ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ । ‘ಸ್ಕೀಮ್ ವರ್ಕರ್‌’ ಆಗಿ ಉಳಿದ ಅಂಗನವಾಡಿ ಕಾರ್ಯಕರ್ತೆಯರು

ಜಿಲ್ಲೆಯಲ್ಲಿ 1,337 ಅಂಗನವಾಡಿ ಕೇಂದ್ರಗಳು, 50 ಮಿನಿ ಅಂಗನವಾಡಿ, 46 ವರ್ಷಗಳಿಂದ ನೌಕರರೆಂದು ಪರಿಗಣಿಸದ ಸರ್ಕಾರ
Last Updated 22 ಜನವರಿ 2023, 22:15 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ನಾಲ್ಕು ಶಿಶು ಅಭಿವೃದ್ಧಿ ಯೋಜನೆಗಳಿದ್ದು, ಇದರಲ್ಲಿ 1,387 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 1,337 ಅಂಗನವಾಡಿ ಕೇಂದ್ರಗಳು ಹಾಗೂ 50 ಮಿನಿ ಅಂಗನವಾಡಿ ಕೇಂದ್ರಗಳಿವೆ.

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು ಸುದೀರ್ಘ ದಿನಗಳಿಂದಲೂ ಸರ್ಕಾರದ ಅಡಿಯಲ್ಲಿ ನಿರಂತರ ಸೇವೆ ಸಲ್ಲಿಸಿದ್ದಾರೆ. ಆದರೂ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸದೆ ಇರುವುದರಿಂದ ಸೇವಾ ಭದ್ರತೆ, ಸೂಕ್ತ ಮಾಸಿಕ ವೇತನ, ಪಿಂಚಣಿ ಇನ್ನಿತರ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. 46 ವರ್ಷಗಳಿಂದಲೂ ಅವರನ್ನು ಸ್ಕೀಮ್ ವರ್ಕರ್‌ ಆಗಿ ಪರಿಗಣಿಸಲಾಗುತ್ತಿದೆ.

ಸಿ ಮತ್ತು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಿಲ್ಲದಂತಾಗಿದೆ.

ಇಂದಿನ ಬೆಲೆ ಏರಿಕೆ ಸನ್ನಿವೇಶದಲ್ಲಿ ಅವರಿಗೆ ಕೊಡುವ ಕಡಿಮೆ ಸಂಬಳ ಯಾತಕ್ಕೂ ಸಾಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕಡಿಮೆ ವೇತನ - ಹೆಚ್ಚು ದುಡಿಮೆ ಎನ್ನುವುದು ಇವರ ಪರಿಸ್ಥಿತಿಯಾಗಿದೆ. ಈ ಮೊದಲು ನಿಯೋಜನೆಯಾದ ಕೆಲಸಗಳನ್ನು ಬಿಟ್ಟು ಚುನಾವಣೆಗೆ ಸಂಬಂಧಿಸಿದ ಕೆಲಸ, ಗ್ರಾಮ ಪಂಚಾಯಿತಿ ಯೋಜನೆಗಳು, ಜಿಲ್ಲಾಧಿಕಾರಿ ಹಾಗೂ ಶಾಸಕರ ಯೋಜನೆಗಳ ಕೆಲಸ ಕಾರ್ಯಗಳನ್ನು ಅಂಗನವಾಡಿ ನೌಕರರಿಂದಲೇ ಮಾಡಿಸಲಾಗುತ್ತಿದೆ.

ಇದರಿಂದ ಶಾಲಾಪೂರ್ವ ಶಿಕ್ಷಣಕ್ಕೆ ಸಮಯವು ಇಲ್ಲಂದಂತಾಗಿದೆ. ಇದರೊಂದಿಗೆ ಹೊಸದಾಗಿ ಮೊಬೈಲ್ ಆಧಾರಿತ ಕೆಲಸಗಳು ಸೇರಿಕೊಂಡು ಕಾರ್ಯಕರ್ತೆಯರನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿವೆ. ಇನ್ನೊಂದೆಡೆ ಕೇಂದ್ರಗಳಲ್ಲಿ ನಿಗದಿತವಾಗಿ ಮೊಟ್ಟೆ, ಸಿಲಿಂಡರ್ ಪೂರೈಕೆ ಆಗುತ್ತಿಲ್ಲ. ಬಾಡಿಗೆ, ವಿದ್ಯುತ್, ಕಟ್ಟಡ ದುರಸ್ತಿ, ಗುಣಮಟ್ಟದ ಆಹಾರ ಪದಾರ್ಥಗಳ ಕೊರತೆ ಇಂತಹ ಮೊದಲಾದ ಸಮಸ್ಯೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಎದುರಿಸುತ್ತಿದ್ದಾರೆ.

ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನಲ್ಲಿ ಹಲವರು ನಿವೃತ್ತಿಯಾಗಿದ್ದು, ಇನ್ನೂ ನಿವೃತ್ತಿ ಪರಿಹಾರ ಹಣ ಬಂದಿಲ್ಲ. ಸರ್ಕಾರದ ಇಲಾಖೆಯು ಈ ವೃಂದಗಳ ನೌಕರರಿಗೆ ನೀಡುವ ಎಲ್ಲಾ ಶಾಸನಬದ್ಧ ಸೌಕರ್ಯಗಳನ್ನು ನೀಡಬೇಕು. ಅಲ್ಲಿಯವರೆಗೆ ಕಾರ್ಯಕರ್ತೆಯರಿಗೆ ₹35,950 ಹಾಗೂ ಸಹಾಯಕಿಯರಿಗೆ ₹31,000 ಮಾಸಿಕ ವೇತನ ನೀಡಬೇಕು. ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ (ಐಎಲ್‌ಒ) ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರು ಎಂದು ಪರಿಗಣಿಸಿ ಕನಿಷ್ಠ ವೇತನ, ರಜೆ, ಇಪಿಎಫ್‌, ಇಎಸ್‌ಐ ಸಹಿತ ಕಾರ್ಮಿಕರಿಗೆ ಶಾಸನಬದ್ಧವಾಗಿ ಲಭಿಸುತ್ತಿರುವ ಎಲ್ಲ ಸೌಕರ್ಯಗಳನ್ನು ನೀಡಬೇಕು. ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ಮಾಸಿಕ ವೇತನ ಪಾವತಿ ಮಾಡಬೇಕು ಎನ್ನುವುದು ಕಾರ್ಯಕರ್ತೆಯರ ಆಗ್ರಹ.

‘ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳ ಬಾಡಿಗೆ ಕರ, ಮೊಟ್ಟೆ ದರ, ಸಾದಿಲ್ವಾರು, ಫ್ಲೆಕ್ಸಿ ಫಂಡ್ ಅನುದಾನ ಇತ್ಯಾದಿ ದರಗಳನ್ನು ಹೆಚ್ಚಿಸಬೇಕು. ಹಲವಾರು ತಿಂಗಳು ಕಾಲ ಬಾಕಿ ಉಳಿಸದೇ, ಪ್ರತಿ ತಿಂಗಳು ಸಕಾಲದಲ್ಲಿ ಇವುಗಳಿಗೆ ಹಣ ಬಿಡುಗಡೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಕ್ಷೇಮಾಭಿವೃದ್ಧಿ ನಿಧಿಯಿಂದ ಅವರ ವಿವಿಧ ಗಂಭೀರ ಕಾಯಿಲೆಗಳ ಚಿಕಿತ್ಸೆಗಳಿಗೆ ನೀಡುತ್ತಿರುವ ವೈದ್ಯಕೀಯ ವೆಚ್ಚಗಳ ಸಹಾಯ ಧನಕ್ಕಾಗಿ ಅರ್ಜಿ ಸಲ್ಲಿಸಿದ ಜಿಲ್ಲೆಯ ಹಲವಾರು ಪ್ರಕರಣಗಳಿಗೆ ಪಾವತಿಯಾಗುತ್ತಿಲ್ಲ. ಇನ್ನು ಮುಂದೆಯಾದರೂ ಸರ್ಕಾರ ತಮ್ಮ ಕಡೆ ಗಮನ ಹರಿಸಬೇಕು ಎನ್ನುತ್ತಾರೆ ಕಾರ್ಯಕರ್ತೆಯರು.

**********

ಅಂಗನವಾಡಿ ಕೇಂದ್ರಗಳ ವಿವರ

ತಾಲ್ಲೂಕು; ಕೇಂದ್ರಗಳು

ಶಹಾಪುರ; 396

ಸುರಪುರ;474

ಯಾದಗಿರಿ;243

ಗುರುಮಠಕಲ್‌;274

ಒಟ್ಟು;1,387

ಆಧಾರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

***

ಪ್ರತಿಭಟಿಸಿದಾಗ ಮಾತ್ರ ಗೌರವಧನ!

ಗುರುಮಠಕಲ್: ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಬೇಕಿದ್ದ ಮಾಸಿಕ ಗೌರವಧನವನ್ನು ಪ್ರತಿಭಟನೆ ನಡೆಸಿದ ನಂತರದ ಎರಡು ಅಥವಾ ಮೂರು ತಿಂಗಳು ಮಾತ್ರ ಸರಿಯಾಗಿ ನೀಡಲಾಗುತ್ತದೆ. ಪ್ರತಿಭಟಿಸಿದಿದ್ದರೆ 6 ತಿಂಗಳಾದರೂ ಗೌರವಧನ ಸಿಗದು ಎಂದು ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ನೋವು ತೋಡಿಕೊಂಡರು.

ತಾಲ್ಲೂಕಿನಲ್ಲಿ ಅಂಗನವಾಡಿ ಮತ್ತು ಅಂಗನವಾಡಿ ಉಪ ಕೇಂದ್ರಗಳು ಸೇರಿ ಒಟ್ಟು 22 ಕೇಂದ್ರಗಳಿದ್ದು, 274 ಜನ ಕಾರ್ಯಕರ್ತೆಯರಿದ್ದಾರೆ. 6 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡ ಲಭ್ಯವಿದೆ. ಬಾಡಿಗೆ ಕಟ್ಟಡ ಗುರುತಿಸುವುದು ಸೇರಿದಂತೆ ವ್ಯವಸ್ಥೆ ಮಾಡುವುದು ಮೇಲ್ವಿಚಾರಕರ ಕೆಲಸವಾದರೂ ಅದನ್ನೂ ಅಂಗನವಾಡಿ ಕಾರ್ಯಕರ್ತೆಯರೇ ಮಾಡಬೇಕಿದೆ ಎಂದು ಕಾರ್ಯಕರ್ತೆಯೊಬ್ಬರು ತಿಳಿಸಿದರು.

‘ವರ್ಕ್ ಶೀಟ್‌ನಲ್ಲಿ ನಿಗದಿಮಾಡಿದ ಕೆಲಸ ಹೊರೆತುಪಡಿಸಿ ಕಂದಾಯ, ಪಂಚಾಯಿತಿ ಸಿಬ್ಬಂದಿಯ ಕೆಲಸಗಳನ್ನೂ ಮಾಡಿಸುತ್ತಾರೆ. ಇದರಿಂದ ಕೆಲಸದ ಒತ್ತಡ ಹೆಚ್ಚುತ್ತಿದೆ. ವೇತನ ಸಹಿತ ವೈದ್ಯಕೀಯ ರಜೆ ನೀಡಬೇಕಿದೆ. ಆದರೆ, ವೇತನ ಕಡಿತ ಮಾಡಲಾಗುತ್ತದೆ. ಚುನಾವಣೆಯ ಬಿಎಲ್‌ಒ ಕೆಲಸಕ್ಕೆ ಬೇರೆಯವರನ್ನು ನೇಮಿಸಬಹುದು. ಆದರೆ, ನಮಗೆ ವಾರ್ಷಿಕ ₹6 ಸಾವಿರ ಮಾತ್ರ ನೀಡಿ ಕೆಲಸ ಮಾಡಿಸುತ್ತಾರೆ. ಆರೋಗ್ಯ ಕೆಟ್ಟರೂ ನಮಗೆ ಬಿಡುವಿಲ್ಲ’ ಎಂದು ಅನ್ನಪೂರ್ಣ ಪಾಟೀಲ ಹೇಳುತ್ತಾರೆ.

ರಾಜೀನಾಮೆ, ವರ್ಗಾವಣೆ, ನಿವೃತ್ತಿಯಂತ ಸಮಯದಲ್ಲಿ ವಹಿಸುವ ಪ್ರಭಾರವನ್ನು 5 ವರ್ಷಗಳವರೆಗೂ ಮುಂದುವರೆಸಲಾಗುತ್ತಿದ್ದು, ಇದರಿಂದ ಎರಡೂ ಕೇಂದ್ರಗಳ ಕೆಲಸದ ಒತ್ತಡವಾಗುತ್ತಿದೆ. ಮಾತೃ ಪೂರ್ಣ ಯೋಜನೆಯ ಫಲಾನುಭವಿಗಳು ಕೇಂದ್ರಕ್ಕೆ ಬಂದು ಆಹಾರ ಸೇವಿಸರು. ಮನೆಗೆ ನೀಡದಂತೆ ಇಲಾಖೆ ಸೂಚಿಸುತ್ತದೆ.

ಕೇಂದ್ರದ ಎಲ್ಲಾ ವ್ಯವಹಾರಗಳನ್ನು ಡಿಜಿಟಲೈಸ್ ಮಾಡಲು ಮೊಬೈಲ್ ಮೂಲಕ ಡೆಟಾ ಎಂಟ್ರಿ ಮಾಡಬೇಕಿದೆ. ಆದರ ಜತೆ ದಾಖಲೆ ಪುಸ್ತಕದಲ್ಲೂ ಬರೆಯಬೇಕು. ಅಂಗನವಾಡಿಯ ಮೂಲ ಆಶಯ ಮೂಲೆ ಗುಂಪಾಗಿದ್ದು, ಹೆಚ್ಚುವರಿ ಕೆಲಸವೇ ಹೆಚ್ಚಾಗಿದೆ ಎಂದು ಎಐಟಿಯುಸಿ ಸಂಘದ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ ಹೇಳುತ್ತಾರೆ.

****

99 ಹೊಸ ಅಂಗನವಾಡಿ ಕೇಂದ್ರ ಮಂಜೂರು

ಸುರಪುರ: ಸುರಪುರ ಮತ್ತು ಹುಣಸಗಿ ತಾಲ್ಲೂಕು ಸೇರಿ 474 ಅಂಗನವಾಡಿ ಕೇಂದ್ರಗಳು, 24 ಮಿನಿ ಅಂಗನವಾಡಿ ಕೇಂದ್ರಗಳಿವೆ. 5 ಅಂಗನವಾಡಿ ಕಾರ್ಯಕರ್ತೆಯರ, 3 ಸಹಾಯಕಿಯರ ಹುದ್ದೆಗಳು ಖಾಲಿ ಇವೆ.

ಹೊಸದಾಗಿ 99 ಅಂಗನವಾಡಿ ಕೇಂದ್ರಗಳು ಮಂಜೂರಿಯಾಗಿವೆ. ಇವುಗಳಿಗೆ ತಲಾ 99 ಕಾರ್ಯಕರ್ತೆಯರ ಮತ್ತು ಸಹಾಯಕಿಯರ ನೇಮಕ ಪ್ರಕ್ರಿಯೆ ನಡೆದಿದೆ.

ಬಡವರು, ವಿಧವೆಯರು ಮತ್ತು ಅಂಗವಿಕಲರೂ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಕೊಡುವ ಗೌರವಧನದಿಂದ ಸಂಸಾರ ತೂಗಿಸಲು ಕಷ್ಟ ಪಡುತ್ತಿದ್ದಾರೆ.

ಶಿಶು ಅಭಿವೃದ್ಧಿ ಇಲಾಖೆಯ 29 ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಹೆಚ್ಚುವರಿಯಾಗಿ ವಹಿಸುವ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಸಿಐಟಿಯು ಸಂಯೋಜನೆಯಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘ ಕಟ್ಟಿಕೊಂಡಿದ್ದು, ಆಗಾಗ ತಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಲೇ ಇರುತ್ತಾರೆ. ಆದರೆ, ಸರ್ಕಾರ ಕಾರ್ಯಕರ್ತೆಯರಿಗೆ ₹11 ಸಾವಿರದಿಂದ 11,500, ಸಹಾಯಕಿಯರಿಗೆ ₹ 6 ಸಾವಿರದಿಂದ ₹ 6,500 ಗೌರವಧನ ನೀಡುತ್ತಿದ್ದು, ಸಂಸಾರ ನಿರ್ವಹಣೆಗೆ ತೊಂದರೆ ಇದೆ ಎನ್ನುತ್ತಾರೆ ನೌಕರರು.

***

ಸೇವಾ ಭದ್ರತೆ ಇಲ್ಲದೆ ಪರದಾಟ

ಶಹಾಪುರ: ಹಲವು ವರ್ಷದಿಂದ ಅಂಗನವಾಡಿ ಕಾರ್ಯಕರ್ತೆ ಎಂದು ಕೆಲಸ ಕಾರ್ಯನಿರ್ವಹಿಸಿ ಗೌರವ ಧನದಲ್ಲಿಯೇ ಜೀವನ ಸಾಗಿಸಬೇಕು. ನಮಗೆ ಸೇವಾ ಭದ್ರತೆ ಇಲ್ಲದೆ ಪರದಾಡುವಂತೆ ಆಗಿದೆ. ಅದರಲ್ಲಿ ನಿವೃತ್ತಿ ವಯಸ್ಸಿನಂತೆ ಕೆಲಸದಿಂದ ತೆಗೆದು ಹಾಕಿದಾಗ ಬರಿ ಗೈಯಲ್ಲಿ ಮನೆಗೆ ತೆರಳಬೇಕು. ನಿರಂತರವಾಗಿ ಹೋರಾಟ ನಡೆಸಿದರೂಹ ಆಳುವ ಸರ್ಕಾರಗಳು ನಮ್ಮ ಬೇಡಿಕೆಗೆ ಧ್ವನಿಯಾಗುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಪ್ರತಿ ಕಾರ್ಯಕ್ರಮಕ್ಕೆ ಭಾಗವಹಿಸುವ ಜವಾಬ್ದಾರಿ ನಮ್ಮ ಹೆಗಲಿಗೆ ಹಾಕುತ್ತಾರೆ. ನಾವು ಎಂತಹ ಸಂದಿಗ್ದ ಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂದರೆ ಒಳಗಡೆ ಅಧಿಕಾರಿಗಳ ಒತ್ತಡ ಹೊರಗಡೆ ಜನತೆಯು ಸರಿಯಾಗಿ ಆಹಾರ ವಿತರಿಸುತ್ತಿಲ್ಲ. ಅಂಗನವಾಡಿ ಕೇಂದ್ರಕ್ಕೆ ಬರುವುದಿಲ್ಲ ಎಂಬ ಆರೋಪದ ಸುರಿಮಳೆ ನಮ್ಮ ಮೇಲೆ ಇದೆ. ಯಾವುದೇ ಗಣತಿಗೂ ನಾವು ಕೆಲಸ ನಿರ್ವಹಿಸಬೇಕು. ಸಂಭಾವನೆ ಹಾಗೂ ಸರ್ಕಾರಿ ನೌಕರರು ಎಂದು ಪರಿಗಣಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ಹಿರಿಯ ಅಂಗನವಾಡಿ ಕಾರ್ಯಕರ್ತೆ ಒಬ್ಬರು ತಮ್ಮ ಅಳಲು ತೋಡಿಕೊಂಡರು.

‘ತಾಲ್ಲೂಕಿನಲ್ಲಿ 395 ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ. 68 ಕಡೆ ನಿವೇಶನ ಲಭ್ಯತೆ ಇಲ್ಲದ ಕಾರಣ ಬಾಡಿಗೆ ಮನೆಯಲ್ಲಿ ಕೇಂದ್ರವನ್ನು ನಡೆಸಲಾಗುತ್ತದೆ. ಸರ್ಕಾರದ ಮಾರ್ಗಸೂಚಿ ನಿಯಮದಂತೆ ಪ್ರತಿ ಕೇಂದ್ರದಲ್ಲಿ ಮಕ್ಕಳಿಗೆ ಆಹಾರ ವಿತರಣೆ ಮಾಡಲಾಗುತ್ತದೆ’ ಎಂದು ಸಿಡಿಪಿಒ ಗುರುರಾಜ ತಿಳಿಸಿದರು.

***

ತಾಲ್ಲೂಕಿನ ಅಂಗನವಾಡಿ ನೌಕರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿವೆ
ಅನಿಲಕುಮಾರ ಕಾಂಬ್ಳೆ, ಸಿಡಿಪಿಒ, ಸುರಪುರ

***

ಇಲಾಖೆಯ ಯೋಜನೆಗಳಲ್ಲದೆ ಇತರ ಕೆಲಸ ಹಚ್ಚುವುದರಿಂದ ಅಂಗನವಾಡಿ ಕೇಂದ್ರದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ
ಸುರೇಖಾ ಕುಲಕರ್ಣಿ, ತಾಲ್ಲೂಕು ಘಟಕದ ಕಾರ್ಯದರ್ಶಿ,
ಅಂಗನವಾಡಿ ನೌಕರರ ಸಂಘ

***
ನಮಗೆ ವಹಿಸುವ ಹೆಚ್ಚುವರಿ ಕೆಲಸಕ್ಕೆ ಸಂಬಂದಿಸಿದಂತೆ ಕೆಲಸದ ಆದೇಶ ಪ್ರತಿ ನೀಡಲು ಕೇಳಿದ್ದೇವೆ. ಆದರೆ, ಕೇವಲ ಜಿಲ್ಲಾಧಿಕಾರಿಗಳ ಮೌಖಿಕ ಆದೇಶ ಎಂದಷ್ಟೆ ಹೇಳುತ್ತಾ ನಮ್ಮನ್ನು ದುಡಿಸಿಕೊಳ್ಳಲಾಗುತ್ತಿದೆ
ಅನ್ನಪೂರ್ಣ ಪಾಟೀಲ, ಎಐಯುಟಿಯುಸಿ ಸಂಘದ ಅಂಗನವಾಡಿ ತಾಲ್ಲೂಕು ಅಧ್ಯಕ್ಷೆ, ಗುರುಮಠಕಲ್‌

***

ಕೆಲಸದ ಒತ್ತಡದ ಜತೆ ವೈದ್ಯಕೀಯ ಸಮಸ್ಯೆಗಳಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಹಲವು ಬಾರಿ ಕೋರಿದ್ದೇವೆ. ಗರ್ಭಕೋಶಕ್ಕೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗೆ ಇಲಾಖೆ ನೀಡಬೇಕಾದ ಹಣಕ್ಕೆ ದಾಖಲೆಗಳನ್ನು ಪಡೆಯುತ್ತಾರೆ. ಆದರೆ, ಹಣ ಮಾತ್ರಬಾರದು
ಪ್ರತಿಮಾದೇವಿ, ಅಂಗನವಾಡಿ ಕಾರ್ಯಕರ್ತೆ

***

ನೀಡುವ ಅಲ್ಪ ಪ್ರಮಾಣದ ಗೌರವಧನಕ್ಕೆ ಕೆಲಸ ಮಾಡುವ ನಮಗೆ ಕೆಲಸದ ಒತ್ತಡದ ಕಾರಣ ಕುಟುಂಬವೂ ನಮ್ಮೊಡನೆ ಕೆಲಸ ಮಾಡುವಂತಾಗಿದೆ. ನಾವು ಮಾಡಬೇಕಿದ್ದ ಕೆಲಸಕ್ಕಿಂತ ಬೇರೆ ಕೆಲಸವೇ ಹೆಚ್ಚಾಗಿ ನೀಡಲಾಗುತ್ತಿದೆ
ಶಕುಂತಲಾ, ಎಐಯುಟಿಯುಸಿ ಸಂಘದ ತಾಲ್ಲೂಕು ಉಪಾಧ್ಯಕ್ಷೆ, ಗುರುಮಠಕಲ್‌

***

46 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರೂ ಅವರನ್ನು ಗೌರವಧನ ಆಧಾರದ ಮೇಲೆ ದುಡಿಸಿಕೊಳ್ಳಲಾಗುತ್ತಿದೆ. ಸೇವಾ ಭದ್ರತೆ ಸೇರಿದಂತೆ ಕಾರ್ಮಿಕ ಕಾಯ್ದೆಯನುಸಾರವಾಗಿ ಯಾವುದೇ ಸೌಲಭ್ಯ ನೀಡುತ್ತಿಲ್ಲ
ಡಿ. ಉಮಾದೇವಿ, ಜಿಲ್ಲಾಧ್ಯಕ್ಷೆ, ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ

***

ಶಹಾಪುರ ತಾಲ್ಲೂಕಿನಲ್ಲಿ 395 ಅಂಗನವಾಡಿ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ನಿವೇಶನ ಲಭ್ಯತೆ ಇಲ್ಲದಿರುವ ಅಂಗನಾಡಿ ಕೇಂದ್ರ 68 ಆಗಿವೆ
ಗುರುರಾಜ, ಸಿಡಿಪಿಒ, ಶಹಾಪುರ

***

ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳು ಸರ್ಕಾರ ಮಟ್ಟದಲ್ಲಿ ಇತ್ಯರ್ಥವಾಗುವ ಬೇಡಿಕೆಗಳಿವೆ. ನಮ್ಮ ವ್ಯಾಪ್ತಿಯಲ್ಲಿದ್ದವನ್ನು ಪರಿಹರಿಸಲಾಗುವುದು
ರವೀಂದ್ರ ರತನಕರ್‌, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಯಾದಗಿರಿ

***

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT