ಸಾಧ್ಯ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT