ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಗಡಿ ನಾಡಲ್ಲಿ ಕನ್ನಡ ಅಧೋಗತಿ

ಕನ್ನಡ ನೆಲದಲ್ಲಿ ಇದ್ದರೂ ಪರಿಕೀಯ ಭಾವನೆ, ವ್ಯಾಪಾರ,ವಹಿವಾಟಿಗೆ ತೆಲಂಗಾಣವೇ ಆಶ್ರಯ
Last Updated 29 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಗುರುಮಠಕಲ್, ಸೈದಾಪುರ ಗಡಿ ಭಾಗದಲ್ಲಿ ಕನ್ನಡದ ಸ್ಥಿತಿಗತಿ ಅಧೋಗತಿಗೆ ಇಳಿದಿದೆ. ಕನ್ನಡ ನೆಲದಲ್ಲಿ ಇದ್ದರೂ ಪರಕೀಯ ಭಾವನೆ ಬರುವಂತೆ ಮಾಡಲಾಗಿದೆ.

ಈ ಭಾಗದ ರಾಜಕೀಯ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕನ್ನಡವೂ ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿದೆ. ಕನ್ನಡಕ್ಕಿಂತ ತೆಲುಗು ಮಾತನಾಡುವವವರೆ ಸಿಗುತ್ತಾರೆ. ಒಂದು ತಲೆಮಾರುನಲ್ಲಿ ಕನಿಷ್ಠ ಒಬ್ಬರಾದರೂ ತೆಲಂಗಾಣದಿಂದ ಹೆಣ್ಣು ಕೊಟ್ಟಿರುವುದು ಸಾಮಾನ್ಯವಾಗಿದೆ. ಅಲ್ಲಿಂದ ತಂದಿರುವುದು ಕಂಡು ಬರುತ್ತದೆ.

ಮಾರುಕಟ್ಟೆ, ವ್ಯಾಪಾರ ವಹಿವಾಟಿಗೆ ತೆಲಂಗಾಣವೇ ಹತ್ತಿರ ಇರುವುದರಿಂದ ಅಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ತೆರಳುತ್ತಾರೆ. ಈ ಭಾಗದಲ್ಲಿ ಎಲ್ಲ ಸಾಮಗ್ರಿಗಳು ಒಂದೆಡೆ ಸಿಗುತ್ತವೆ ಎನ್ನುವ ಭರವಸೆ ಇಲ್ಲ. ಹೀಗಾಗಿ ಯಾದಗಿರಿಗೆ ಬರುವ ವೆಚ್ಚಕ್ಕಿಂತ ಅಲ್ಲಿಯೇಸಾಮಾನುಗಳು ಸಿಗುವುದರಿಂದ ಅದು ಅವರಿಗೆ ಸೂಕ್ತ ಮಾರುಕಟ್ಟೆ ಸ್ಥಳವಾಗಿದೆ.

ಕನ್ನಡ ಕಾರ್ಯಗಳು ನಡೆಯುತ್ತಿಲ್ಲ:ಗಡಿ ಭಾಗದಲ್ಲಿ ಕನ್ನಡದ ಕಾರ್ಯಗಳೇ ನಡೆಯುತ್ತಿಲ್ಲ. ಗಡಿನಾಡು ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕನ್ನಡದ ಕಾರ್ಯಗಳು ನಡೆಯದಿದ್ದರಿಂದ ಕನ್ನಡ ಸ್ಥಿತಿ ಹೇಳಿಕೊಳ್ಳುವ ಮಟ್ಟಿಗೆ ಇಲ್ಲ.

ಗಡಿಭಾಗದ ಕನ್ನಡಿಗರು ಅತಂತ್ರ: ಕನ್ನಡ ಭಾಷೆಯಲ್ಲಿ ಕಲಿತರೂ ಉದ್ಯೋಗ ಇಲ್ಲದೆ ಮತ್ತೆ ಗುಳೆ ಅಥವಾ ತೆಲಂಗಾಣ, ಹೈದರಾಬಾದ್‌ಗೆ ವಲಸೆ ಹೋಗುವುದು ತಪ್ಪಿಲ್ಲ. ಕನ್ನಡ ನೆಲಕ್ಕಿಂತ ತೆಲುಗು ಪ್ರಭಾವ ಹೆಚ್ಚಿರುವುದರಿಂದ ಕನ್ನಡಿಗರು ಅತಂತ್ರರಾಗಿದ್ದಾರೆ. ದಿನ ನಿತ್ಯದ ಭಾಷೆ ಬಳಕೆಯಲ್ಲಿ ಕನ್ನಡಕ್ಕಿಂತ ಹೆಚ್ಚು ತೆಲುಗು ಬಳಕೆಯಲ್ಲಿದೆ.

ಗುರುಮಠಕಲ್‌ನಿಂದ ನಾರಾಯಣಪೇಟ್‌ 20 ಕೀ.ಮೀ. ಅಂತರದಲ್ಲಿದೆ. ಅದೇ ಯಾದಿಗರಿ 45 ಕೀ.ಮೀ. ಇದೆ. ಹೀಗಾಗಿ ಈ ಭಾಗದ ಜನರು ಕರ್ನಾಟಕಕ್ಕೆ ಬರುವುದಕ್ಕಿಂತ ವ್ಯಾಪಾರ ವಹಿವಾಟು, ಮದುವೆ ಸಂಬಂಧ ಇನ್ನಿತರ ಕಾರ್ಯಕ್ಕೆ ತೆಲಂಗಾಣಕ್ಕೆ ತೆರಳುತ್ತಾರೆ. ಜಿಲ್ಲಾ ಕೇಂದ್ರವಲ್ಲದಿದ್ದರೂ ಸೌಕರ್ಯಗಳಿಗೆ ಕೊರತೆ ಇಲ್ಲ. ಅಲ್ಲದೆ ಖರ್ಚು ಕಡಿಮೆಯಾಗುತ್ತದೆ. ಎಲ್ಲ ವಸ್ತುಗಳು ಸಿಗುತ್ತದೆ. ದವಸ, ಧಾನ್ಯ ಮಾರಾಟಕ್ಕೂ ಕೂಡ ತೆಲಂಗಾಣವೇ ಪ್ರಮುಖ ಮಾರುಕಟ್ಟೆಯಾಗಿದೆ. ಹೋಗಿ ಬರುವ ಖರ್ಚು ಕಡಿಮೆ ಇರುವುದರಿಂದ ಆದಾಯ ಹೆಚ್ಚಿಗೆ ಸಿಗುತ್ತದೆ.

ಪಾಠೋಪಕರಣ ಇರಲ್ಲ, ಶಿಕ್ಷಕರ ಕೊರತೆ:ಗಡಿ ಭಾಗದ ಶಾಲೆಗಳಲ್ಲಿ ಶಿಕ್ಷರಕ ಕೊರತೆ ಇರುವುದರಿಂದ ಕನ್ನಡ ಶಾಲೆಗಳಿಗಿಂತ ತೆಲುಗು ಶಾಲೆಗಳಲ್ಲಿ ಮಕ್ಕಳು ಕಲಿಯುತ್ತಿರುವುದು ಕಡಿಮೆ ಏನಿಲ್ಲ. ಶಿಕ್ಷಕರ ಕೊರತೆಯಿಂದ ಅತಿಥಿ ಶಿಕ್ಷಕರನ್ನು ಸರ್ಕಾರ ಅಗಸ್ಟ್‌ ತಿಂಗಳಲ್ಲಿ ತೆಗೆದುಕೊಳ್ಳುತ್ತಾರೆ. ಹೀಗಾಗಿ ಜೂನ್‌, ಜುಲೈನಲ್ಲಿ ಸರಿಯಾದ ಪಾಠಗಳೆ ಆಗುತ್ತಿಲ್ಲ. ಕೆಲವೊಂದು ಶಾಲೆಗಳಲ್ಲಿ ಪಾಠೋಪಕರಣ, ಪೀಠೋಪಕರಗಳೇ ಇರುವುದಿಲ್ಲ. ಹೀಗಾಗಿ ಮೂಲ ಸೌಕರ್ಯಗಳ ಕೊರತೆಯಿಂದ ಇಲ್ಲಿಗೆ ಬರುವ ಶಿಕ್ಷಕರು ತಮ್ಮ ಸ್ಥಳಗಳಿಗೆ ಹೋಗುವ ತವಕದಿಂದ ಇಲ್ಲಿ ಸರಿಯಾದ ಪಾಠ ಬೋಧನೆ ಮಾಡುವುದಿಲ್ಲದ ಎನ್ನುವ ಆರೋಪವೂ ಇದೆ.

ಕನ್ನಡ ಅಸ್ತಿತ್ವವೇ ಮಯಾ:ಕಲೆ, ಸಾಹಿತ್ಯ, ಸಂಸ್ಕೃತಿ ಅಲ್ಲದೆ ಕನ್ನಡಿಗರ ಅಸ್ತಿತ್ವವನ್ನೆ ನಾಶವಾಗುತ್ತಿದೆ. ಕನ್ನಡ ಶಾಲೆಗಳು, ಕನ್ನಡ ಸಂಸ್ಥೆಗಳು ನಿಷ್ಕ್ರಿಯವಾಗಿವೆ. ಗಡಿನಾಡು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಅಲ್ಲಿನ ಕನ್ನಡಿಗರೆ ದೂರುತ್ತಾರೆ.

ತೆಲುಗು ಅನಿವಾರ್ಯ:ಇಲ್ಲಿ ತೆಲುಗು ಭಾಷೆ ಅನಿವಾರ್ಯವಾಗಿದೆ ಹೊರತು ಕನ್ನಡ ಬಳಕೆ ಅನಿವಾರ್ಯವಲ್ಲ. ಊಟ ಕೊಡುವ ಭಾಷೆ ತೆಲುಗು ಆಗಿದೆ. ಕನ್ನಡಿಗರಿಗೆ ಉದ್ಯೋಗ ಅವಕಾಶಗಳು ಇಲ್ಲ.

ಕನ್ನಡದಲ್ಲಿ ಓದಿ ತೆಲುಗು ಭಾಷಾಂತರ!:15 ವರ್ಷಗಳಿಂದೆ ಶಿಕ್ಷಕರು ಕನ್ನಡದಲ್ಲಿ ಓದಿ ತೆಲುಗುನಲ್ಲಿ ಕಲಿಸಿಕೊಡಲಾಗುತ್ತಿತ್ತು. ಅಂದರೆ ಕನ್ನಡ ಕಲಿಕೆ ಅಷ್ಟೊಂದು ಮಟ್ಟಿಗೆ ಹಿಂದೆ ಉಳಿದಿತ್ತು.

ಗುರುಮಠಕಲ್‌ನ ಖಾಸಾ ಮಠದಿಂದ ಕನ್ನಡ ಬೆಳವಣಿಗೆಗೆ ಕಾಳಜಿ ವಹಿಸಲಾಗಿದೆ. ‌ಖಾಸಾ ಮಠದ ಹಿಂದಿನ ಪೀಠಾಧೀಪತಿ ಸಂಗಮೇಶ ಶ್ರೀಗಳ ಆರಾಧನೆಯನ್ನು ವಚನ ಸಾಹಿತ್ಯ ಹಮ್ಮಿಕೊಳ್ಳುವ ಮೂಲಕ ಮಾಡಲಾಗುತ್ತಿದೆ.

ಸರ್ಕಾರವೇ ನಮ್ಮನ್ನು ದೂರ ಮಾಡಿದೆ:ಈ ಭಾಗದಲ್ಲಿ ಕನ್ನಡಿಗರ ಹಿತ ರಕ್ಷಣೆ ಮಾಡದ ಹಿನ್ನೆಲೆಯಲ್ಲಿ ಸರ್ಕಾರವೇ ನಮ್ಮನ್ನು ದೂರ ಮಾಡಿದೆ ಎನ್ನುವ ಭಾವನೆ ಇಲ್ಲಿಯವರಾದ್ದಾಗಿದೆ. ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಒದಗಿಸುತ್ತಿಲ್ಲ. ಇದರಿಂದ ಬೇರೆ ಪ್ರಾಂತ್ಯ ಎಷ್ಟೋ ಚೆನ್ನಾಗಿದೆ ಎನ್ನುವ ಮಟ್ಟಿಗೆ ಇಲ್ಲಿಯವರು ಕರ್ನಾಟಕ ಸರ್ಕಾರದ ವಿರುದ್ಧ ರೋಸಿ ಹೋಗಿದ್ದಾರೆ.

***
ಬದುಕುವ ಭಾಷೆಯಾಗಬೇಕು ಕನ್ನಡ
ಕನ್ನಡ ಉಳಿಯಬೇಕಾದರೆ ಸರ್ಕಾರ ಒಂದನೇ ತರಗತಿಯಿಂದ 10ನೇ ತರಗತಿ ವರೆಗೆ ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದವರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು. ಕನ್ನಡವನ್ನು ಬದುಕುವ ಭಾಷೆಯಾಗಿ ಕಲಿಸಿದರೆ ಮಾತ್ರ ಕನ್ನಡ ಉಳಿಯಲು ಸಾಧ್ಯ. ಈ ಬಾರಿ ಸರ್ಕಾರವೇ 1000 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಿದ್ದು, ಇದಕ್ಕೆ ವಿರುದ್ಧವಾಗಿ ನಾವು ಹೋರಾಟ ಮಾಡಿದ್ದೇವೆ. ಆದರೆ, ಸರ್ಕಾರವೇ ಕನ್ನಡ ಶಾಲೆಗಳನ್ನು ಮುಚ್ಚಿಸಲು ಪ್ರೇರೇಪಣೆ ನೀಡಿದಂತೆ ಆಗಿದೆ.
-ಸಿದ್ದಪ್ಪ ಹೊಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷರು, ಯಾದಗಿರಿ

***
ಶೇಕಡ 70 ರಷ್ಟು ತೆಲುಗು, ಶೇಕಡ 30 ರಷ್ಟು ಕನ್ನಡ
ಅನಪುರ, ಫುಟ್‌ಪಾಕ, ಮಿನಾಸಪುರ, ನಜರಪುರ, ಕಾಚಾವಾರ ಗ್ರಾಮ ಪಂಚಾಯಿತಿ ವ್ಯಾಪ್ತಿ, ಗುರುಮಕಲ್‌ ಪಟ್ಟಣ ಪ್ರದೇಶದಲ್ಲಿ ಇಂದಿಗೂ ಶೇಕಡ 70ರಷ್ಟು ತೆಲುಗು, ಶೇಕಡ 30 ರಷ್ಟು ಕನ್ನಡ ಮಾತನಾಡುತ್ತಾರೆ. ಪಠ್ಯಪುಸ್ತಕದಲ್ಲಿ ಮಾತ್ರ ಕನ್ನಡ ಬಳಿಕೆಯಲ್ಲಿದೆ. ಅಲ್ಲದೆ ಶಿಕ್ಷಕರ ಮಟ್ಟದಲ್ಲಿ ಮಾತ್ರ ಕನ್ನಡ ಬಳಕೆಯಲ್ಲಿದೆ. ಪ್ರಬಂಧ ಸ್ಪರ್ಧೆ, ಪಠ್ಯ ಪುಸ್ತಕದ ಚರ್ಚೆ ಮಾಡಿದರೆ ಕನ್ನಡ ಉಳಿಯಲು ಸಾಧ್ಯವಿದೆ. ಈ ಭಾಗದಲ್ಲಿ ಸಾಹಿತಿಗಳಿಗೆ ಕೊರತೆ ಇದೆ.
‌-ಬಸರೆಡ್ಡಿ ಪಾಟೀಲ ಎಂ.ಟಿ. ಪಲ್ಲಿ, ತಾಲ್ಲೂಕು ಕಸಾಪ ಅಧ್ಯಕ್ಷರು, ಗುರುಮಠಕಲ್

***
ಕನ್ನಡ ಪರ ವಾತಾವರಣ ಇದೆ
ಹಿಂದೆ ಗಡಿನಾಡಲ್ಲಿ ಶಿಕ್ಷಕರು ಮಾತ್ರ ತೆಲುಗುನಲ್ಲಿ ಪಾಠ ಮಾಡಿರುವ ಉದಾಹರಣೆ ಇದೆ. ಈಗ ಶಿಕ್ಷಕರು ಟಿಇಟಿ ಪಾಸಾಗಿ ಬರಬೇಕಾಗಿದ್ದರಿಂದ ಅಂಥ ವಾತಾವರಣ ಇಲ್ಲ. ಆ ಭಾಗದಲ್ಲಿ ತೆಲುಗು ಮೇಲೆ ಹೆಚ್ಚು ಅವಲಂಬಿತರಾಗಿದ್ದರಿಂದ ಅದು ಬಳಕೆಯಲ್ಲಿದೆ. ಈಗೀಗ ಕನ್ನಡ ವಾತಾವರಣ ಸೃಷ್ಟಿಯಾಗುತ್ತಿದೆ. ಬರುಬರುತ್ತಾ ಕನ್ನಡ ಪ್ರೇಮ ಹೆಚ್ಚಾದಂತೆ ಬಳಕೆಯೂ ಹೆಚ್ಚಲಿದೆ.
-ಡಿ.ಎಂ.ಹೊಸಮನಿ, ಪ್ರಭಾರಿ ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT