ಯಾದಗಿರಿ: ಭಾರತ್‌ ಬಂದ್‌ ಸಂಪೂರ್ಣ ವಿಫಲ

7
ಸಾಂಕೇತಿಕ ಪ್ರತಿಭಟನೆ ನಡೆಸಿದ ಎಡಪಕ್ಷಗಳು; ಜಾಥಾಕ್ಕೆ ಸೀಮಿತಗೊಂಡ ಕಾಂಗ್ರೆಸ್‌ ಪ್ರತಿಭಟನೆ

ಯಾದಗಿರಿ: ಭಾರತ್‌ ಬಂದ್‌ ಸಂಪೂರ್ಣ ವಿಫಲ

Published:
Updated:
Deccan Herald

ಯಾದಗಿರಿ: ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಕರೆ ನೀಡಿದ್ದ ಭಾರತ್‌ ಬಂದ್‌ ಜಿಲ್ಲೆಯಲ್ಲಿ ಸಂಪೂರ್ಣ ವಿಫಲಗೊಂಡಿತು.

ಒಂದುದಿನ ಮುಂಚಿತವಾಗಿಯೇ ಎಡಪಕ್ಷಗಳು ಆಟೊಗಳಲ್ಲಿ ಸಂಚರಿಸಿ ಮೈಕ್‌ ಹಿಡಿದು ಭಾರತ್‌ ಬಂದ್‌ಗೆ ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿದ್ದವು. ಸಂಘಟನೆಗಳು ಸಹ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದವು. ಹಾಗಾಗಿ, ಬಂದ್‌ನಿಂದಾಗಿ ಜಿಲ್ಲಾಕೇಂದ್ರ ಸ್ತಬ್ಧವಾಗಲಿದೆ ಎಂದೇ ಜನರು ನಿರೀಕ್ಷಿಸಿದ್ದರು. ಆದರೆ, ಎಂದಿನಂತೆ ನಗರದಲ್ಲಿ ನಸುಕಿನಲ್ಲೇ ಹಾಲಿನ ಅಂಗಡಿಗಳು, ಕಾಯಿಪಲ್ಯೆ ಮಾರಾಟ ಸರಾಗವಾಗಿ ಸಾಗಿತ್ತು. 9 ಗಂಟೆ ಹೊತ್ತಿಗೆ ಎಲ್ಲಾ ಅಂಗಡಿ, ಹೊಟೇಲ್‌ಗಳು ಕದ ತೆರೆದಿದ್ದವು.

ಬೆಳಿಗ್ಗೆ 10ರ ಹೊತ್ತಿಗೆ ಎಡಪಕ್ಷಗಳು ಹಾಗೂ ಕರವೇ, ವಿವಿಧ ಸಂಘಟನೆಗಳು ನಗರದ ಪ್ರಮುಖ ವೃತ್ತದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದವು. ಕಾಂಗ್ರೆಸ್‌ ಮುಖಂಡರು ನೂತನ ಬಸ್‌ ನಿಲ್ದಾಣದಲ್ಲಿ ಒಂದೆರಡು ಅಂಗಡಿ ಮಳಿಗೆಗಳ ಕದಮುಚ್ಚಿಸಿ ಬೈಕ್‌ ರ್‍ಯಾಲಿ ನಡೆಸಿದರು.

ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಬಂದ್‌ ಗೊಡವೆಯೇ ಇಲ್ಲದಂತೆ ಎಂದಿನಂತೆ ವಹಿವಾಟು ನಡೆಯಿತು. ಗ್ರಾಮೀಣ ಭಾಗದ ಜನರು ಸಾರಿಗೆ ಸೌಕರ್ಯದ ಕೊರತೆಯಿಂದ ಪರದಾಡಿದ್ದು ಬಿಟ್ಟರೆ ಜಿಲ್ಲಾಕೇಂದ್ರದಲ್ಲಿ ಭಾರತ್‌ ಬಂದ್ ಜನಜೀವನದ ಮೇಲೆ ಪ್ರಭಾವ ಬೀರಲಿಲ್ಲ.

ನಗರಕ್ಕೆ ಗ್ರಾಮೀಣ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಎನ್‌ಇಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಕೊರತೆ ಉಂಟಾಗಲಿರುವುದನ್ನು ಅರಿತ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಶಾಲೆ, ಕಾಲೇಜಿಗೆ ರಜೆ ಘೋಷಿಸಿತ್ತು. ಇದರಿಂದ, ನಗರದಲ್ಲಿ ಒಂದು ರೀತಿಯಲ್ಲಿ ಸರ್ಕಾರಿ ಪ್ರಾಯೋಜಿತ ಬಂದ್‌ ಎಂಬಂತೆ ತೋರುತ್ತಿತ್ತು. ಸುರಪುರ ಹೊರತುಪಡಿಸಿದರೆ ಶಹಾಪುರ, ಹುಣಸಗಿ, ವಡಗೇರಾ, ಗುರುಮಠಕಲ್‌ ತಾಲ್ಲೂಕುಗಳಲ್ಲಿಯೂ ಬಂದ್‌ ವಿಫಲಗೊಂಡಿದೆ.

ಟ್ಯಾಕ್ಸಿ ದರ ದುಪ್ಪಟ್ಟು: ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಜೀಪು, ಟ್ಯಾಕ್ಸಿ, ಆಟೋ ಚಾಲಕರು ದರ ದುಪ್ಪಟ್ಟುಗೊಳಿಸಿದ್ದರು. ಇದರಿಂದ ಹಳ್ಳಿಗಳತ್ತ ಪ್ರಯಾಣ ಬೆಳೆಸಿದ ಜನರು ಬೇಸರ ವ್ಯಕ್ತಪಡಿಸುತ್ತಿದ್ದದ್ದು ಕಂಡುಬಂತು.

ರೈಲು ನಿಲ್ದಾಣ ತುಂಬಿದ ಜನ: ಸಾರಿಗೆ ಸೌಕರ್ಯ ಇಲ್ಲದ್ದರಿಂದ ಜನರು ರೈಲು ಪ್ರಯಾಣಕ್ಕೆ ಮುಂದಾಗಿದ್ದರು. ಇದರಿಂದ ನಗರದ ರೈಲು ನಿಲ್ದಾಣ ಜನರಿಂದ ತುಂಬಿತ್ತು. ಮಧ್ಯಾಹ್ನದವರೆಗೂ ರೈಲು ನಿಲ್ದಾಣದಲ್ಲಿ ಕಾಲಿಡಲು ಜಾಗ ಇಲ್ಲದಂತೆ ಜನರು ರೈಲಿಗಾಗಿ ಕಾದುಕುಳಿತಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !