ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಕೇಳದ ಅಧಿಕಾರಿಗಳು: ಧರಣಿ ಎಚ್ಚರಿಕೆ

ಅಧಿಕಾರಿಗಳ ಸಭೆ ಕರೆಯಲು ಚಿಂಚನಸೂರ ಒತ್ತಾಯ
Last Updated 24 ಜನವರಿ 2022, 16:14 IST
ಅಕ್ಷರ ಗಾತ್ರ

ಯಾದಗಿರಿ: ‘ಗುರುಮಠಕಲ್‌ ಮತಕ್ಷೇತ್ರದ ಯಾವ ಇಲಾಖೆಯ ಅಧಿಕಾರಿಗಳೂ ನನ್ನ ಮಾತು ಕೇಳುತ್ತಿಲ್ಲ. ಮೂರು ವರ್ಷಗಳಿಂದ ಒಂದು ಸಣ್ಣ ಕೆಲಸಕ್ಕೂ ಸ್ಪಂದಿಸಿಲ್ಲ. ಜಿಲ್ಲಾಧಿಕಾರಿ ಅವರು ಅಧಿಕಾರಿಗಳ ಸಭೆ ಕರೆದು ವಾರದಲ್ಲಿ ಇದನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಧರಣಿ ಮಾಡುತ್ತೇನೆ’ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ‌ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಎಚ್ಚರಿಸಿದ್ದಾರೆ.

ಸೋಮವಾರಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಈ ಕುರಿತು ಪತ್ರ ಸಲ್ಲಿಸಿರುವ ಅವರು, ‘ಅಧಿಕಾರಿಗಳು ಕರೆ ಸ್ವೀಕರಿಸಿಲ್ಲ. ನಾನು ಬಿಜೆಪಿಗೆ ಸೇರ್ಪಡೆಯಾಗಿ ಮೂರು ವರ್ಷವಾಗಿದೆ. ಈ ಅವಧಿಯಲ್ಲಿ ಮನನೊಂದಿದ್ದೇನೆ. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದ್ದರೂ ಯಾವ ಅಧಿಕಾರಿಯೂ ನನಗೆ ಗೌರವ ಕೊಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

‘ನಾನು ಅಂಬಿಗರ ಚೌಡಯ್ಯ ಅಭಿವೃದ್ಧಿ ‌ನಿಗಮದ ಅಧ್ಯಕ್ಷನಿದ್ದು, ಸಂಪುಟ ದರ್ಜೆಯ ಸ್ಥಾನಮಾನವಿದ್ದರೂ ಅಧಿಕಾರಿಗಳು ನನ್ನ ಕಳಕಳಿಯ ಮನವಿಗೆ ಸ್ಪಂದನೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿ ಅವರು ಒಂದು ವಾರದಲ್ಲಿ ಇದನ್ನು ಸರಿಪಡಿಸದಿದ್ದರೆ ಮಾಜಿ‌ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಅವರು ಪತ್ರ ಸಲ್ಲಿಸಿದ್ದಾರೆ.

‘ಬಿಜೆಪಿ ತೊರೆಯಲ್ಲ, ಕಾಂಗ್ರೆಸ್‌ ಸೇರಲ್ಲ’:

‘ಕಲ್ಯಾಣ ಕರ್ನಾಟಕ ಭಾಗದ ಯಾರಿಗಾದರೂ ಒಬ್ಬರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯತೆ ಕೊಡಬೇಕು. ಯಾದಗಿರಿ ಜಿಲ್ಲೆಯಿಂದ ಸುರಪುರ ಶಾಸಕ ರಾಜೂಗೌಡ ಅವರಿಗೆ ಸಚಿವ‌ ಸ್ಥಾನ ನೀಡಬೇಕು’ ಎಂದು ಬಾಬುರಾವ್ ಚಿಂಚನಸೂರ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಮುಂದೆ ಗೆದ್ದು ಬಂದು ಸಚಿವನಾಗುತ್ತೇನೆ. ಕೋಲಿ‌ ಸಮುದಾಯದ ರಾಜ್ಯದ ಏಕೈಕ ಹಿರಿಯ ಮುಖಂಡ ನಾನು. ಹೈಕಮಾಂಡ್‌ ಗುರುತಿಸಿ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವ ಶಕ್ತಿ ಇದೆ’ ಎಂದರು.

‘ನನ್ನ ರಾಜಕೀಯ ಗುರು ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯಲ್ಲಿ ಮುಂದುವರೆಯುತ್ತೇನೆ. ಬಿಜೆಪಿ ನನ್ನ ತಾಯಿ ಇದ್ದಂತೆ. ದ್ರೋಹ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಾನು ಎಂದೂ ಸೇರುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ನನಗೆ ಗೌರವ ಕೊಡುತ್ತಿದೆ. ಬಿಜೆಪಿ‌ ಪಕ್ಷಕ್ಕೆ ನನ್ನ ಶಕ್ತಿ ಏನೆಂದುಬಸವಕಲ್ಯಾಣ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT