ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿವ ಧ್ಯಾನದಿಂದ ಭಕ್ತಿ ಸಂಪನ್ನರಾಗಿ’

ವಿವಿಧೆಡೆ ಮಹಾಶಿವರಾತ್ರಿ, ಜಾಗರಣೆ, ಭಜನೆ, ಶಿವಮಹಾಪುರಾಣ ಪಾರಾಯಣ
Last Updated 23 ಫೆಬ್ರುವರಿ 2020, 10:30 IST
ಅಕ್ಷರ ಗಾತ್ರ

ಯಾದಗಿರಿ: ಪ್ರತಿಯೊಬ್ಬ ಮನುಷ್ಯ ಸದಾಚಾರದಿಂದ ಇರಬೇಕು. ಭಕ್ತಿ ಭಾವದಿಂದ ಶಿವನನ್ನು ಧ್ಯಾನಿಸಿದರೆ ಬದುಕಿನಲ್ಲಿ ಸಂಪನ್ನರಾಗಲು ಸಾಧ್ಯವಾಗುತ್ತದೆ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಅಬ್ಬೆತುಮಕೂರಿನ ಸಿದ್ಧಸಂಸ್ಥಾನ ಮಠದಲ್ಲಿ ಶುಕ್ರವಾರ ರಾತ್ರಿ ಮಹಾಶಿವರಾತ್ರಿ ನಿಮಿತ್ತ ಬೃಹತ್ ಶಿವನ ಪ್ರತಿಮೆಗೆ ವಿಶೇಷ ಅರ್ಚನೆ ಮತ್ತು ಬಿಲ್ವಾರ್ಚನೆ ನೆರವೇರಿಸಿ, ನೆರೆದ ಭಕ್ತ ಸಮೂಹವನ್ನು ಉದ್ದೇಶಿಸಿ ಆರ್ಶೀವಚನ ನೀಡಿದರು.

ಮಹಾ ಶಿವರಾತ್ರಿ ದಿನ ಅತ್ಯಂತ ಪರ್ವ ದಿನವಾಗಿದೆ. ಈ ಪುಣ್ಯ ದಿನವನ್ನು ಪ್ರತಿಯೊಬ್ಬರೂ ಭಕ್ತಿ, ಶ್ರದ್ಧೆ, ನಿಷ್ಠೆಗಳಿಂದ ಶಿವನನ್ನು ಆರಾಧಿಸಬೇಕು. ತ್ರಿಕರ್ಣಪೂರ್ವಕವಾಗಿ ಶಿವನನ್ನು ಭಜಿಸಿದರೆ ಭಕ್ತರಿಗೆ ಆ ಪರ ಶಿವ ಕಾಮಧೇನು ಕಲ್ಪವೃಕ್ಷವಾಗಿ ಬೇಡಿದ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದರು.

ಭಾರತೀಯ ಪರಂಪರೆಯಲ್ಲಿ ಹಬ್ಬಗಳ ಆಚರಣೆ ವೈಶಿಷ್ಠ್ಯ ಪೂರ್ಣವಾಗಿದೆ. ಪ್ರತಿ ಹಬ್ಬದ ಆಚರಣೆಗೆ ತನ್ನದೇ ಆದ ಹಿನ್ನೆಲೆ ಇದೆ. ಅಂತೆಯೇ ಮಹಾ ಶಿವರಾತ್ರಿ ದಿನ ಪ್ರತಿಯೊಬ್ಬರು ಭಕ್ತಿಯಿಂದ ಉಪವಾಸ ವ್ರತವನ್ನು ಆಚರಣೆ ಮಾಡುತ್ತಾರೆ. ಈ ಉಪವಾಸ ವ್ರತ ಆಚರಣೆ ಶಿವನ ಒಲುಮೆಗೆ ಕಾರಣವಾಗುವುದಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತವಾಗಿದೆ. ಅದಕ್ಕಾಗಿ ಎಲ್ಲರೂ ಉಪವಾಸ ವ್ರತ ಆಚರಿಸುವುದು ಯೋಗ್ಯವಾಗಿದೆ ಎಂದು ಹೇಳಿದರು.

ಡಾ.ಸುಭಾಷಚಂದ್ರ ಕೌಲಗಿ, ಎಸ್.ಎನ್.ಮಿಂಚನಾಳ, ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ ಸೇರಿದಂತೆ ಗ್ರಾಮದ ಪ್ರಮುಖರು, ಅನೇಕ ಭಕ್ತರು ಇದ್ದರು.

ರಾಮಕೃಷ್ಣ ವಿವೇಕಾನಂದ ಆಶ್ರಮ:ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಅಹೋರಾತ್ರಿ ಶಿವಮಹಾಪುರಾಣ ಪಾರಾಯಣ ನೆರವೇರಿತು.

ಪಂ. ನರಸಿಂಹಾಚಾರ್ ಪುರಾಣಿಕ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳಾದ ರುದ್ರಾಭಿಷೇಕ, ಪೂಜೆ ಪುನಸ್ಕಾರಗಳು ಜರುಗಿದವು.

ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಭಾಸ್ಕರರಾವ್ ಮುಡಬೂಳ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು. ನಂತರ ಸಂಜೆ 6ರಿಂದ ಆರಂಭಗೊಂಡ ಅಹೋರಾತ್ರಿ ಶಿವಮಹಾಪುರಾಣ ಪಾರಾಯಣವನ್ನು ಆಶ್ರಮದ ವಿದ್ಯಾರ್ಥಿಗಳಾದ ದತ್ತಾತ್ರೇಯ, ಮಲ್ಲಿಕಾರ್ಜುನ, ಮಂಜುನಾಥ ನಡೆಸಿಕೊಟ್ಟರು.

ಆಶ್ರಮದ ಜಿಲ್ಲಾ ಸಂಚಾಲಕ ಪಿ.ವೇಣುಗೋಪಾಲ ಮಾತನಾಡಿ, ವಿದ್ಯಾರ್ಥಿಗಳೇ ಶಿವಮಹಾಪುರಾಣ ಪಾರಾಯಣ ಮಾಡಿರುವುದು ವಿಶೇಷವಾಗಿದೆ. ಇಂಥ ಮಾದರಿ ಕಾರ್ಯಕ್ರಮಗಳು ಎಲ್ಲೆಡೆ ನಡೆದಾಗ ಮಾತ್ರ ಶಾಂತಿ, ನೆಮ್ಮದಿ, ಸೌಹಾರ್ದತೆ, ಭಾವೈಕ್ಯತೆ ನೆಲೆಸಲು ಸಾಧ್ಯ. ವಿಶೇಷವಾಗಿ ಯುವಕರೇ ಸೇರಿಕೊಂಡು ಶಿವಪುರಾಣ ಪಾರಾಯಣದಲ್ಲಿ ಭಾಗಿಯಾಗಿರುವುದು ಮಾದರಿಯಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT