ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋನಾಳ ರಾಜ್ಯದ ಅತಿದೊಡ್ಡ ಪಕ್ಷಿಧಾಮ

ರಾಜ್ಯ ಸರ್ಕಾರದಿಂದ ಶೀಘ್ರವೇ ಘೋಷಣೆ
Last Updated 27 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಯಾದಗಿರಿ: ಸುರಪುರ ತಾಲ್ಲೂಕಿನ ಬೋನಾಳ ಕೆರೆ ಪ್ರದೇಶವನ್ನು ರಾಜ್ಯದ ಅತಿದೊಡ್ಡ ಪಕ್ಷಿಧಾಮ ಎಂದು ಘೋಷಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಕೆರೆ ಮತ್ತು ಪಕ್ಷಿಧಾಮದ ಸಮಗ್ರ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯು ಈಗಾಗಲೇ ಯೋಜನೆ ರೂಪಿಸಿದ್ದು, ₹ 2 ಕೋಟಿ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಿದೆ. ಪ್ರವಾಸೋದ್ಯಮದಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂಬ ನಿರೀಕ್ಷೆ ಇಲಾಖೆಯದ್ದು.

‘ಸುರಪುರದಿಂದ 12 ಕಿ.ಮೀ.ದೂರದಲ್ಲಿರುವ ಬೋನಾಳ ಕೆರೆ ಪ್ರದೇಶಕ್ಕೆ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ರಷ್ಯಾ, ಸೈಬಿರೀಯಾ, ಅರ್ಜೆಂಟಿನಾ ಮುಂತಾದ ದೇಶಗಳಿಂದ ಸಾವಿರಾರು ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಬರುತ್ತವೆ. ಕೆರೆಯ ದಡದಲ್ಲಿರುವ ಉದ್ಯಾನವನ್ನು ಅಭಿವೃದ್ಧಿಪಡಿಸುತ್ತೇವೆ’ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಜನಿಕಾಂತ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆಯ ಇತಿಹಾಸ:ಸುರಪುರ ಸಂಸ್ಥಾನದ ಪ್ರಧಾನ ಮಂತ್ರಿಯಾಗಿದ್ದ ನಿಷ್ಠಿ ವೀರಪ್ಪ ಸಲಹೆಯಂತೆ ಅರಸರು ಈ ಕೆರೆ ನಿರ್ಮಿಸಿದರು ಎಂದು ದಾಖಲೆಗಳು ಹೇಳುತ್ತವೆ. ಬ್ರಿಟಿಷ್ ಅಧಿಕಾರಿ ಫಿಲಿಪ್‌ ಮೆಡೋಸ್‌ ಟೇಲರ್ 1845ರಲ್ಲಿ ತಮ್ಮ ಆತ್ಮಚರಿತ್ರೆಯಲ್ಲಿ ಬೋನಾಳ ಕೆರೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕೆರೆಯು ಎರಡು ಮೈಲಿ ಉದ್ದ ಮತ್ತು ಆಗಲವಿದ್ದು, 10 ರಿಂದ 15 ಅಡಿ ಆಳವಿತ್ತು ಎಂದು ಉಲ್ಲೇಖಿಸಿದ್ದಾರೆ. ಬ್ರಿಟಿಷ್ ಅಧಿಕಾರಿ ಫ್ರೆಜರ್ ಮೂಲಕ ಹೈದರಾಬಾದ್ ನಿಜಾಮರಿಂದ ಹಣ ಬಿಡುಗಡೆ ಮಾಡಿಸುವಲ್ಲಿ ಟೇಲರ್ ಪ್ರಮುಖ ಪಾತ್ರ ವಹಿಸಿದ್ದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಳಿ ಇರುವ ರಂಗನತಿಟ್ಟು ಪಕ್ಷಿಧಾಮದ ವ್ಯಾಪ್ತಿ 40 ಎಕರೆ ಇದೆ. ಬೋನಾಳ ಕೆರೆಯು 600ಕ್ಕೂ ಹೆಚ್ಚು ಎಕರೆ ವಿಸ್ತಾರ ಹೊಂದಿದ್ದು, ಕೆರೆಗೆ ಕೃಷ್ಣಾ ನದಿಯಿಂದಲೂ ನೀರು ಹರಿಸಲಾಗುತ್ತಿದೆ.

*
ಬೋನಾಳ ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿ ಘೋಷಣೆಯಾಗಲಿದೆ. ಇನ್ನೆರಡು ದಿನದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ.
-ರಜನಿಕಾಂತ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

*ಬೋನಾಳ ಕೆರೆಯ ಉದ್ಯಾನ ಹಾಳಾಗಿದ್ದು, ನಿರ್ವಹಣೆ ಕೊರತೆ ಇದೆ. ಶೀಘ್ರ ಮೂಲಸೌಲಭ್ಯ ಕಲ್ಪಿಸಬೇಕು. ಪ್ರವಾಸಿಗರನ್ನು ಸೆಳೆಯುವ ಕೆಲಸವಾಗಬೇಕು.
–ಭಾಸ್ಕರ್‌ರಾವ್ ಮೂಡಬೂಳ್, ಇತಿಹಾಸ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT