ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮೇಲೆ ಮ್ಯಾಸಬೇಡರ ಕೋಪ

Last Updated 11 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ಸಂಸದ ಬಿ.ಶ್ರೀರಾಮುಲು ಅವರಿಗೆ ಮೊಳಕಾಲ್ಮುರು ಕ್ಷೇತ್ರದಲ್ಲಿ ಟಿಕೆಟ್‌ ಘೋಷಿಸಿದ ಪರಿಣಾಮವಾಗಿ ಬಿಜೆಪಿ, ಅಲ್ಲಿ ಪ್ರಬಲರಾಗಿರುವ ಮ್ಯಾಸಬೇಡರ ಕೋಪವನ್ನು ಎದುರಿಸುತ್ತಿದೆ. ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ಮೊದಲೇ ಶ್ರೀರಾಮುಲು ಅವರಿಗೂ ತಮ್ಮದೇ ಸಮುದಾಯದಿಂದ ಪ್ರತಿರೋಧ ಎದುರಾಗಿದೆ.

ಪರಿಶಿಷ್ಟ ಪಂಗಡದ ಮ್ಯಾಸಬೇಡ ಸಮುದಾಯಕ್ಕೆ ಸೇರಿದ ಹಾಲಿ ಶಾಸಕ ಎಸ್‌.ತಿಪ್ಪೇಸ್ವಾಮಿ ಬದಲಿಗೆ, ಊರುಬೇಡ ಸಮುದಾಯಕ್ಕೆ ಸೇರಿದ ಶ್ರೀರಾಮುಲು ಅವರಿಗೆ ಟಿಕೆಟ್‌ ಘೋಷಿಸಿದ್ದು, ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.

‘ಸಮಾಜದಲ್ಲಿ ಊರುಬೇಡರಿಗಿಂತಲೂ ಮ್ಯಾಸಬೇಡರಿಗೆ ಕಡಿಮೆ ಅವಕಾಶಗಳು ದೊರಕಿವೆ. ಈಗ ಟಿಕೆಟ್‌ ತಪ್ಪಿಸಿದ್ದರಿಂದ ರಾಜಕೀಯ ಅವಕಾಶವೂ ಕೈ ತಪ್ಪಿದಂತಾಗಿದೆ’ ಎಂಬುದು ಈ ಸಮುದಾಯದ ಆಕ್ರೋಶಕ್ಕೆ ದಾರಿ ಮಾಡಿದೆ.

ಬಳ್ಳಾರಿ, ಕೂಡ್ಲಿಗಿ, ಸಂಡೂರು, ಕಮಲಾಪುರ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಮಾತ್ರ ಮ್ಯಾಸಬೇಡರು ಹೆಚ್ಚಾಗಿದ್ದಾರೆ.

‘ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ರಾಜ್ಯದ 15 ಕ್ಷೇತ್ರಗಳ ಪೈಕಿ, ಮ್ಯಾಸಬೇಡರು ಹೆಚ್ಚಿರುವ ಮೊಳಕಾಲ್ಮುರು ಕ್ಷೇತ್ರದಲ್ಲಿ ಅದೇ ಸಮುದಾಯದ ಶಾಸಕರಿಗೆ ಟಿಕೆಟ್‌ ತಪ್ಪಿಸುವ ಮೂಲಕ ಬಿಜೆಪಿ ಸಾಮಾಜಿಕ ನ್ಯಾಯವನ್ನು ಮೂಲೆಗುಂಪು ಮಾಡಿದೆ’ ಎಂದು ಆ ಸಮುದಾಯದ ಮುಖಂಡ ಶಿವಕುಮಾರ ಮಾಳಗಿ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ಯೊಂದಿಗೆ ಬುಧವಾರ ಮಾತನಾಡಿದ ಅವರು, ‘ನಮ್ಮ ಸಮುದಾಯಕ್ಕೆ ಸೇರಿದ ಈ. ತುಕಾರಾಂ ಸಂಡೂರಿನಲ್ಲಿ, ಎಚ್‌.ಪಿ.ರಾಜೇಶ್‌ ಜಗಳೂರಿನಲ್ಲಿ, ರಘುಮೂರ್ತಿ ಚಳ್ಳಕೆರೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ತಿಪ್ಪೇಸ್ವಾಮಿ ಮೊಳಕಾಲ್ಮುರಿನಲ್ಲಿ ಗೆದ್ದಿದ್ದರು’ ಎಂದರು.

ಸೋಲಿಸ್ತೇವೆ: ‘ಶ್ರೀರಾಮುಲು ತಮ್ಮ ತವರು ಕ್ಷೇತ್ರ ಬಿಟ್ಟು ಇಲ್ಲಿ ಬಂದು ಸ್ಪರ್ಧಿಸುವ ತಪ್ಪು ನಿರ್ಧಾರ ಕೈಗೊಂಡಿದ್ದಾರೆ. ಅವರನ್ನು ಸೋಲಿಸುವುದೇ ನಮ್ಮ ಗುರಿ’ ಎಂದರು.

‘ನಾವು ಮೂರ್ತಿ ಪೂಜೆ ಮಾಡುವುದಿಲ್ಲ. ಸಮುದಾಯದ ಹೋರಾಟಗಾರರನ್ನು ಪೂಜಿಸುತ್ತೇವೆ. ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ನೀಡದಿದ್ದರೆ ಸಮುದಾಯದ ಎಲ್ಲರೂ ಸೇರಿ ಶ್ರೀರಾಮುಲು ಅವರನ್ನು ಸೋಲಿಸುವುದೇ ಗುರಿ’ ಎಂದರು.

ತಿಪ್ಪೇಸ್ವಾಮಿಗೇ ಟಿಕೆಟ್‌: ಆಗ್ರಹ

ಬಳ್ಳಾರಿ: ಸಂಸದ ಶ್ರೀರಾಮುಲು ಅವರ ಇಲ್ಲಿನ ಮನೆಗೆ ಮುತ್ತಿಗೆ ಹಾಕಲು ಬುಧವಾರ ಸಂಜೆ ಬಂದ
ಮೊಳಕಾಲ್ಮುರು ಕ್ಷೇತ್ರದ ಟಿಕೆಟ್‌ ವಂಚಿತ ಬಿಜೆಪಿ ಶಾಸಕ ಎಸ್‌.ತಿಪ್ಪೇಸ್ವಾಮಿ ಅವರ ಸಾವಿರಾರು ಬೆಂಬಲಿಗರನ್ನು ಪೊಲೀಸರು ತಡೆದು ವಾಪಸ್‌ ಕಳಿಸಿದರು.

ಸಂಜೆ 5ರ ವೇಳೆಗೆ ಸುಮಾರು 80 ವಾಹನಗಳಲ್ಲಿ ಬಂದ ಬೆಂಬಲಿಗರನ್ನು ಎಪಿಎಂಸಿ ಚೆಕ್‌ಪೋಸ್ಟ್‌ ಬಳಿಯೇ ಪೊಲೀಸರು ತಡೆದು ನಿಲ್ಲಿಸಿದರು. ಅಲ್ಲಿ ಮುಖಂಡರೊಂದಿಗೆ ಚರ್ಚಿಸಿದ ಎಸ್ಪಿ ಅರುಣ್‌ ರಂಗರಾಜನ್‌, ‘ಸಂಸದರು ಇಲ್ಲದಿರುವುದರಿಂದ ಮನೆಗೆ ಮುತ್ತಿಗೆ ಹಾಕಲು ಅವಕಾಶ ಕೊಡುವುದಿಲ್ಲ. ಶಾಂತಿಯುತವಾಗಿ ಕೊಂಚ ದೂರ ಮೆರವಣಿಗೆ ನಡೆಸಿ ವಾಪಸಾಗಿ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಸಮ್ಮತಿಸಿದ ಮುಖಂಡರು, ಎಚ್‌.ಆರ್‌.ಗವಿಯಪ್ಪ ವೃತ್ತದವರೆಗೂ ನಡೆದುಕೊಂಡು ಬಂದರು. ಅಲ್ಲಿಂದ ಅವರು ಮುಂದಕ್ಕೆ ಹೋಗದಂತೆ ತಡೆಯಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

‘ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ಘೋಷಣೆಯಾಗುವವರೆಗೂ ಪ್ರತಿಭಟನೆ ನಡೆಸುತ್ತೇವೆ’ ಎಂದು ಮುಖಂಡ ಜೆ.ಎಸ್‌.ದಿವಾಕರ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT