ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ವಲಸಿಗರಿಗೆ ಆಶ್ರಯವಾದ ‘ಬ್ಯಾಡಗಿ’

ಕೋಸಗಿ ಮಂಡಲಂನ 6 ಕುಟುಂಬಗಳ 20 ಸದಸ್ಯರು ಮೆಣಸಿನಕಾಯಿ ಬಿಡುವ ಕೆಲಸ
Last Updated 26 ಫೆಬ್ರುವರಿ 2021, 3:04 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಕಾರ್ಮಿಕ ವರ್ಗ ದೂರದ ಮಹಾನಗರಗಳಿಗೆ ವಲಸೆ ಹೋಗುವುದು ಸಾಮಾನ್ಯ ಸಂಗತಿ. ಆದರೆ, ಬ್ಯಾಡಗಿ ತಳಿಯ ಮೆಣಸಿಕಾಯಿ ಕಸ, ಕಡ್ಡಿ ಹಸನು ಮಾಡಲು ಬಂದಿರುವ ಆಂಧ್ರದ ವಲಸಿಗಕಾರ್ಮಿಕರು ಜಿಲ್ಲೆಯ ಶಹಾಪುರದಲ್ಲಿ ನೆಲೆಸಿದ್ದಾರೆ. ಬ್ಯಾಡಗಿ ತಳಿ ಮೆಣಸಿನಕಾಯಿ ಬಿಡಿಸಲು ಬಂದವರಿಗೆ ಆಶ್ರಯ ನೀಡಿದಂತಾಗಿದೆ.

ಬ್ಯಾಡಗಿ ಮೆಣಸಿಕಾಯಿ ಬಿಡಿಸುವುದು, ರಾಶಿ ಹಾಕುವುದು, ಲಾರಿ, ವಾಹನಗಳಿಗೆ ತುಂಬುವುದು ಸೇರಿದಂತೆ ಇನ್ನಿತರ ಕಾರ್ಯಕ್ಕೆ ಆಂಧ್ರ ಪ್ರದೇಶದಿಂದ ಕಾರ್ಮಿಕರು ಇಲ್ಲಿಗೆ ವರ್ಷದಲ್ಲಿ ಎರಡು ಮೂರು ಬಾರಿ ಬಂದು ಹೋಗುತ್ತಿದ್ದಾರೆ.

ವಲಸಿಗರಿಗೆ ಹೆಚ್ಚು ಕೂಲಿ: ಶಹಾಪುರ ತಾಲ್ಲೂಕಿನ ಮೆಣಸಿಕಾಯಿ ಜಮೀನುಗಳಲ್ಲಿ ಆಂಧ್ರದ ವಲಸಿಗರಿಗೆ ಸ್ಥಳೀಯರಿಗಿಂತ ಹೆಚ್ಚು ಕೂಲಿ ಸಿಗುತ್ತದೆ.

ಆಂಧ್ರದ ವಲಸಿಗ ಕೂಲಿ ಕಾರ್ಮಿಕರಿಗೆ ಪುರುಷರಿಗೆ ₹350, ಮಹಿಳೆಯರಿಗೆ ₹300 ಕೂಲಿ ನೀಡಲಾಗುತ್ತಿದೆ. ಅದೇ ಸ್ಥಳೀಯರಿಗೆ ಮಹಿಳಾ ಕೂಲಿ ಕಾರ್ಮಿಕರಿಗೆ ₹150, ಪುರುಷರಿಗೆ ₹200 ಕೂಲಿ ನೀಡಲಾಗುತ್ತಿದೆ.

ಆಂಧ್ರ ಪ್ರದೇಶದ ಆದೋನಿ, ಕೋಸಗಿ, ಮಂತ್ರಾಲಯ ಅಕ್ಕಪಕ್ಕ ಗ್ರಾಮಗಳ 6 ಕುಟುಂಬಗಳು ಶಹಾಪುರ ತಾಲ್ಲೂಕಿನ ಮದ್ರಕಿ, ಮೂಡಬೂಳ ಗ್ರಾಮದ ಮೆಣಸಿಕಾಯಿ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.

ಕೂಲಿ ಕಾರ್ಮಿಕರನ್ನು ಮಧ್ಯವರ್ತಿಗಳು ಕರೆದುಕೊಂಡು ಬರುತ್ತಾರೆ. ಅವರೂ ಕೂಲಿ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಾರೆ. ಯಾವುದೇ ಸಮಸ್ಯೆಯಾದರೂ ‘ಮೇಸ್ತ್ರಿ’ ನೋಡಿಕೊಳ್ಳುತ್ತಾರೆ. ಅವರಿಗೂ ಇಂತಿಷ್ಟು ಕೂಲಿ ಕಾರ್ಮಿಕರನ್ನು ಕರೆತಂದರೆ ಕಮಿಷನ್‌ ಇರುತ್ತದೆ.

ಬೆಳಿಗ್ಗೆ 8ರಿಂದ ಸಂಜೆ 5.30ರ ತನಕ ಕೆಲಸ ಮಾಡುತ್ತಾರೆ. ಆದರೆ, ಸ್ಥಳೀಯರು ಬೆಳಿಗ್ಗೆ 10.30ರಿಂದ ಸಂಜೆ 5.30ರ ತನಕ ಕೂಲಿ ಮಾಡುತ್ತಾರೆ. ಹೀಗಾಗಿ ಕೂಲಿ ದರ ವ್ಯಾತ್ಯಾಸವಿದೆ ಎಂದು ಕಾರ್ಮಿಕರು ನುಡಿದರು.

‘ನಾವು ಕೋಸಗಿ ಮಂಡಲಂ ಸುತ್ತಮುತ್ತಲಿನ ಗ್ರಾಮಸ್ಥರು ಮೆಣಸಿನಕಾಯಿ ಬಿಡಿಸಲು ಬಂದಿದ್ದೇವೆ. 6 ಕುಟುಂಬಗಳಿದ್ದು, ಮಕ್ಕಳು ಸೇರಿದಂತೆ 20 ಜನರಿದ್ದೇವೆ. ಜಮೀನು ಪಕ್ಕದಲ್ಲಿಯೇ ಗುಡಿಸಲುಗಳನ್ನು ಹಾಕಿಕೊಂಡಿದ್ದರಿಂದ ಬೆಳಿಗ್ಗೆ 8 ಗಂಟೆಯಿಂದಲೇ ಕೆಲಸ ಆರಂಭಿಸುತ್ತೇವೆ. ಊರಿನಲ್ಲಿ ಯಾವುದೇ ಕೆಲಸ ಇಲ್ಲ. ಮಕ್ಕಳು ಮರಿಗಳೊಂದಿಗೆ ಬಂದಿದ್ದೇವೆ. ಮುದುಕರನ್ನು ಮಾತ್ರ ಊರಿನಲ್ಲಿ ಬಿಟ್ಟು ಬಂದಿದ್ದೇವೆ. ಮೊದ ಮೊದಲು ಮೆಣಸಿಕಾಯಿ ಬಿಡಿಸುವಾಗ ಕೈಗಳು ಉರಿಯುತ್ತಿದ್ದವು. ಕೈಗಳಿಗೆ ಕೊಬ್ಬರಿ ಎಣ್ಣೆ ಸವರಿಕೊಂಡರೆ ಉರಿ ಕಡಿಮೆಯಾಗುತ್ತದೆ. ಈಗ ಅಭ್ಯಾಸವಾಗಿದೆ’ ಎನ್ನುತ್ತಾರೆ ಆಂಧ್ರದ ಬೆಳಗಲ್ ಗ್ರಾಮಸ್ಥರಾದ ಲಕ್ಷ್ಮಿ, ಹನುಮೇಶ ಬೀಸಣಿಗಿ ಅವರು.

***

ಲಾಕ್‌ಡೌನ್‌ ವೇಳೆ ಸಿಲುಕಿದ್ದರು

ಜಿಲ್ಲೆಯಲ್ಲಿ ಲಾಕ್‌ಡೌನ್ ಅದ ವೇಳೆ ಆಂಧ್ರ ವಲಸಿಗರು ಆತಂತ್ರಕ್ಕೆ ಸಿಲುಕಿದ್ದರು. ಕೆಲಸವೂ ಇಲ್ಲದೆ ಊಟಕ್ಕೂ ಪರದಾಡುವ ಸ್ಥಿತಿ ಏರ್ಪಟ್ಟಿತ್ತು. ನಂತರ ದಾನಿಗಳ ಸಹಾಯದಿಂದ ಅವರ ಊರಿಗೆ ಕಳಿಸಿಕೊಡಲಾಗಿತ್ತು.

***

ನಮ್ಮ ಗ್ರಾಮದಲ್ಲಿ ಯಾವುದೇ ಕೆಲಸವಿಲ್ಲದಿದ್ದರಿಂದ ಇಲ್ಲಿಗೆ ಆಗಮಿಸಿದ್ದೇವೆ. 2– 3 ತಿಂಗಳು ಇದ್ದೂ ಊರಿಗೆ ತೆರಳುತ್ತೇವೆ
ಹನುಮೇಶ ಬೀಸಣಿಗಿ, ಬೆಳಗಲ್ ಗ್ರಾಮಸ್ಥ, ಆಂಧ್ರ ವಲಸಿಗರು

***

‌ನಮ್ಮ ಭಾಗದಲ್ಲಿ ಮೆಣಸಿಕಾಯಿ ಬಿಡಲು ಆಂಧ್ರದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಜಮೀನು ಪಕ್ಕದಲ್ಲಿಯೇ ತಾತ್ಕಾಲಿಕ ಗುಡಿಸಲು ಹಾಕಿಕೊಂಡಿದ್ದಾರೆ
ಮಲ್ಲಿಕಾರ್ಜುನ ಜಿ ಅವಂಟಿ, ಯುವ ರೈತ, ಮದ್ರಿಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT