ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಾದ್ಯಂತ ಮೆದುಳು ಜ್ವರ ಲಸಿಕಾ ಅಭಿಯಾನ

ಡಿಸೆಂಬರ್‌ 25ರ ವರೆಗೆ ನಡೆಯುವ ಅಭಿಯಾನ, ಯಶಸ್ವಿಗೊಳಿಸಿಗೊಳಿಸಲು ಮುದ್ನಾಳ ಕರೆ
Last Updated 5 ಡಿಸೆಂಬರ್ 2022, 16:19 IST
ಅಕ್ಷರ ಗಾತ್ರ

ಯಾದಗಿರಿ: ಮೆದುಳು ಜ್ವರ ಕಾಯಿಲೆ ತಡೆಗಟ್ಟಲು ಡಿಸೆಂಬರ್‌ 5ರಿಂದ 25ರವರೆಗೆ ನಡೆಯುವ ಅಭಿಯಾನದಲ್ಲಿ ಜಿಲ್ಲೆಯಾದ್ಯಂತ 1 ರಿಂದ 15 ವಯೋಮಾನದ ಮಕ್ಕಳಿಗೆ ತಪ್ಪದೇ ಜೆಇ ಲಸಿಕಾಕರಣದಲ್ಲಿ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಕನ್ಯಾಪ್ರೌಢ ಶಾಲೆಯಲ್ಲಿ ನಡೆದ ಮೆದುಳು ಜ್ವರ ಕಾಯಿಲೆ ತಡೆಗಟ್ಟಲು (ಜೆಇ) ಲಸಿಕಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್., ಮಾತನಾಡಿ, ಭವಿಷ್ಯದಲ್ಲಿ ಮಕ್ಕಳಿಗೆ ಮೆದುಳು ಜ್ವರ ಬಾಧಿಸದಂತೆ ತಡೆಯುವ ನಿಟ್ಟಿನಲ್ಲಿ ವಿಶೇಷ ಮುನ್ನೆಚ್ಚರಿಕೆ ವಹಿಸಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಲಸಿಕಾಕರಣ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ 1,336 ಅಂಗನವಾಡಿ ಕೇಂದ್ರ ಮತ್ತು 1,618 ಶಾಲೆಗಳು ಸೇರಿದಂತೆ ಐದು ವರ್ಷದ ಒಳಗಿನ 1,24,452 ಮಕ್ಕಳು, 6 ರಿಂದ 15 ವರ್ಷದ 2,65,647 ಮಕ್ಕಳು ಒಟ್ಟು 3,90,099 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 400 ಲಸಿಕಾ ತಂಡ, ಜಿಲ್ಲೆಯಾದ್ಯಂತ ನಡೆಯುವ ಲಸಿಕಾ ಸತ್ರಗಳ ಸಂಖ್ಯೆ 2,748 ಹಾಗೂ ಜೆಇ ಲಸಿಕಾಕರಣದ 108 ಮೇಲ್ಲಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಅಭಿಯಾನದ ಅಂಗವಾಗಿ ಜಿಲ್ಲೆಯ ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರಗಳ, ವಸತಿ ಶಾಲೆ, ವಸತಿ ನಿಲಯ ಮಕ್ಕಳಿಗೆ ತಪ್ಪದೇ ಲಸಿಕಾ ಹಾಕಿಸಬೇಕು. ಪಾಲಕರು, ಶಿಕ್ಷಕರು, ಎಸ್‌ಡಿಎಂಸಿಗಳೊಂದಿಗೆ ಸಭೆ ನಡೆಸಿ ಲಸಿಕೆ ಮಹತ್ವದ ಕುರಿತು ತಿಳಿಹೇಳಬೇಕು ಎಂದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಗಮನ ನೀಡಬೇಕು. ಆರೋಗ್ಯ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನುಡಿದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರುದ್ರಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ ಆರ್ ನಾಯ್ಕ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಗುರುರಾಜ ಹಿರೇಗೌಡ, ಆರ್‌ಸಿಎಚ್‌ಒ ಡಾ.ಮಲ್ಲಪ್ಪ, ಡಿಡಿಪಿಐ ಶಾಂತಗೌಡ ಪಾಟೀಲ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕ ಪ್ರಭಾಕರ್ ಕವಿತಾಳ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಲಕ್ಷ್ಮೀಕಾಂತ ಒಂಟಿಪೀರ, ತಾಲ್ಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮುಬಾಶಿರ ಸಾಜೀದ್‌, ಐಎಂಎ ಅಧ್ಯಕ್ಷ ಡಾ.ಭಗವಂತ ಅನ್ವರ ಇದ್ದರು.

***

ಜಗತ್ತಿನಲ್ಲಿ ಸಾಕಷ್ಟು ಕಾಯಿಲೆಗಳು ಹೆಮ್ಮಾರಿಯಾಗಿ ಕಾಡುತ್ತಿದ್ದು, ಅವುಗಳನ್ನು ತೊಡೆದು ನಮ್ಮನ್ನು ರಕ್ಷಿಸಿಕೊಳ್ಳಲು ಲಸಿಕಾಕರಣ ಬಹು ಮುಖ್ಯವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಸ್ನೇಹಲ್ ಆರ್., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT