ಬರ ಪರಿಹಾರಕ್ಕೆ ಸಿಗದ ಚಾಲನೆ

7
ಜಿಲ್ಲೆಯಲ್ಲಿ ಬರ: ₹99.06 ಕೋಟಿ ಮುಂಗಾರು ಬೆಳೆಹಾನಿ

ಬರ ಪರಿಹಾರಕ್ಕೆ ಸಿಗದ ಚಾಲನೆ

Published:
Updated:
Deccan Herald

ಯಾದಗಿರಿ: ಪ್ರಸಕ್ತ ವರ್ಷದಲ್ಲಿ ಬರಕ್ಕೆ ಜಿಲ್ಲೆ ನಲುಗಿ ಹೋಗಿದ್ದು, ಮುಂಗಾರು ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ₹99.06 ಕೋಟಿ ಬೆಳೆಹಾನಿ ಉಂಟಾಗಿದೆ ಎಂಬುದಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಿದೆ. ಒಟ್ಟು ಬಿತ್ತನೆಯಾಗಿದ್ದ 2.50ಲಕ್ಷ ಎಕರೆ ಪ್ರದೇಶದಲ್ಲಿ 1,37,067 ಎಕರೆ ಪ್ರದೇಶ ತೇವಾಂಶ ಕೊರತೆ ಉಂಟಾಗಿ ಬೆಳೆಹಾನಿ ಸಂಭವಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ.

ಮುಂಗಾರು ನಂಬಿದ್ದ ಜಿಲ್ಲೆಯ ರೈತರು ಒಟ್ಟು 2.50ಲಕ್ಷ ಎಕರೆ ಪ್ರದೇಶದಲ್ಲಿ ಬಿತ್ತನೆ ನಡೆಸಿದ್ದರು. ಜನವರಿ ತಿಂಗಳಿಂದ ಅಕ್ಟೋಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 778 ಮಿಲಿ ಮೀಟರ್‌ ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, 387 ಮಿಲಿ ಮೀಟರ್‌ ಮಾತ್ರ ಮಳೆ ಬಿದ್ದಿದೆ. ಅಕ್ಟೋಬರ್‌ ತಿಂಗಳಲ್ಲಿ 117 ಮಿಲಿ ಮೀಟರ್‌ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 27 ಮಿಲಿ ಮೀಟರ್‌ನಷ್ಟು ಕನಿಷ್ಠ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಶೇ77ರಷ್ಟು ಮಳೆ ಕೊರತೆ ಉಂಟಾಗಿದೆ.

ಮಳೆ ಕೊರತೆ ಪರಿಣಾಮ ಏಕದಳ, ದ್ವಿದಳ, ಎಣ್ಣೆಕಾಳು, ವಾಣಿಜ್ಯ ಬೆಳೆಗಳು ನೆಲಕಚ್ಚಿವೆ. ಬರ ಅಧ್ಯಯನ ನಡೆಸಿದ ಸರ್ಕಾರ ಮೊದಲ ಹಂತದಲ್ಲಿ ಜಿಲ್ಲೆಯ ಯಾದಗಿರಿ, ಸುರಪುರ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಿಸಿದೆ. ಶಹಾಪುರ ತಾಲ್ಲೂಕು ಭಾಗಶಃ ಬರಪೀಡಿತ ಎಂದು ಗುರುತಿಸಿದೆ.

ಬರ ಮುನ್ಸೂಚನೆ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನೀಲ್ ಕುಮಾರ್ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದು ಬಿಟ್ಟರೆ, ಜಿಲ್ಲಾಡಳಿತ ಇದುವರೆಗೂ ಬರ ಪರಿಹಾರ ಕುರಿತು ಒಂದೂ ಸಭೆ ನಡೆಸಿಲ್ಲ. ಜಿಲ್ಲೆಯ ರೈತ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚಿಸಿಲ್ಲ.

ಅಕ್ಟೋಬರ್‌ ಆರಂಭದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ(ದಿಶಾ) ಸಭೆ ನಡೆಯಿತು. ಸಭೆಯಲ್ಲಿ ಶಾಸಕರು ಬೆಳೆ ವಿಮೆ ಬಾಕಿ ಕುರಿತು ಚರ್ಚಿಸಿದ್ದಾರೆ. ಆದರೆ, ತೀವ್ರ ಬರಕ್ಕೆ ತುತ್ತಾಗಿರುವ ತಾಲ್ಲೂಕುಗಳ ಬರಪರಿಹಾರ ಕುರಿತು ಗಂಭೀರ ಚರ್ಚೆ ಕೂಡ ನಡೆಸಿಲ್ಲ. ಯಾದಗಿರಿ ಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸುರಪುರ ಕ್ಷೇತ್ರದ ಶಾಸಕ ನರಸಿಂಹ ನಾಯಕ (ರಾಜೂಗೌಡ) ಜಿಲ್ಲಾಡಳಿತಕ್ಕೆ ಚಾಟಿ ಬೀಸುವ ಕೆಲಸವೂ ಮಾಡಿಲ್ಲ.

ಜಿಲ್ಲೆಯಲ್ಲಿನ ‘ಹತ್ತಿಕುಣಿ’ ಮತ್ತು ‘ಸೌದಾಗರ’ ಜಲಾಶಯಗಳು ಭರ್ತಿಯಾಗಿಲ್ಲ. ಜಿಲ್ಲೆಯಲ್ಲಿನ ಬಸವ ಸಾಗರ (ನಾರಾಯಣಪುರ ಜಲಾಶಯ) ಜಲಾಶಯಕ್ಕೆ ವಿಯಜಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಜಲಮೂಲ ಏಕೈಕ ಆಧಾರವಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಸೆ.13ರಿಂದಲೇ ಒಳಹರಿವು ಸ್ಥಗಿತಗೊಂಡಿರುವುದರಿಂದ ಬಸವ ಸಾಗರ (ನಾರಾಯಣಪುರ ಜಲಾಶಯ) ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಹಳ್ಳಿ–ಹಳ್ಳಿಗಳಲ್ಲಿ ಕುಡಿಯುವ ಕುಡಿಯುವ ನೀರಿನ ಹಾಹಾಕಾರ ಉಲ್ಬಣಿಸುತ್ತಿದೆ. ಆದರೂ, ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರಗೌಡ ಪಾಟೀಲ ಅವರು ಬರ ಪರಿಹಾರೋಪಾಯ ಕುರಿತು ಒಂದೂ ಸಭೆ ನಡೆಸಿಲ್ಲ. ಜಿಲ್ಲೆಯಲ್ಲಿ ಉಂಟಾಗುತ್ತಿರುವ ಹಾಹಾಕಾರ ಪರಿಸ್ಥಿತಿಯತ್ತ ಅವರು ಕಣ್ಣೆತ್ತಿಯೂ ನೋಡಿಲ್ಲ!

ಸಮಸ್ಯಾತ್ಮಕ ಗ್ರಾಮಗಳು
ಸುರಪುರ ತಾಲ್ಲೂಕಿನ ಬೂದಿಹಾಳ ಕ್ಯಾಂಪ್, ಎಂ. ಬೊಮ್ಮನಹಳ್ಳಿ, ದೊಡ್ಡಚಾಪಿ ತಾಂಡಾ, ಸಣ್ಣಚಾಪಿ ತಾಂಡಾ, ಎಸ್‌ಕೆ ಅಮ್ಮಾಪುರ, ಬಪ್ಪರಗ, ಕೋಲಿಹಾಳ ದೊಡ್ಡ ತಾಂಡಾ, ಕೋಲಿಹಾಳ ಮೇಲಿನ ತಾಂಡಾ, ಕರಿಬಾವಿ, ಶ್ರೀನಿವಾಸಪುರ, ಅಂಬ್ಲಿಹಾಳ, ಯಾದಗಿರಿ ತಾಲ್ಲೂಕಿನ ಯಂಪಾಡ, ಸುಭಾಷ್ ನಗರ, ಚಂದ್ರಕಿ, ಚಪೆಟ್ಲಾ, ಜಿನಕೇರಾ, ನಸಲ್‌ವಾಯಿ, ಮಾಧ್ವಾರ, ಜೈಗ್ರಾಮ, ಎಲ್ಹೇರಿ, ನಾಗಲ್‌ಪುರ, ಜವಹಾರ್‌ ನಗರ, ಪುಟಪಾಕ, ಮದೆಪಲ್ಲಿ... ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಲಮ್ಯ ವಿಭಾಗ ಈ ಗ್ರಾಮಗಳಲ್ಲಿ ಕೊಳವೆ ಬಾವಿ ತೋಡಿಸಿದ್ದು ಬಿಟ್ಟರೆ, ಕೈಪಂಪ್‌ಗಳನ್ನು ಅಳವಡಿಸಿಲ್ಲ.

ಗೋಶಾಲೆ ಆರಂಭಕ್ಕೆ ಪ್ರಸ್ತಾವ ಇಲ್ಲ
ಜಿಲ್ಲೆಯಲ್ಲಿ ಒಟ್ಟು 3,62,098 ಜಾನುವಾರುಗಳಿವೆ. ಇಷ್ಟು ಪ್ರಮಾಣದ ಜಾನುವಾರುಗಳಿಗೆ ಒಂದು ವಾರಕ್ಕೆ 12,674 ಮೆಟ್ರಿಕ್‌ ಟನ್‌ನಷ್ಟು ಮೇವು ಬೇಕಾಗುತ್ತದೆ. ಆಗಸ್ಟ್‌ ತಿಂಗಳಿನಲ್ಲಿ ಸಭೆ ನಡೆದಾಗ ಪಶುಸಂಗೋಪನಾ ಇಲಾಖೆ ಮುಂದಿನ 20 ವಾರಗಳಿಗೆ ಬೇಕಾಗುವಷ್ಟು ಮೇವಿನ ಸಂಗ್ರಹ ಇದೆ ಎಂದು ವರದಿ ನೀಡಿತ್ತು. ಅದರಲ್ಲಿ ಈಗಾಗಲೇ 10 ವಾರಗಳು ಕಳೆದಿದ್ದು, ಈಗ ಜಿಲ್ಲೆಯಲ್ಲಿ ಮೇವಿನ ಕೊರತೆ ಉದ್ಭವಿಸಿದೆ. ಆದರೆ, ಜಿಲ್ಲಾಡಳಿತ ಗೋಶಾಲೆ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವ ಕೂಡ ಸಲ್ಲಿಸಿಲ್ಲ.

ತಾಲ್ಲೂಕಿಗಳಿಗೆ ತಲಾ ₹25 ಲಕ್ಷ ಅನುದಾನ: ಸಿಇಒ
ಬರ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲೆಯಲ್ಲಿನ ಮೂರು ತಾಲ್ಲೂಕಿಗಳಿಗೆ ತಲಾ ₹25 ಲಕ್ಷ ಅನುದಾನ ಒದಗಿಸಿದೆ. ಈಗಾಗಲೇ ಕುಡಿಯುವ ನೀರಿನ ಕಾಮಗಾರಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಿಯಾಯೋಜನೆ ರೂಪಿಸಿಲಾಗಿದೆ. ತೀವ್ರ ಸಮಸ್ಯಾತ್ಮಕ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕವಿತಾ ಎಸ್‌. ಮನ್ನಿಕೇರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬೆಳೆಹಾನಿ ತಾಲ್ಲೂಕುವಾರು ಹಾನಿ ವಿವರ
ತಾಲ್ಲೂಕು ಬೆಳೆಹಾನಿ ಪ್ರದೇಶ (ಎಕರೆ) ಹಾನಿ ಮೊತ್ತ
ಯಾದಗಿರಿ 30,910 ₹21.01 ಕೋಟಿ
ಶಹಾಪುರ 48,002 ₹32.64 ಕೋಟಿ
ಸುರಪುರ 58,155 ₹45.41 ಕೋಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !