ಸ್ಥಳೀಯ ಸಂಸ್ಥೆ ಚುನಾವಣೆ; ಬಿಜೆಪಿಗೆ ಅಧಿಕಾರ

7
ಶಕ್ತಿಕೇಂದ್ರದ ಪ್ರಮುಖರ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ

ಸ್ಥಳೀಯ ಸಂಸ್ಥೆ ಚುನಾವಣೆ; ಬಿಜೆಪಿಗೆ ಅಧಿಕಾರ

Published:
Updated:
Deccan Herald

ಯಾದಗಿರಿ:‘ಜಿಲ್ಲೆಯ ಸುರಪುರ, ಯಾದಗಿರಿ, ಗುರುಮಠಕಲ್‌ ತಾಲ್ಲೂಕುಗಳಲ್ಲಿ ನಡೆಯಲಿರುವ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಬಿಜೆಪಿ ಮುಖಂಡರು ಶ್ರಮಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.

ಇಲ್ಲಿನ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಬಿಜೆಪಿ ಶಕ್ತಿಕೇಂದ್ರದ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಧಾನಸಭೆ ಚುನಾವಣೆಯಲ್ಲಿ ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಪಡೆಯುತಿತ್ತು. ಆದರೆ, ಟಿಕೆಟ್ ಹಂಚಿಕೆಯಲ್ಲಿ ಪಕ್ಷದಲ್ಲಿ ಆದ ಗೊಂದಲದಿಂದಾಗಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಪಡೆಯಲು ಸಾಧ್ಯವಾಯಿತು. ಸೋಲಿನ ಹೊಣೆಯನ್ನು ಪಕ್ಷದ ಹೊರಲಿದೆ. ಹಿಂದೆ ಆಗಿರುವ ಗೊಂದಲ ಮರೆತು ಪಕ್ಷವನ್ನು ಕಾರ್ಯಕರ್ತರು ಸಂಘಟಿಸಬೇಕಿದೆ’ ಎಂದರು.

‘ಸ್ಥಳೀಯ ಸಂಸ್ಥೆಗಳ ಸಂಘಟನೆ, ಗೆಲುವು ಮುಂದಿನ ಲೋಕಸಭೆ ಚುನಾವಣೆಗೆ ಸಹಕಾರಿಯಾಗಲಿದೆ. ಈ ದೇಶದ ಜನರು ಪ್ರಧಾನಮಂತ್ರಿಯನ್ನಾಗಿ ನರೇಂದ್ರಮೋದಿ ಅವರನ್ನು ಇಚ್ಛಿಸುತ್ತಿದ್ದಾರೆ. ಏಕರೂಪ ತೆರಿಗೆ ಮೂಲಕ ದೇಶವನ್ನು ಆರ್ಥಿಕ ಸದೃಢತೆಯತ್ತ ಕೊಂಡೊಯ್ದ ನರೇಂದ್ರ ಮೋದಿ ಅವರಿಗೆ ಅಧಿಕಾರ ಬಲ ನೀಡಲು ನಾವು ರಾಜ್ಯದಿಂದ 23 ಮಂದಿ ಸಂಸದರನ್ನು ಗೆಲ್ಲಿಸಬೇಕಿದೆ. ಆ ಜವಾಬ್ದಾರಿಯನ್ನು ಪ್ರತಿಯೊಬ್ಬ ಕಾರ್ಯಕರ್ತರು ನಿರ್ವಹಿಸಬೇಕಿದೆ’ ಎಂದು ಸಲಹೆ ನೀಡಿದರು.

‘104 ಶಾಸಕರನ್ನು ಹೊಂದಿರುವ ಬಿಜೆಪಿ ಅತ್ಯಂತ ದೊಡ್ಡ ವಿರೋಧ ಪಕ್ಷವಾಗಿ ಕುಳಿತಿದೆ. ಕೇವಲ 37 ಶಾಸಕರನ್ನು ಒಳಗೊಂಡಿರುವ ಜೆಡಿಎಸ್ ಆಡಳಿತ ಪಕ್ಷವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವಾಗಿದೆ. ಬಿಜೆಪಿ ಅಧಿಕಾರ ಹಿಡಿದು ಕಾಂಗ್ರೆಸ್ ಮುಕ್ತ ರಾಜ್ಯ ಮಾಡಿ ಬಿಡುತ್ತದೋ ಎಂಬ ಭಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಗೆ ಬೆಂಬಲ ನೀಡಿದೆ. ಅಧಿಕಾರ ಪಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತುಘಲಕ್‌ ಆಡಳಿತ ನಡೆಸುತ್ತಿದ್ದರೂ ಕಾಂಗ್ರೆಸ್‌ ನಾಯಕರು ತುಟಿಬಿಚ್ಚದಂತಹ ಸ್ಥಿತಿ ಅನುಭವಿಸುವಂತಾಗಿದೆ’ ಎಂದರು.

‘ರಾಜ್ಯದ ಜನರು ಬಿಜೆಪಿ ಅಧಿಕಾರ ಹಿಡಿಯಲಿ ಎಂಬುದಾಗಿ ಬಯಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಈಗಾಗಲೇ ಆರ್ಥಿಕ ದಿವಾಳಿ ಅನುಭವಿಸುತ್ತಿದೆ. ಸಮ್ಮಿಶ್ರ ನಾಯಕರುಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತಿದೆ. ಅವರದ್ದೇ ಸ್ವಯಂಕೃತ ತಪ್ಪುಗಳಿಂದ ಸರ್ಕಾರ ಉರುಳಲಿದೆ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ,‘ಕಾಂಗ್ರೆಸ್‌ ಮುಕ್ತ ಮಾಡಬೇಕಾದರೆ ಬೂತ್‌ಮಟ್ಟದಲ್ಲಿ ಬಲಪಡಿಸಬೇಕು. ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರತಿ ಬೂತ್‌ಗಳಲ್ಲಿ ಸಭೆ ನಡೆಸಿ ಪ್ರತಿಯೊಂದು ಬೂತ್‌ಗಳಲ್ಲಿ ಬಿಜೆಪಿ ಗೆಲ್ಲಬೇಕು. ಅದಕ್ಕಾಗಿ ಕಾರ್ಯಕರ್ತರು ಮತ್ತು ಮುಖಂಡರು ಶ್ರಮಿಸಬೇಕು’ ಎಂದು ಹೇಳಿದರು.

ಬಿಜೆಪಿ ರಾಜ್ಯದ ಘಟಕ ಉಪಾಧ್ಯಕ್ಷ ಗೋವಿಂದ ಕಾರಜೋಳ ಮಾತನಾಡಿ,‘ಎಪ್ಪತ್ತು ವರ್ಷದ ಅವಧಿಯಲ್ಲಿ ದೇಶವನ್ನು ಅಭಿವೃದ್ಧಿಯತ್ತ ನಡೆಸಿದ ಮೊದಲ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಿದ್ದಾರೆ. ಸ್ವಾತಂತ್ರ್ಯದ ನಂತರ ಈ ದೇಶವನ್ನು ಕಾಂಗ್ರೆಸ್ 56 ವರ್ಷ ಆಳಿತ ನಡೆಸಿದರೂ ಆರ್ಥಿಕ ಸ್ಥಿತಿ, ದೀನದಲಿತರ ಸ್ಥಿತಿ ಅಧೋಗತಿಗೆ ಹೋಗಿತ್ತು. ಇಂದು ದೇಶ ಆರ್ಥಿಕ ಸದೃಢತೆಯಲ್ಲಿ ಜಗತ್ತಿನಲ್ಲಿ 6ನೇ ಸ್ಥಾನದಲ್ಲಿದೆ.’ ಎಂದರು.

ಶಾಸಕರಾದ ನರಸಿಂಹನಾಯಕ (ರಾಜೂಗೌಡ), ವೆಂಕಟರೆಡ್ಡಿ ಮುದ್ನಾಳ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಚಂದ್ರಶೇಖರ ಮಾಗನೂರು ಮಾತನಾಡಿದರು.

ಬಿಜೆಪಿ ಮುಖಂಡರಾದ ಡಾ.ವೀರಬಸಂತರೆಡ್ಡಿ, ಡಾ.ಶರಣಭೂಪಾಲರಡ್ಡಿ, ಅಮರನಾಥ ಪಾಟೀಲ, ಭೀಮಣ್ಣ ಮೇಟಿ, ಖಂಡಪ್ಪ ದಾಸನ್, ನಾಗರತ್ನಾ ಕುಪ್ಪಿ, ಲಲಿತಾ ಅನಪುರ, ದೇವೇಂದ್ರ ನಾದ್, ಶರಣಗೌಡ ಬಾಡಿಯಾಳ ಇತರರು ಇದ್ದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !