ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ ನಾಳೆ

ಬಾಗಿನ ಅರ್ಪಿಸಲಿರುವ ಯಾದಗಿರಿ ಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ
Published 10 ಆಗಸ್ಟ್ 2023, 8:27 IST
Last Updated 10 ಆಗಸ್ಟ್ 2023, 8:27 IST
ಅಕ್ಷರ ಗಾತ್ರ

ನಾರಾಯಣಪುರ: ಇಲ್ಲಿನ ಬಸವಸಾಗರಕ್ಕೆ ಒಳಹರಿವು ತಗ್ಗಿದ್ದರಿಂದ ಜಲಾಶಯದ ಎಲ್ಲಾ ಕ್ರಸ್ಟ್‌ಗಳನ್ನು ಬಂದ್ ಮಾಡಲಾಗಿದೆ. ಜಲಾಶಯಕ್ಕೆ ಹೊಂದಿಕೊಂಡಿರುವ ಮುರುಡೇಶ್ವರ ಜಲವಿದ್ಯುತ್ ಸ್ಥಾವರದ ಮೂಲಕ 6 ಸಾವಿರ ಕ್ಯುಸೆಕ್‌ಗಳಷ್ಟು ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಇದರಿಂದ ನಿತ್ಯ 12 ಮೆಗಾವಾಟ್‌ಗಳಷ್ಟು ವಿದ್ಯುತ್‌ ಉತ್ಪಾದಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಕೃಷ್ಣಾ ಜಲಾನಯನ ಪ್ರದೇಶ ಹಾಗೂ ಕೃಷ್ಣಾ ನದಿಯ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರ, ಕೃಷ್ಣಾ ನದಿಯ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದೆ. ಇದರಿಂದ ಆಲಮಟ್ಟಿಯ ಲಾಲ್ ಬಹದ್ದೂರ್‌ ಶಾಸ್ತ್ರಿ ಜಲಾಶಯದ ಒಳಹರಿವು ದಿನದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೀಗಾಗಿ ಆಲಮಟ್ಟಿಯಿಂದ ಬಸವಸಾಗರಕ್ಕೆ ಹರಿಸುತ್ತಿದ್ದ ನೀರಿನ ಪ್ರಮಾಣವನ್ನು ಮಂಗಳವಾರ ರಾತ್ರಿ ವೇಳೆಗೆ 25 ಸಾವಿರ ಕ್ಯುಸೆಕ್‌ಗೆ ತಗ್ಗಿಸಲಾಗಿತ್ತು.

ಬಸವಸಾಗರಕ್ಕೆ ಈ ವರ್ಷದ ಜುಲೈ 23ರಂದು 6 ಸಾವಿರ ಕ್ಯುಸೆಕ್‌ನಷ್ಟು ನೀರಿನ ಒಳಹರಿವು ದಾಖಲಾಗಿತ್ತು. ಅಲ್ಲಿಂದ ಹೆಚ್ಚುತ್ತಲೇ ಹೋದ ಒಳಹರಿವು ಜುಲೈ 27ಕ್ಕೆ 1.70 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಆಗ ಮುಂಜಾಗ್ರತಾ ಕ್ರಮವಾಗಿ ಬಸವಸಾಗರ ಜಲಾಶಯದ ಎಲ್ಲಾ 30 ಕ್ರಸ್ಟ್‌ಗೇಟ್‌ಗಳನ್ನು ತೆರೆದು ಗರಿಷ್ಠ 1.78 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿತ್ತು.

ಅಪಾರ ಪ್ರಮಾಣ ನೀರು ಕೃಷ್ಣಾ ನದಿಗೆ ಹರಿಬಿಟ್ಟಿದ್ದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿತ್ತು. ಸಂಭಾವ್ಯ ಪ್ರವಾಹ ಸ್ಥಿತಿ ನಿರ್ವಹಿಸಲು ನದಿ ತೀರದ ಯಾದಗಿರಿ, ರಾಯಚೂರು ಜಿಲ್ಲಾಡಳಿತಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿತ್ತು.

ಪ್ರಸ್ತುತ ಜಲಾಶಯದ ಗರಿಷ್ಠ 492.25 ಮೀಟರ್‌ ಎತ್ತರದಲ್ಲಿ, ಬುಧವಾರ ಸಂಜೆವರೆಗೆ 491.99 ಮೀಟರ್‌ ತನಕ ನೀರಿತ್ತು. ಗರಿಷ್ಠ ಸಂಗ್ರಹ 33.31 ಟಿಎಂಸಿ ಅಡಿಗಳಲ್ಲಿ 32.09 ಟಿಎಂಸಿ ಅಡಿ ನೀರು ಜಲಾಶಯದಲ್ಲಿ ಸಂಗ್ರಹವಿದೆ ಮೂಲಗಳು ಹೇಳಿವೆ.‌

ಸಚಿವರಿಂದ ಬಾಗಿನ ಭರ್ತಿಯಾಗಿರುವ ಬಸವಸಾಗರ ಜಲಾಶಯಕ್ಕೆ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಆಗಸ್ಟ್‌ 11ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ಅವರ ಜೊತೆಗೆ ಸುರಪುರ ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಉಪಸ್ಥಿತರಿರುವರು ಎಂದು ಕೆಬಿಜೆಎನ್ಎಲ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT