ಯಾದಗಿರಿ: ಸಿಗದ ಜನರ ಸ್ಪಂದನೆ, ಸಾಂಕೇತಿಕ ಪ್ರತಿಭಟನೆಗೆ ಬಂದ್‌ ಸೀಮಿತ

7
ಜಿಲ್ಲಾಕೇಂದ್ರದಲ್ಲಿ ಬಂದ್‌ಗೆ ಸಿಗದ ಜನರ ಸ್ಪಂದನೆ; ಗ್ರಾಮೀಣ ಭಾಗದಲ್ಲಿ ಮಿಶ್ರಪ್ರತಿಕ್ರಿಯೆ

ಯಾದಗಿರಿ: ಸಿಗದ ಜನರ ಸ್ಪಂದನೆ, ಸಾಂಕೇತಿಕ ಪ್ರತಿಭಟನೆಗೆ ಬಂದ್‌ ಸೀಮಿತ

Published:
Updated:
Prajavani

ಯಾದಗಿರಿ: ಸಂಘಟಿತ ಮತ್ತು ಅಸಂಘಟಿತ, ಕೇಂದ್ರ ಸರ್ಕಾರಿ ನೌಕರ ಸಂಘಗಳು ಕರೆ ನೀಡಿದ್ದ ಭಾರತ್‌ ಬಂದ್‌ ಜಿಲ್ಲೆಯಲ್ಲಿ ಕೇವಲ ಸರ್ಕಾರಿ ಬಸ್‌ ಸಂಚಾರ ಸ್ಥಗಿತ, ಸಾಂಕೇತಿಕ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು. ಉಳಿದಂತೆ ಜಿಲ್ಲಾಕೇಂದ್ರದಲ್ಲಿ ಭಾರತ್‌ ಬಂದ್‌ಗೆ ಯಾವ ಸ್ಪಂದನೆಯೂ ಸಿಗದೆ ವಿಫಲಗೊಂಡಿತು.

ಬಂದ್ ಗೆ ಕರೆ ನೀಡಿದವರು ನಸುಕಿನಲ್ಲಿಯೇ ಘೋಷಣಾ ಫಲಕಗಳನ್ನು ಹಿಡಿದು ಚಳಿಯಲ್ಲಿ ನಡುಗುತ್ತಾ ಬಂದ್‌ ಆಚರಿಸುವಂತೆ ಸರ್ಕಾರಿ ಬಸ್‌ ಚಾಲಕರಿಗೆ ಒತ್ತಡ ಹೇರಿದರು. ನಗರ ಮತ್ತು ಗ್ರಾಮೀಣ ರಸ್ತೆ ಮಾರ್ಗಗಳಲ್ಲಿ ಬಸ್‌ ಸಂಚಾರ ನಡೆಸಲು ಸಿದ್ಧರಾಗಿ ಬಂದಿದ್ದ ನೂರಾರು ಚಾಲಕರು ಪ್ರತಿಭಟನಾಕಾರರ ಒತ್ತಡ ಹಾಗೂ ಆಗ್ರಹಕ್ಕೆ ಮಣಿದು ದೂರವಾಣಿಯಲ್ಲಿ ಪ್ರಾದೇಶಿಕ ಸಾರಿಗೆ ನಿಯಂತ್ರಣಾಧಿಕಾರಿ ಸಂತೋಷ್ ಎಂ. ಗೋಗೇರಿ ಅವರನ್ನು ಸಂಪರ್ಕಿಸಿ ಪರಿಸ್ಥಿತಿ ವಿವರಿಸಿದರು. ನಂತರ ಬಸ್‌ಗಳನ್ನು ಡಿಪೋ ಆವರಣದಲ್ಲೇ ನಿಲ್ಲಿಸಿದರು.

ಎಐಟಿಯುಸಿ ಸಂಘಟನೆ ಕಾರ್ಯಕರ್ತರು ನಸುಕಿನಲ್ಲೇ ಟಂಟಂಗಳಲ್ಲಿ ಮೈಕ್‌ ಇಟ್ಟುಕೊಂಡು ನಗರದಲ್ಲಿ ಬಂದ್‌ ಆಚರಿಸುವಂತೆ ನಗರದ ಜನರ ಗಮನ ಸೆಳೆಯುವ ಕೆಲಸ ಮಾಡಿದರು. ಅಸಂಘಟಿತ ಕಾರ್ಮಿಕ ವಲಯದ ಮಹಿಳಾ ಕಾರ್ಮಿಕರು ನಗರದ ಪ್ರಮುಖ ಬೀದಿಗಳಲ್ಲಿ ಬಂದ್‌ ಪ್ರಯುಕ್ತ ಜಾಥಾ ನಡೆಸಿದರು.

ಆದರೆ, ಭಾರತ್‌ ಬಂದ್‌ ಗೆ ನಾಗರಿಕರು ಕಿವಿಗೊಡಲಿಲ್ಲ. ಚಳಿ ಕಡಿಮೆಯಾಗುತ್ತಿದ್ದಂತೆ ನಗರದಲ್ಲಿ ಎಂದಿನಂತೆ ನಿಧಾನವಾಗಿ ಆರಂಭಗೊಂಡ ಜನಸಂಚಾರ ನಂತರ ದಟ್ಟವಾಯಿತು. ಅಲ್ಲೊಂದು ಇಲ್ಲೊಂದು ಕದ ತೆರೆದಿದ್ದ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ 11ರ ಹೊತ್ತಿಗೆ ಸಂಪೂರ್ಣ ಕದ ತೆರೆದು ವಹಿವಾಟು ನಡೆಸಿದವು.

ಗಾಂಧಿ ವೃತ್ತದ ಬಳಿಯ ಕಾಯಿ–ಪಲ್ಯೆ ಹಾಗೂ ಸ್ಟೇಷನ್‌ ಬಜಾರದಲ್ಲಿರುವ ಮಾಂಸ ಮಾರುಕಟ್ಟೆಗಳು ಜೋರಾಗಿಯೇ ನಡೆದವು. ರಸ್ತೆಬದಿಯ ಕೈಗಾಡಿ ಅಂಗಡಿಗಳೂ ಸಹ ರಸ್ತೆಗಳನ್ನು ಅಲಂಕರಿಸಿದ್ದವು. ಆದರೆ, ಖಾಸಗಿ ವಾಹನಗಳ ಸಂಚಾರ ಎಂದಿಗಿಂತ ಜೋರಾಗಿದ್ದವು. ಖಾಸಗಿ ವಾಹನಗಳನ್ನು ಪ್ರತಿಭಟನಾಕಾರರು ಸ್ಥಗಿತಗೊಳಿಸುವುದಿರಲಿ, ಕನಿಷ್ಠ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಲಿಲ್ಲ. ಇದರಿಂದ, ಖಾಸಗಿ ವಾಗಹನಗಳು ಜನರನ್ನು ತುಂಬಿಕೊಂಡು ಹಳ್ಳಿಗಳತ್ತ ಸಂಚರಿಸಿದವು.

ನಗರದ ಶಾಸ್ತ್ರಿವೃತ್ತಕ್ಕೆ ಆಗಮಿಸಿದ ಪ್ರತಿಭಟನಕಾರರು ಅಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರ ತಡೆದರು. ಇದರಿಂದ ಒಂದು ಗಂಟೆಯವರೆಗೂ ಖಾಸಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ರಾಜ್ಯ ಉಪಾಧ್ಯಕ್ಷ ಕೆ. ಸೋಮಶೇಖರ್ ಮಾತನಾಡಿ, ಕೇಂದ್ರ ಸರ್ಕಾರದ ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ, ದುಡಿಯುವ ಜನರ ಜೀವನದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

‘ದೇಶದ ಜನರು ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದಾರೆ. ಅಗತ್ಯ ವಸ್ತುಗಳ ಬೆಳೆಗಳು ಏರುತ್ತಿವೆ. ಆದರೆ ಅದಕ್ಕೆ ತಕ್ಕಂತೆ ಕಾರ್ಮಿಕರು, ನೌಕರರು ಮತ್ತು ದುಡಿಯುವ ಜನರ ವೇತನ ಮತ್ತಿತರ ಸೌಕರ್ಯಗಳು ಏರಿಕೆಯಾಗುತ್ತಿಲ್ಲ. ಇನ್ನೊಂದೆಡೆ ನೋಟು ರದ್ದತಿಯ ನಂತರ ಲಕ್ಷಾಂತರ ಉದ್ಯೋಗಗಳು ನಶಿಸುತ್ತಿವೆ. ಆಹಾರ ಪದಾರ್ಥಗಳು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದಂತಹ ಜೀವನಾವಶ್ಯಕ ವಸ್ತುಗಳ ಬೇಲೆ ಏರಿಕೆಯಿಂದ ಸಮಸ್ತ ಜನ ಸಮುದಾಯ ತತ್ತರಿಸಿದೆ. ಒಪ್ಪತ್ತಿನ ಗಂಜಿಗೂ ಪರಿತಪಿಸುವಂತಹ ಕುಟುಂಬಗಳು ಹೆಚ್ಚುತ್ತಿವೆ. ಸಾರ್ವತ್ರಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಹಂತ ಹಂತವಾಗಿ ನಾಶಗೊಳಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಪ್ರತಿವರ್ಷ ಸಹಸ್ರಾರು ಸಂಖ್ಯೆಯ ಯುವಕ-ಯುವತಿಯರು ವಿವಿಧ ಪದವಿಗಳನ್ನು, ತರಬೇತಿಗಳನ್ನು, ಕೌಶಲಗಳನ್ನು ಮುಗಿಸಿ ಹೊರಬರುತ್ತಿದ್ದಾರೆ. ಅವರಿಗೆ ಗೌರವಯುತವಾದ ಉದ್ಯೋಗಗಳು ಲಭಿಸುತ್ತಿಲ್ಲ. ಇತ್ತೀಚಿಗೆ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಡಿ ಗ್ರೂಪ್ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿಯಲ್ಲಿ ಎಂಜಿನಿಯರಿಂಗ್, ಸ್ನಾತಕೋತ್ತರ ಮತ್ತಿತರ ಸರಿಸಮನಾದ ಉನ್ನತ ಶಿಕ್ಷಣ ಪಡೆದ ಹಲವು ಯುವಕ-ಯುವತಿಯರು ಅರ್ಜಿ ಹಾಕುತ್ತಿರುವುದು ಮತ್ತು ಆಯ್ಕೆಯಾಗುತ್ತಿರುವುದು ದೇಶದಲ್ಲಿರುವ ನಿರುದ್ಯೋಗದ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ’ ಎಂದರು.

ದೇಶದ ಐಸಿಡಿಎಸ್, ಎನ್ಎಚ್ಎಂ, ಎಂಡಿಎಂ ಯೋಜನೆ, ಅಭಿಯಾನಗಳನ್ನು ಆರಂಭಿಸುತ್ತಿರುವ ಕೇಂದ್ರ ಸರ್ಕಾರವು ಅಲ್ಲಿ ಕೆಲಸ ಮಾಡುತ್ತಿರುವ 63 ಲಕ್ಷ ಮಹಿಳಾ ಕಾರ್ಮಿಕರನ್ನು ಕಾರ್ಮಿಕ ಕಾಯ್ದೆಗಳು ಮತ್ತು ಸೇವಾ ನಿಯಮಗಳಿಗೆ ಒಳಪಡದಂತಹ ರೀತಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಆದ್ದರಿಂದ, 43 ವರ್ಷಗಳಿಂದ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, 10 ವರ್ಷಗಳಿಂದ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು, ಮತ್ತು 15-20 ವರ್ಷಗಳಿಂದ ಕೆಲಸ ಮಾಡುತ್ತಿರುವ ಬಿಸಿಯೂಟ ಕಾರ್ಯಕರ್ತೆಯರಿಗೆ ಜೀವನಯೋಗ್ಯ ವೇತನ ಮತ್ತು ನಿವೃತ್ತಿಯ ನಂತರದ ಪಿಂಚಣಿಯಿಂದ ವಂಚಿಸಲಾಗಿದೆ. ಆದ್ದರಿಂದ, ಇಂತಹ ಕಾರ್ಮಿಕರಿಗೆ ಕನಿಷ್ಠ ಜೀವನ ನಿರ್ವಹಣೆಯ ₹18 ಸಾವಿರ ಮಾಸಿಕ ವೇತನ ಮತ್ತು ನಿವೃತ್ತಿಯ ನಂತರ ₹ 6 ಸಾವಿರ ಪಿಂಚಣಿ ನೀಡಬೇಕು ಎಂಬ ಬೇಡಿಕೆಯನ್ನೂ ಸರ್ಕಾರ ಪರಿಗಣಿಸುತ್ತಿಲ್ಲ’ ಎಂದು ದೂರಿದರು.

ದೇಶದ ಕಾರ್ಮಿಕರ ಮತ್ತು ಜನ ಸಾಮಾನ್ಯರ ಜೀವನದ ಪ್ರಮುಖ ವಿಷಯಗಳನ್ನಾಧರಿಸಿದ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಜಿಲ್ಲೆಯ ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರ, ವಸತಿನಿಲಯ ಕಾರ್ಮಿಕರ, ಆಶಾ-ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರ, ಸಾರಿಗೆ, ಪಂಚಾಯಿತಿ, ಮತ್ತಿತರ ಕಾರ್ಮಿಕರು, ನೌಕರರ, ಜನಸಾಮನ್ಯರ, ರೈತರು, ಕೃಷಿ ಕಾರ್ಮಿಕರ, ವಿದ್ಯಾರ್ಥಿ-ಯುವಜನ-ಮಹಿಳೆಯರ, ಒಟ್ಟಾರೆಯಾಗಿ ದುಡಿಯುವ ಸಮಸ್ತ ಜನರ ಪರವಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಆಗ್ರಹಿಸಿತು.

ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾ ಆಧ್ಯಕ್ಷೆ ಡಿ.ಉಮಾದೇವಿ, ಜಿಲ್ಲಾ ಕಾರ್ಯದರ್ಶಿ, ಜೈಲಾಲ್ ತೋಟದಮನಿ, ಉಪಾಧ್ಯಕ್ಷ ಬಿ.ಎ.ರೆಡ್ಡಿ ,ಜಿಲ್ಲಾ ಖಜಾಂಚಿ ಗಾಲಿಬ ಸಾಬ್, ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ಅಧ್ಯಕ್ಷ ಅನ್ನಪೂರ್ಣ ಪಾಟೀಲ್, ಉಪಾಧ್ಯಕ್ಷೆ ಗೌರಮ್ಮ , ಕಾರ್ಯದರ್ಶಿ ಶಾರದಾ ಇತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !