ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣ: ವೆಂಕಟರೆಡ್ಡಿಗೌಡ ಮುದ್ನಾಳ

ಜಿಲ್ಲಾಡಳಿತ ವತಿಯಿಂದ ಬಸವ ಜಯಂತಿ; ವಚನ ಸಂದೇಶ ಪಾಲಿಸಲು ಕರೆ
Last Updated 4 ಮೇ 2022, 2:52 IST
ಅಕ್ಷರ ಗಾತ್ರ

ಯಾದಗಿರಿ: ವಚನಗಳ ಮುಖಾಂತರ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣ ಮಹಾ ಮಾನವತಾವಾದಿ ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣವರು ಬಿಜ್ಜಳ ರಾಜನ ಆಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿದ್ದರು ಎಂದರೆ ಸಾಮಾನ್ಯ ಮಾತಲ್ಲ. ಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಂವಿಧಾನಿಕ ವ್ಯವಸ್ಥೆಗೆ ಮೂಲ ಸ್ವರೂಪ ನೀಡಿದ ಇವರ ತತ್ವ, ಸಿದ್ದಾಂತಗಳನ್ನು ಜಗತ್ತಿನ ಪ್ರತಿ ರಾಷ್ಟ್ರಗಳು ಅನುಸರಿಸುತ್ತಿವೆ. ಅವರ ವಚನಗಳ ಆಶಯಗಳು ನಮ್ಮ ಬದುಕಿಗೆ ದಾರಿದೀಪವಾಗಬೇಕು. ಯುವ ಸಮುದಾಯವು ಬಸವಣ್ಣನವರ ವಚನದ ಹಾದಿಯಲ್ಲಿ ಸಾಗಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಪ್ರಾಸ್ತಾವಿಕ ಮಾತನಾಡಿ, ಪ್ರಜಾಪ್ರಭುತ್ವದ ತಳಹದಿಯ ಮೇಲೆ ಮಾನವೀಯ ಮೌಲ್ಯಗಳನ್ನು ಒಳಗೊಂಡ ತತ್ವ ಸಿದ್ದಾಂತಗಳನ್ನು ಪ್ರತಿಪಾದನೆ ಮಾಡಿದವರು ಬಸಣ್ಣ. ಅಂತರ್ಜಾತಿ ವಿವಾಹ, ವಿಧವಾ ವಿವಾಹ ಮತ್ತು ದೇವದಾಸಿಯರ ಮದುವೆ ಮಾಡುವ ಮುಖಾಂತರ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟರು ಎಂದು ಸ್ಮರಿಸಿದರು.

ಪ್ರತಿಯೊಬ್ಬರು ತಮ್ಮ ತಮ್ಮ ಜೀವನೋಪಾಯಕ್ಕಾಗಿ ಒಂದು ವೃತ್ತಿ ಮಾಡಲೇಬೇಕು. ಅದರಲ್ಲಿಯೇ ದೇವರನ್ನು ಕಾಣಬೇಕು. ಬಸವಣ್ಣನವರು ಕಾಯಕವೇ ಕೈಲಾಸ ಎಂದಿದ್ದಾರೆ ಎಂದರು.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಸುಭಾಶ್ಚಂದ್ರಕೌಲಗಿ ಉಪನ್ಯಾಸ ನೀಡಿ, ಬಸವಣ್ಣನವರ ವಚನಗಳು ಸರ್ವರಿಗೂ ಸಮಬಾಳು, ಸಮಪಾಲು ಎಂಬುದನ್ನು ಸಾರುತ್ತದೆ. ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಲಿಂಗ ತಾರತಮ್ಯ ವಿರೋಧಿಸಿದರು ಎಂದರು.

ಬಸವಣ್ಣನವರ ವಚನಗಳಲ್ಲಿ ವಿಶ್ವಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳ ವಿಚಾರಗಳು ಎಲ್ಲವು ಒಳಗೊಂಡಿವೆ. ಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಗುಡಿಗೆ ಪರ್ಯಾಯವಾಗಿ ಅನುಭವ ಮಂಟಪ, ದಾನಕ್ಕೆ ಸಮನಾಗಿ ದಾಸೋಹ, ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ದಾಂತ ಹೀಗೆ ಪ್ರಜಾಪ್ರಭುತ್ವದ ಎಲ್ಲಾ ಮಾನವೀಯ ಮೌಲ್ಯಗಳನ್ನು ಬಸವಣ್ಣನವರು ಸಾರಿದ್ದಾರೆ.

ಜಾತಿ, ಲಿಂಗ ಸಮಾನತೆ ಹಾಗೂ ಕಾಯಕದ ಮುಖಾಂತರ ತಳ ಸಮುದಾಯದವರನ್ನು ಮೇಲಕ್ಕೆತ್ತಲು ಪ್ರಯತ್ನಿಸಿದ ಬಸವಣ್ಣನವರ ಅನುಭವ ಮಂಟಪ ಜಗತ್ತಿನ ಸಂವಿಧಾನದ ಮೂಲಬೇರು ಎಂದರು.

ಚಂದ್ರಶೇಖರ ಗೋಗಿ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಿದ್ದರಾಜರೆಡ್ಡಿ ನಿರೂಪಿಸಿದರು.

ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಎಸ್ ಚಂಡ್ರಿಕಿ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸೋಮಶೇಖರ ಮಣ್ಣೂರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವೀರಶೈವ ಸಮಾಜದ ಅಯ್ಯಣ್ಣ ಹುಂಡೇಕಾರ, ಶರಣಗೌಡ ಬಾಡಿಯಾಳ, ಆರ್. ಮಹಾದೇವಪ್ಪ, ವೀರಶೈವ ಮಹಾಸಭಾದ ಯುವ ಘಟಕದ ಅಧ್ಯಕ್ಷ ಅವಿನಾಶ್ ಜಗನ್ನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಎಸ್ ಮಠಪತಿ ಹಾಗೂ ಸಿಬ್ಬಂದಿ ಇದ್ದರು.

***

ಸಚಿವ ಚವಾಣ್ ಶುಭಾಹಾರೈಕೆ
ಯಾದಗಿರಿ: ಅನಿವಾರ್ಯ ಕಾರಣಗಳಿಂದಾಗಿ ಯಾದಗಿರಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಬಸವಣ್ಣನ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹೇಳಿದ್ದಾರೆ.

ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಕಲ್ಯಾಣ ನಾಡನ್ನು ತಮ್ಮ ಕರ್ಮಭೂಮಿಯಾಗಿಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು ಎಂದು ಗುಣಗಾನ ಮಾಡಿದ್ದಾರೆ. ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಮರಿಗೂ ಪತ್ರಿಕಾ ಪ್ರಕಟಣೆಯಲ್ಲಿ ನೀಡಿ ಶುಭ ಹಾರೈಸಿದ್ದಾರೆ.

***

ಅಂದು ಬಸವಣ್ಣನ ಕೀರ್ತಿ ಕಲ್ಯಾಣದಿಂದ ಕಾಶ್ಮೀರದವರೆಗಿತ್ತು. ಇವರ ವಚನಗಳು ಓದುಗರಿಗೆ ಬೇವಿನಂತೆ ಕಹಿ ಎನಿಸಿದರೆ, ಅವುಗಳನ್ನು ಆಚರಣೆಗೆ ತಂದಾಗ ಬೆಲ್ಲದಂತೆ ಸಿಹಿಯಾಗುವುದನ್ನು ಕಾಣಬಹುದು
ಸುಭಾಶ್ಚಂದ್ರಕೌಲಗಿ,ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT