ಮಂಗಳವಾರ, ಜೂನ್ 28, 2022
20 °C

ನಾರಾಯಣಪುರ: ಬಸವಸಾಗರ ಜಲಾಶಯಕ್ಕೆ ಡಿಸಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾರಾಯಣಪುರ (ಹುಣಸಗಿ): ರಾಜ್ಯದ ಬೃಹತ್ ನೀರಾವರಿ ಯೋಜನೆಗಳಲ್ಲಿ ಒಂದಾಗಿರುವ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಮಂಗಳವಾರ ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ.ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಲಾಶಯಕ್ಕೆ ಭೇಟಿ ನೀಡಿ ಪ್ರವಾಹದ ಸಂದರ್ಭ ಹಾಗೂ ಪ್ರವಾಹದಿಂದ ಬಾಧಿತವಾಗುವ ಗ್ರಾಮಗಳ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ನೀರಾವರಿ ಅಧಿಕಾರಿಗಳು, ಹುಣಸಗಿ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಅವರಿಂದ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲೆ ಸೇರಿದಂತೆ ಇತರ ಭಾಗಗಳಲ್ಲಿ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ, ಭೀಮಾ ಎರಡು ನದಿಗಳಿಂದ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿ ನಿಭಾಯಿಸುವ ಬಗ್ಗೆ, 2019 ರಲ್ಲಿ ಉಂಟಾದ ಪ್ರವಾಹ ಪರಿಸ್ಥಿಯನ್ನು ಗಮನದಲ್ಲಿಟ್ಟುಕೊಂಡು, ಅಗತ್ಯ ಕ್ರಮ ಕೈಗೊಳ್ಳಲು ಭೇಟಿ ನೀಡಿರುವುದಾಗಿ ಹೇಳಿದರು.

ಎರಡು ನದಿಗಳಲ್ಲಿ ಎಷ್ಟು ಕ್ಯುಸೆಕ್ ಪ್ರಮಾಣದ ನೀರಿನ ಹರಿವಿನಿಂದ ಯಾವ ಗ್ರಾಮಗಳಿಗೆ ತೊಂದರೆಯಾಗಬಹುದು ಎಂಬುದರ ಬಗ್ಗೆ ಆಯಾ ಭಾಗದ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ಜಿಲ್ಲಾಡಳಿತ ವಿಪತ್ತು ನಿರ್ವಹಣೆ ಸಭೆ ನಡೆಸಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪ್ರವಾಹ ಪರಿಸ್ಥಿತಿ ನಿಭಾಯಿಸುವ ಕುರಿತಂತೆ ಜವಾಬ್ದಾರಿ ವಹಿಸಲಾಗಿದೆ ಎಂದು ವಿವರಿಸಿದರು.

ಒಂದು ವೇಳೆ ಪ್ರವಾಹ ಉಂಟಾದಲ್ಲಿ ಗ್ರಾಮಗಳ ಸ್ಥಳಾಂತರ, ಅವಶ್ಯವಿದಲ್ಲಿ ಕಾಳಜಿ ಕೇಂದ್ರ ತೆರೆಯುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಪ್ರವಾಹದಿಂದಾಗುವ ತೊಂದರೆಗಳನ್ನು ಸಮರ್ಥಕವಾಗಿ ನಿಭಾಯಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.

ಲಾಕ್ ಡೌನ್ ವಿಷಯಕ್ಕೆ ಕುರಿತಂತೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಕೋವಿಡ್ ಸೊಂಕಿನ ಸಂಖ್ಯೆ 38ಕ್ಕೆ ಇಳಿದಿದೆ. ಅಲ್ಲದೇ ಮರಣದ ಪ್ರಮಾಣಗಳು ಕಡಿಮೆಯಾಗಿವೆ. ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ, ಕೆಕೆಆರ್.ಡಿಬಿ ಅಡಿಯಲ್ಲಿ ₹ 18 ಕೋಟಿ ವೆಚ್ಚದಲ್ಲಿ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದಕ ಘಟಕ, ಸಿಟಿ ಸ್ಕ್ಯಾನಿಂಗ್ ಮಷೀನ್ ಅಳವಡಿಸುವದು, ಜಿಲ್ಲಾಸ್ಪತ್ರೆಯಲ್ಲಿ 10 ಕೇರ್ ಸ್ಟೋರೆಜ್ ಪ್ಲಾಂಟ್ ಮಾಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 240 ಆಕ್ಸಿಜನ್ ಸಹಿತ ಬೆಡ್‌ಗಳು ಲಭ್ಯವಿದ್ದು, ಮಕ್ಕಳಿಗಾಗಿ 300 ಬೆಡ್‌ಗಳು, ಮಕ್ಕಳಿಗಾಗಿ ವಿಶೇಷ ವೆಂಟಿಲೇಟರ್ ಸಿದ್ಧತೆ ನಡೆದಿವೆ. ಗುತ್ತಿಗೆ ಆಧಾರದ ಮೇಲೆ ವೈದ್ಯರ ನಿಯಮಿಸಿಕೊಂಡಿದ್ದು, ಕೊರೊನಾ ಮೂರನೇ ಅಲೆಯ ಬಗ್ಗೆ ಆತಂಕ ಬೇಡ ಎಂದು ಹೇಳಿದರು.

ಜಿಲ್ಲೆಯ ಗಡಿ ಗ್ರಾಮವಾದ ನಾರಾಯಣಪುರದ ಆಸ್ಪತ್ರೆಗೆ ತಜ್ಞ ವೈದ್ಯರ ನಿಯೋಜನೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಎಡದಂಡೆ ಮುಖ್ಯ ಕಾಲುವೆಗೆ ಸ್ಕಾಡ್ ತಂತ್ರಜ್ಞಾನ ಗೇಟ್ ಅಳವಡಿಸಿರುವ ಬಗ್ಗೆ ಅಣೆಕಟ್ಟು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಅನಗಂಡಿ, ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ, ಉಪತಹಶೀಲ್ದಾರ್ ಬಸವರಾಜ ಬಿರಾದಾರ, ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ ನಾಯ್ಕೋಡಿ, ಎಇಇಗಳಾದ ಆರ್.ಎಲ್ ಹಳ್ಳೂರ, ಬಸವರಾಜ ದೊಡಮನಿ, ಪಿಎಸೈಗಳಾದ ಸಿದ್ದೇಶ್ವರ ಗೆರೆಡೆ, ಬಾಷುಮೀಯಾ, ಕಂದಾಯ ನಿರಿಕ್ಷಕ ಕಲ್ಲಪ್ಪ, ಎಂಜಿನಿಯರ್ ಗಳಾದ ವಿಜಯಕುಮಾರ ಅರಳಿ, ಬಾಲಸುಬ್ರಮಣ್ಯ, ಅಪ್ಪಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.