ಎಪಿಎಂಸಿ: ಶರಣಗೌಡ ಅಧ್ಯಕ್ಷ, ಶ್ರೀರಂಜನಾದೇವಿ ಉಪಾಧ್ಯಕ್ಷೆ

7
ನಡೆಯದ ಕಾಂಗ್ರೆಸ್‌ –ಜೆಡಿಎಸ್‌ ಮೈತ್ರಿ: ಅಧಿಕಾರದ ಆಸೆ ಹೊತ್ತಿದ್ದ ಜೆಡಿಎಸ್‌ಗೆ ಮುಖಭಂಗ

ಎಪಿಎಂಸಿ: ಶರಣಗೌಡ ಅಧ್ಯಕ್ಷ, ಶ್ರೀರಂಜನಾದೇವಿ ಉಪಾಧ್ಯಕ್ಷೆ

Published:
Updated:
Deccan Herald

ಯಾದಗಿರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶರಣಗೌಡ ಕಾಳೆಬೆಳಗುಂದಿ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶ್ರೀರಂಜನಾದೇವಿ ಆಯ್ಕೆಯಾದರು.

ಎಪಿಎಂಸಿ ಕಚೇರಿಯಲ್ಲಿ ನಡೆದ ಗುರುವಾರ ಚುನಾವಣೆಯಲ್ಲಿ ಒಟ್ಟು 15 ಸದಸ್ಯರಿದ್ದಾರೆ. ಅವರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಅನಂತಯ್ಯ ಯದ್ಲಾಪುರ, ಜೆಡಿಎಸ್ ಬೆಂಬಲಿತ ಸದಸ್ಯ ಸೂಗೂರಪ್ಪ ಸಾಹುಕಾರ ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಶರಣಗೌಡ ಕಾಳೆಬೆಳಗುಂದಿ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ರೀರಂಜನಾದೇವಿ ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಹನುಮಂತ ನಾಮಪತ್ರ ಸಲ್ಲಿಸಿದ್ದರು.

ಕೊನೆಗಳಿಗೆಯಲ್ಲಿ ಅನಂತಯ್ಯ ಯದ್ಲಾಪುರ ತಮ್ಮ ನಾಮಪತ್ರ ವಾಪಸ್ ಪಡೆದರು. ನಂತರ ನಡೆದ ಗೌಪ್ಯ ಮತದಾನದಲ್ಲಿ ಶರಣಗೌಡ ಕಾಳೆಬೆಳಗುಂದಿ ಅವರಿಗೆ 8 ಮತಗಳು, ಸೂಗೂರಪ್ಪ ಸಾಹುಕಾರಗೆ 7 ಮತಗಳು ಲಭಿಸಿದವು. 1 ಮತ ಅಂತರದಿಂದ ಶರಣಗೌಡ ಕಾಳೆಬೆಳಗುಂದಿ ಗೆಲುವು ಸಾಧಿಸಿದರು.

ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಶ್ರೀರಂಜನಾದೇವಿ ಅವರಿಗೆ 9 ಮತಗಳು ಲಭಿಸಿದರೆ; ಹನುಮಂತಗೆ ಅವರಿಗೆ ಕೇವಲ 6 ಮತಗಳು ಲಭಿಸಿದವು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಚೆನ್ನಮಲ್ಲಪ್ಪ ಘಂಟಿ ಕಾರ್ಯನಿರ್ವಹಿಸಿದರು.

ಬಿಜೆಪಿ ವಿಜಯೋತ್ಸವ:
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದಿದ್ದರೂ ಗುರುವಾರ ನಡೆದ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿ ಶರಣಗೌಡ ಕಾಳೆಬೆಳಗುಂದಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ, ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಚೇರಿ ಮುಂದೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಣಗೌಡ ಪಾಟೀಲ, ಚೆನ್ನಾರಡ್ಡಿ ಬಿಳ್ಹಾರ, ಭೀಮರಡ್ಡಿಗೌಡ ಕೂಡ್ಲೂರ, ಭೀಮನಗೌಡ ಕ್ಯಾತನಾಳ, ಸೋಮನಾಥ ಜೈನ್, ಬಸ್ಸಪ್ಪಗೌಡ ಬೆಳಗುಂದಿ, ಸುರೇಶ ಚವ್ಹಾಣ, ನರಸಿಂಹಲು ನಿರೇಟಿ, ಶಿವಕುಮಾರ ದೊಡ್ಮನಿ, ಲಕ್ಷ್ಮೀಕಾಂತ ಬೊಮ್ಮಶೆಟ್ಟಹಳ್ಳಿ, ಭಾಸ್ಕರರಡ್ಡಿ ಈಡ್ಲೂರ, ಬಸಲಿಂಗಪ್ಪ ನಾಯಕ, ಸುರೇಶ ರಾಠೋಡ, ಮಹ್ಮದ್ ಗೌಸುದ್ದೀನ್, ನಿಂಗಪ್ಪ ತಳಕ ಇದ್ದರು.

ಶಾಕ್ ನೀಡಿದ ಚಿಂಚನಸೂರ್‌:

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಪ್ರಯತ್ನದಿಂದ ಬಹುಮತ ಇಲ್ಲದಿದ್ದರೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶರಣಗೌಡ ಕಾಳೆಬೆಳಗುಂದಿ ಅಧ್ಯಕ್ಷರಾಗುವ ಮೂಲಕ ಚಿಂಚನಸೂರ್‌ ಮೇಲುಗೈ ಸಾಧಿಸಿದ್ದಾರೆ.

ಒಟ್ಟು 15ಸದಸ್ಯರಲ್ಲಿ ಕಾಂಗ್ರೆಸ್ 5, ಜೆಡಿಎಸ್ 4 ಹಾಗೂ ಬಿಜೆಪಿ ಬೆಂಬಲಿತ 6 ಸದಸ್ಯರಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಮಧ್ಯೆ ಮಾತುಕತೆಯಾಗುವ ಮೂಲಕ ಅಧ್ಯಕ್ಷ ಸ್ಥಾನ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಕಾಂಗ್ರೆಸ್ ಬೆಂಬಲಿಸಬೇಕು, ಉಪಾಧ್ಯಕ್ಷ ಅಭ್ಯರ್ಥಿಗೆ ಜೆಡಿಎಸ್ ಸದಸ್ಯರು ಬೆಂಬಲಿಸಬೇಕು ಎಂದು ತೀರ್ಮಾನಿಸಿದ್ದರು. ಪರಿಣಾಮ ಸೂಗೂರಪ್ಪ ಸಾಹುಕಾರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಆದರೆ, ಎಪಿಎಂಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯ ಅನಂತಯ್ಯ ಯದ್ಲಾಪುರ ಕೊನೆಗಳಿಗೆಯಲ್ಲಿ ಅವಕಾಶ ಕೈತಪ್ಪಿರುವುದರಿಂದ ಆಕ್ರೋಶಗೊಂಡು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್‌ ಅವರ ಸೂಚನೆ ಮೇರೆಗೆ ಮತ್ತೊಬ್ಬ ಸದಸ್ಯನ ಜತೆಗೂಡಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ ಪರಿಣಾಮ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಿತು.

ಕಾಂಗ್ರೆಸ್-ಜೆಡಿಎಸ್ ನಾಯಕರು ಮಾರುಕಟ್ಟೆಯಲ್ಲಿ ತಮ್ಮ ಅಭ್ಯರ್ಥಿಗಳು ಅಧಿಕಾರ ಹಿಡಿಯಲಿದ್ದಾರೆ ಎಂಬ ಆತ್ಮವಿಶ್ವಾಸದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆಯಿಂದಲೇ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ್ದರು. ನಂತರ ಚುನಾವಣಾ ಫಲಿತಾಂಶ ಪ್ರಕಟಗೊಂಡ ಮೇಲೆ ಜೆಡಿಎಸ್ ಮುಖಂಡರು ತೀವ್ರ ಮುಖಭಂಗ ಅನುಭವಿಸುವಂತಾಯಿತು. ಆ ಮೂಲಕ ಚಿಂಚನಸೂರ್ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಶಾಕ್ ಮುಟ್ಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !