ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರು ಪಾಂಡವ ವಂಶದವರು: ಮುದ್ನಾಳ

ಶಾಸಕ ನಾಗನಗೌಡ ಕಂದಕೂರ ಹೇಳಿಕೆಗೆ ಬಿಜೆಪಿ ತಿರುಗೇಟು
Last Updated 9 ಸೆಪ್ಟೆಂಬರ್ 2019, 20:20 IST
ಅಕ್ಷರ ಗಾತ್ರ

ಯಾದಗಿರಿ: ‘ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಶಾಸಕ ನಾಗನಗೌಡ ಕಂದಕೂರ ಹಗುರವಾಗಿ ಮಾತನಾಡಿರುವುದು ಖಂಡನೀಯ. ಕಾಂಗ್ರೆಸ್‌–ಜೆಡಿಎಸ್‌ನಲ್ಲಿ ಮಾತ್ರ ದುರ್ಯೋಧನ, ದುಶ್ಯಾಸನನಂಥವರಿದ್ದು, ಬಿಜೆಪಿಯಲ್ಲಿ ಪಾಂಡವರು ಇದ್ದಾರೆ’ ಎಂದು ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ ತಿರುಗೇಟು ನೀಡಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ‘ನಾಗನಗೌಡ ಅವರು ಬಿಜೆಪಿ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಇನ್ನು ಮುಂದೆ ನಮ್ಮ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ. ಭ್ರಷ್ಟಾಚಾರಿಗಳು ಕಾಂಗ್ರೆಸ್‌–ಜೆಡಿಎಸ್‌ನಲ್ಲಿದ್ದು, ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ ಇಡಿಯಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್‌ನ ಹಲವರು ವಿದೇಶಗಳಲ್ಲಿ ಮನೆ ಮತ್ತು ವ್ಯವಹಾರ ಹೊಂದಿದ್ದಾರೆ. ಹೀಗಾಗಿ ಅವರೇ ಭ್ರಷ್ಟಾಚಾರಿಗಳು. ಅದನ್ನು ಬಿಟ್ಟು ಬಿಜೆಪಿಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ’ ಎಂದರು.

‘ಜಿಲ್ಲೆಯಲ್ಲಿ ಸದಸ್ಯತ್ವದ ಅಭಿಯಾನ ಇನ್ನೂ ಹೆಚ್ಚು ಮಾಡಬೇಕು. ಸಣ್ಣ ಜಿಲ್ಲೆಯಿಂದ ಹೆಚ್ಚಿನ ಸದಸ್ಯರನ್ನಾಗಿ ಮಾಡಿ ತೋರಿಸಬೇಕು ಎಂದು ಕಾರ್ಯಕರ್ತರಿಗೆ’ ಸಲಹೆ ನೀಡಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಮಾತನಾಡಿ, ‘ಸಂವಿಧಾನ, ಸಿಐಡಿ, ಸಿಬಿಐ, ಇಡಿ ಇವು ಯಾವು ಬಿಜೆಪಿ ಅಂಗ ಸಂಸ್ಥೆಗಳಲ್ಲ. ಆದರೂ ವಿರೋಧ ಪಕ್ಷಗಳು ಇವುಗಳನ್ನು ಆಡಳಿತ ಪಕ್ಷ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ ಬಳಿ ವೈಟ್‌ಮನಿ ಇದ್ದರೆ ಭಯಪಡಬೇಕಿರಲಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದು ಮಾರ್ಮಿಕವಾಗಿ ನುಡಿದರು.

‘370 ವಿಧಿ ರದ್ದತಿಯಿಂದ ಭಯೋತ್ಪಾದನೆ ನಿರ್ಮೂಲನೆಗೆ ಮೊದಲ ಹೆಜ್ಜೆ ಇಡಲಾಗಿದೆ. ಕಾಶ್ಮೀರದಲ್ಲಿ ಹಿಂದೆ ಎಸ್‌ಸಿ, ಎಸ್ಟಿಯವರಿಗೆ ಮೀಸಲಾತಿ ನೀಡಿಲ್ಲ. ಕಾಂಗ್ರೆಸ್‌ನವರು ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆ. ಇಸ್ರೋ ಸಾಧನೆಯಿಂದ ದೇಶ ಹೆಮ್ಮೆ ಪಡುವಂತೆ ಆಗಿದೆ. ಇಸ್ರೋ ಅಧ್ಯಕ್ಷರನ್ನು ಪ್ರಧಾನಿ ಮೋದಿಯವರು ಮಗುವಿನಂತೆ ಸಂತೈಸಿದ್ದಾರೆ’ ಎಂದರು.

ಶಾಸಕ ಹಾಲಪ್ಪ ಆಚಾರ ಮಾತನಾಡಿ, ‘ದೇಶದಲ್ಲಿ ಬಿಜೆಪಿ ಪಕ್ಷ ಬಲಿಷ್ಠ ವಾಗಿದ್ದು, ಪಕ್ಷ ಸಂಘಟನೆ ಮುಖಾಂತರ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸುತ್ತಿದ್ದಾರೆ. ಎಲ್ಲಾ ಕಾರ್ಯಕರ್ತರು ಪಕ್ಷ ಸಂಘಟನೆಗೆ ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅಧ್ಯಕ್ಷತೆ ವಹಿಸಿದ್ದರು.

ಇದಕ್ಕೂ ಮುನ್ನ ಇತ್ತೀಚಿಗೆ ಭಾರತೀಯ ಇಸ್ರೋ ವಿಜ್ಞಾನಿಗಳು ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆ ಮಾಡಿದ ಶ್ರಮಕ್ಕೆ ಜಿಲ್ಲಾ ಬಿಜೆಪಿಯಿಂದ ನೈತಿಕ ಬೆಂಬಲಕ್ಕಾಗಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.

ಸಭೆಯಲ್ಲಿ ಡಾ.ವೀರಬಸವಂತರಡ್ಡಿ ಮುದ್ನಾಳ, ಮಾಜಿ ಸಚಿವರಾದ ಡಾ.ಎ.ಬಿ.ಮಾಲಕರಡ್ಡಿ, ದೇವೇಂದ್ರನಾಥ ನಾದ, ವೇಣು ಮಾಧವ ನಾಯಕ, ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಲಲಿತಾ ಅನಪೂರ, ಶರಣಗೌಡ ಬಾಡಿಯಾಳ, ಸಾಯಿಬಣ್ಣಾ ಬೋರಬಂಡ, ಖಂಡಪ್ಪ ದಾಸನ್, ದೇವರಾಜ ನಾಯಕ, ಡಾ. ಮಲ್ಲಣಗೌಡ ಉಕ್ಕನಾಳ, ರಾಜು ಉಕ್ಕನಾಳ, ಎಸ್.ಪಿ.ನಾಡೇಕರ್, ರವಿ ಮಾಲಿಪಾಟೀಲ, ಹಣಮಂತ ಇಟಿಗಿ, ಸ್ವಾಮಿದೇವ ದಾಸನಕೇರಿ, ವೆಂಕಟರಡ್ಡಿ ಅಬ್ಬೆ ತುಮಕೂರ, ಚೆನ್ನಾರಡ್ಡಿ ಮರಕಲ್, ವೀಣಾ ಮೋದಿ, ಗೋಪಾಲ ದಾಸನಕೇರಿ, ಬಸವರಾಜ ಪಾಟೀಲ ಬಿಳ್ಹಾರ, ಶ್ರೀಕಾಂತ ಸುಬೇದಾರ, ಸಿದ್ದಣ್ಣಗೌಡ ಕಾಡಂನ್ನೂರ, ಸುನಿತಾ ಚವ್ಹಾಣ, ನರಸಿಂಹಲು ನಿರಹಟ್ಟಿ, ‌ವೆಂಕಟಪ್ಪ ಆಲಂಪೂರ, ಸುರೇಶ ಕೋಟಿಮನಿ, ಶಿವರಾಜ ಜಕಾತಿ ಸೇರಿದಂತೆ ವಿವಿಧ ಮೋರ್ಚಾದ ಮುಖಂಡರು ಇದ್ದರು.


ಜಿಲ್ಲೆಗೆ ವೈದ್ಯಕೀಯ ಕಾಲೇಜು ಸ್ಥಾಪನೆ ಅವಶ್ಯವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿ ಇಲ್ಲಿಯವರನ್ನು ಅವಮಾನಸಿದ್ದಾರೆ. ಈಗ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಅನುಮತಿಗಾಗಿ ಶಿಫಾರಸ್ಸು ಮಾಡಿದ್ದಾರೆ.
ವೆಂಕಟರೆಡ್ಡಿ ಗೌಡ ಮುದ್ನಾಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT