ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓಮೈಕ್ರಾನ್‌’: ಪಿಡುಗಿನ ನೆನಪಲ್ಲಿ ಇರಲಿ ಎಚ್ಚರ

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಇಳಿಕೆ, ರೂಪಾಂತರಿ ತಳಿ ತಡೆಗೆ ಜಿಲ್ಲಾಡಳಿತ ಸಿದ್ಧತೆ; ಸರ್ಕಾರದ ಮಾರ್ಗಸೂಚಿ ಪಾಲನೆಗೆ ಸೂಚನೆ
Last Updated 3 ಜನವರಿ 2022, 4:35 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಇಳಿಕೆಯತ್ತ ಸಾಗಿರುವ ಹೊತ್ತಿನಲ್ಲಿಯೇ ಕೊರೊನಾ ರೂಪಾಂತರಿ ತಳಿ ಓಮೈಕ್ರಾನ್‌ ಬಗ್ಗೆ ಜನರು ಮತ್ತೆ ಎಚ್ಚರ ವಹಿಸುವ ಅಗತ್ಯ ಎದುರಾಗಿದೆ.

ಕೋವಿಡ್‌ ನಿಯಂತ್ರಣಕ್ಕೆ ಆರೋಗ್ಯ, ಕಂದಾಯ, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದು, ಡಿಸೆಂಬರ್‌ ತಿಂಗಳಲ್ಲೇ ಒಂದು ಪ್ರಕರಣ ಪತ್ತೆಯಾಗಿತ್ತು. ಅದು ಜಿಲ್ಲೆಯ ನಿವಾಸಿಗಳಿಗೆ ಸೇರಿದ್ದಲ್ಲ. ಪಕ್ಕದ ರಾಜ್ಯದ ಉದ್ಯೋಗಿಯೊಬ್ಬರಲ್ಲಿ ಮಾತ್ರ ಕೋವಿಡ್ ಪಾಸಿಟಿವ್‌ ಪ್ರಕರಣ ಕಂಡು ಬಂದಿತ್ತು. ಜಿಲ್ಲೆಯ ಜನರು ಕೋವಿಡ್‌ನಿಂದ ಮುಕ್ತರಾಗಿದ್ದಾರೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರುವ ಸಮಯ ಇದಾಗಿದೆ. ಜಿಲ್ಲೆಯಲ್ಲಿ 10 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು ಹೊರ ರಾಜ್ಯಗಳಿಂದ ಬರುವವರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

‘2022ರ ಆರಂಭದಿಂದಲೂ ಮಾರ್ಚ್‌ ತಿಂಗಳವರೆಗೆ ಜಿಲ್ಲೆಯಲ್ಲಿ ವಿವಿಧ ಜಾತ್ರೆ, ರಥೋತ್ಸವ, ಮಾರುಕಟ್ಟೆಯಲ್ಲಿ ಜನಜಂಗುಳಿ, ಮದುವೆ ಇನ್ನಿತರ ಶುಭಸಮಾರಂಭಗಳಲ್ಲಿ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದೆ. ಸಾಧ್ಯವಾದಷ್ಟು ಇವುಗಳನ್ನು ನಿಯಂತ್ರಿಸಿದರೆ ಜನರ ಮತ್ತು ಸಮುದಾಯದ ಆರೋಗ್ಯಕ್ಕೂ ಒಳ್ಳೆಯದು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಪಿಪಿಇ ಕಿಟ್‌, ಪ್ರತ್ಯೇಕವಾಸ ಜ್ಞಾಪಿಸಿಕೊಳ್ಳಿ: ಜನತೆ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಜಿಲ್ಲಾಡಳಿತ ರಾತ್ರಿ ಕರ್ಫ್ಯೂ ವಿಧಿಸಿದೆ. ರಾತ್ರಿ 10 ಗಂಟೆಯಾಗಿ ಪೊಲೀಸರು ಬಂದು ಮುಚ್ಚಿಸುವವರೆಗೂ ಕೆಲವರು ಅಂಗಡಿ, ಮುಂಗಟ್ಟುಗಳಿಗೆ ಬಾಗಿಲು ಹಾಕುವುದಿಲ್ಲ. ಇದರಿಂದ ಕೋವಿಡ್‌ ಪ್ರಕರಣಗಳು ಸ್ಪೋಟಗೊಂಡರೆ ಒಂದನೇ, ಎರಡನೇ ಅಲೆಯಲ್ಲಿ ಉಂಟಾದ ಪರಿಸ್ಥಿತಿಯನ್ನು ಜನರು ನೆನಪಿಸಿಕೊಂಡರೆ ಸಾಕು ಎನ್ನುತ್ತಾರೆ ವೈದ್ಯರು.

ವೈದ್ಯರು, ದಾದಿಯರು, ‘ಡಿ’ ಗ್ರೂಪ್‌ ನೌಕರರು ಸಹಿತ ಪಿಪಿಇ ಕಿಟ್‌ ಹಾಕಿಕೊಂಡು ಸೇವೆ ಸಲ್ಲಿಸುವುದನ್ನು ಜ್ಞಾಪಕ ಮಾಡಿಕೊಳ್ಳಿ. ಅಲ್ಲದೇ ಕೋವಿಡ್‌ ದೃಢಪಟ್ಟ ನಂತರ ಕುಟುಂಬಸ್ಥರಿಂದ ದೂರವಿರಬೇಕಾದ ಪರಿಸ್ಥಿತಿಯನ್ನಾದರೂ ನೆನಪಿಸಿಕೊಂಡು ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವೈದ್ಯಕೀಯ ಮೂಲಗಳು ಸಲಹೆ ನೀಡುತ್ತಿವೆ.

ಜಿಲ್ಲೆಯಲ್ಲಿ ನವೆಂಬರ್ 28ರಿಂದ ಡಿಸೆಂಬರ್ 28ರವರೆಗೆ ಒಂದೂ ಪ್ರಕರಣ ದೃಢಪಡದೇ ಪಾಸಿಟಿವಿಟಿ ದರ ಶೇಡಕವಾರು ಸೊನ್ನೆಯಾಗಿತ್ತು. ಡಿ.30ರಂದು ಹೊರ ರಾಜ್ಯದಿಂದ ಬಂದ ಉದ್ಯೋಗಿಯೊಬ್ಬರಲ್ಲಿ ಕೋವಿಡ್‌ ದೃಢವಾಗಿದ್ದು ಬಿಟ್ಟರೆ ಮತ್ತೆ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿಲ್ಲ.

ಕೋವಿಡ್‌ ಮರಣ ಪ್ರಮಾಣ: ಜಿಲ್ಲೆಯಲ್ಲಿ ಕೋವಿಡ್‌ನಿಂದ 2020ರ ಮೇ 20ರಂದು ಮೊದಲ ಮರಣ ಸಂಭವಿಸಿದ್ದು, ಅಲ್ಲಿಂದ ಇಲ್ಲಿಯ ತನಕ 206 ಮಂದಿ ಸಾವನ್ನಪ್ಪಿದ್ದಾರೆ. 2020ರ ಜೂನ್‌ ತಿಂಗಳಲ್ಲಿ 3, ಆಗಸ್ಟ್‌ 37, ಸೆಪ್ಟೆಂಬರ್, ಅಕ್ಟೋಬರ್ ತಲಾ 10 ಮರಣಗಳಾಗಿದ್ದರೆ, 2021ರ ಏಪ್ರಿಲ್‌ನಲ್ಲಿ 29ಮಂದಿ ಮೃತಪಟ್ಟಿದ್ದಾರೆ. ಮೇ ತಿಂಗಳಲ್ಲಿ ಅತ್ಯಧಿಕ 110 ಜನ ಮೃತಪಟ್ಟಿದ್ದು, ಇದು ಎರಡನೇ ಅಲೆಯ ತೀವ್ರತೆಯನ್ನು ಬಿಂಬಿಸುತ್ತದೆ. ಜೂನ್‌ ತಿಂಗಳಲ್ಲಿ 5 ಜನ ಮೃತಪಟ್ಟಿದ್ದರೆ, ಆಗಸ್ಟ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮೊದಲ ಅಲೆಯಲ್ಲಿ 61 ಜನ ಮೃತಪಟ್ಟರೆ, ಎರಡನೇ ಅಲೆಯಲ್ಲಿ 145 ಜನ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.

ಜಿಲ್ಲಾಡಳಿತ ಸಿದ್ಧತೆ: ಕೋವಿಡ್ 3ನೇ ಅಲೆ ಮತ್ತು ಓಮೈಕ್ರಾನ್ ತಳಿಯ ರೂಪಾಂತರಿ ವೈರಸ್ ತಡೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು, ವಿವಿಧ ವೈದ್ಯಕೀಯ ಸಾಮಗ್ರಿಗಳನ್ನು ಸಂಗ್ರಹ ಮಾಡಿ ಇಟ್ಟುಕೊಂಡಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 40 ಐಸಿಯು ಹಾಗೂ 280 ಆಮ್ಲಜನಕ ಹಾಸಿಗೆ ಸೇರಿ ಒಟ್ಟು 320 ಹಾಸಿಗೆ, 40 ಐಸಿಯು ಬೆಡ್‌ ಪೈಕಿ 30 ಬೆಡ್‌ಗಳಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಉಳಿದ 180 ಬೆಡ್‌ಗಳಿಗೆ ಫ್ಲೋ ಮೀಟರ್ ಲಭ್ಯವಿದೆ.
ಆಮ್ಲಜನಕ ಸಾಂದ್ರಕ 644, ಕೋವಿಡ್‌ ಕೇರ್‌ ಸೆಂಟರ್‌ 21, ಹೆಚ್ಚುವರಿ ವೈದ್ಯರು, ಶುಶೂಷ್ರಕರು ಸೇರಿದಂತೆ ಅಗತ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.

ಸುರಪುರ: ಶೇ 97ರಷ್ಟು ಲಸಿಕಾಕರಣ

ಸುರಪುರ: ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಕೋವಿಡ್ ತಡೆಗಟ್ಟಲು ಕಾರ್ಯನ್ಮೋಖರಾಗಿದ್ದು, ತಹಬಂದಿಗೆ ಬಂದಿದೆ. ಶೇ 97 ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ಶೇ 70 ರಷ್ಟು ಮುಗಿದಿದೆ. ಪ್ರತಿನಿತ್ಯ 300 ರಿಂದ 350 ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ತಾಲ್ಲೂಕಿನಲ್ಲಿ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ.

ಒಟ್ಟು 2.92 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ನೀಡಲಾಗಿತ್ತು. 400 ರಿಂದ 500 ಜನ ಲಸಿಕೆ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದು, ಅವರ ಮನವೊಲಿಸುವ ಕೆಲಸ ನಡೆಯುತ್ತಿದೆ. ತಾಲ್ಲೂಕಿನ ವಿವಿಧ ಆಸ್ಪತ್ರೆಗಳಲ್ಲಿ 280 ಆಮ್ಲಜನಕ ಹಾಸಿಗೆ ಮತ್ತು 10 ವೆಂಟಿಲೇಟರ್ ಹಾಸಿಗೆ ಸಿದ್ಧತೆ ಸ್ಥಿತಿಯಲ್ಲಿವೆ. ಸಮರ್ಪಕ ಆರೋಗ್ಯ ಸಿಬ್ಬಂದಿ, ಆಮ್ಲಜನಕ ಘಟಕ ಇದೆ. ಬಂಡೋಳಿ ಮತ್ತು ಮಲ್ಲಾ ಬಿ. ಗ್ರಾಮಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ದಿನದ 24 ಗಂಟೆಯೂ ಪೊಲೀಸರು ಕರ್ತವ್ಯದಲ್ಲಿರುತ್ತಾರೆ. ಬೆಳಗಿನ ಸಮಯದಲ್ಲಿ ಆರೋಗ್ಯ ಸಿಬ್ಬಂದಿ ಹಾಜರಿರುತ್ತಾರೆ.

ಶಾಲಾ ಕಾಲೇಜುಗಳಲ್ಲಿ ಜಾಗೃತಿ

ಶಹಾಪುರ: ಕೋವಿಡ್ ರೂಪಾಂತರ ತಳಿ ಒಮೈಕ್ರಾನ್ ತಡೆ ಮುನ್ನೆಚ್ಚರಿಕೆ ಕುರಿತು ಆರೋಗ್ಯ ಇಲಾಖೆಯ ಸಿಬ್ಬಂದಿಯು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಈಗಾಗಲೇ ಮೊದಲ ಹಂತದಲ್ಲಿ ಶೇ 95ರಷ್ಟು ಲಸಿಕೆ ಹಾಕಲಾಗಿದೆ. ಎರಡು ಡೋಸ್ ಲಸಿಕೆಯು ಶೇ 72ರಷ್ಟು ಪ್ರಮಾಣ ಆಗಿದೆ.

ನೆರೆ ರಾಜ್ಯದಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ನಿಗದಿಪಡಿಸಿದ ಚೆಕ್ ಪೋಸ್ಟ್ ಬಳಿ ತಪಾಸಣೆ ಕಾರ್ಯ ನಡೆದಿದೆ. ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆಯ ಪ್ರತ್ಯೇಕ ವ್ಯವಸ್ಥೆ ಇದೆ. ಆಮ್ಲಜನಕ ಪ್ಲಾಂಟ್ ಕಾರ್ಯಗತಗೊಳಿಸಲು ಭರದ ಸಿದ್ಧತೆ ನಡೆದಿದೆ. ಸದ್ಯಕ್ಕೆ ಸಿಬ್ಬಂದಿ ಕೊರತೆ ಇಲ್ಲ. ಹೆಚ್ಚುವರಿ ಸಿಬ್ಬಂದಿ ಬೇಕಾದ ಪಕ್ಷದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

*ಕೋವಿಡ್ 3ನೇ ಅಲೆ ಮತ್ತು ಓಮೈಕ್ರಾನ್ ರೂಪಾಂತರಿ ತಳಿ ವೈರಸ್ ತಡೆಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಾಮಗ್ರಿ ಸಂಗ್ರಹ ಮಾಡಿಕೊಟ್ಟುಕೊಳ್ಳಲಾಗಿದೆ. ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಒಟ್ಟಾರೆ ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ

- ಡಾ.ರಾಗಪ್ರಿಯಾ ಆರ್‌, ಜಿಲ್ಲಾಧಿಕಾರಿ

*ಜಿಲ್ಲೆಯ ಸಾರ್ವಜನಿಕರು ಸಾಮಾಜಿಕ ಜವಾಬ್ದಾರಿ ಮೆರೆಯಬೇಕು. ಮಾಸ್ಕ್‌ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು, ಲಸಿಕೆ ಪಡೆಯಬೇಕು. ಇಂತಹ ಕ್ರಮಗಳಿಂದ ಕೋವಿಡ್‌ ನಿಯಂತ್ರಣ ಸಾಧ್ಯ

-ಡಾ.ಲಕ್ಷ್ಮೀಕಾಂತ ಒಂಟಿಪೀರ, ಆರ್‌ಸಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT