ಗುರುವಾರ , ಡಿಸೆಂಬರ್ 8, 2022
18 °C
1 ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ; ನಾಯ್ಕ್

ಮೆದುಳು ಜ್ವರ; ಡಿ.5ರಿಂದ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮೆದುಳು ಜ್ವರ ತಡೆಗಟ್ಟಲು ಡಿಸೆಂಬರ್ 5 ರಿಂದ 25ರ ವರೆಗೆ ನಡೆಯುವ ಅಭಿಯಾನದಲ್ಲಿ ಜಿಲ್ಲೆಯಾದ್ಯಂತ 1 ರಿಂದ 15 ವಯೋಮಾನದ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರೇಶ ನಾಯ್ಕ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೆದುಳು ಜ್ವರ ಲಸಿಕಾ ಅಭಿಯಾನ ಹಮ್ಮಿಕೊಳ್ಳುವ ಕುರಿತ ಜಿಲ್ಲಾ ಕಾರ್ಯಪಡೆ ಸಭೆಯಲ್ಲಿ ಅವರು ಮಾತನಾಡಿದರು.

ಮೆದುಳು ಜ್ವರಕ್ಕೆ ಜಪಾನೀಸ್ ಎನ್‌ಸೆಫಲೈಟಿಸ್ (ಜೆಇ) ಮುಖ್ಯ ಕಾರಣವಾಗಿದ್ದು, ವೈರಾಣುವಿನಿಂದ ಉಂಟಾಗುತ್ತದೆ. ಕ್ಯೂಲೆಕ್ಸ್ ಸೊಳ್ಳೆಗಳ ಮೂಲಕ ಈ ಕಾಯಿಲೆ ಹರಡುತ್ತದೆ. ಇದಕ್ಕೆ (ಜೆಇ) ಲಸಿಕೆ ಚುಚ್ಚುಮದ್ದು ಪರಿಣಾಮಕಾರಿ ಅಸ್ತ್ರವಾಗಿರುವುದರಿಂದ ಮಕ್ಕಳಿಗೆ ಶೇ 100 ರಷ್ಟು ಲಸಿಕೆ ಹಾಕಿಸುವಂತೆ ಸೂಚನೆ ನೀಡಿದರು.

ಈ ಅಭಿಯಾನದ ಅಂಗವಾಗಿ ಜಿಲ್ಲೆಯ ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರಗಳ, ವಸತಿ ಶಾಲೆ, ವಸತಿ ನಿಲಯ ಮಕ್ಕಳಿಗೆ ತಪ್ಪದೇ ಲಸಿಕಾ ಹಾಕಿಸಬೇಕು. ಪಾಲಕರು, ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಲಸಿಕೆ ಮಹತ್ವದ ಕುರಿತು ತಿಳಿಹೇಳಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಗಮನ ನೀಡಬೇಕು. ಆರೋಗ್ಯ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಅಭಿಯಾನ ಯಶಸ್ವಿ ಗೊಳಿಸಬೇಕು ಎಂದು ಸೂಚಿಸಿದರು.

ಡಿಸೆಂಬರ್ 5 ರಿಂದ ಚಾಲನೆಗೊಳ್ಳುವ ಈ ಅಭಿಯಾನದ ಅಂಗವಾಗಿ ಮೊದಲನೇ ವಾರದಲ್ಲಿ ಎಲ್ಲಾ ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ಆಯೋಜಿಸಿ ಲಸಿಕಾಕರಣ ನಡೆಸಬೇಕು. ನಂತರದ ಎರಡು ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಇನ್ನಿತರ ಪ್ರದೇಶಗಳಲ್ಲಿ ಲಸಿಕಾಕರಣ ನಡೆಸಬೇಕು. ಈ ಅಭಿಯಾನವನ್ನು ಕಟ್ಟೆಚ್ಚರದಿಂದ ಹಮ್ಮಿಕೊಳ್ಳಬೇಕು ಎಂದರು.

ಜೆಇ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಜ್ವರ ಪೀಡಿತನಾಗಿದ್ದು, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಹೊಂದಿರುತ್ತಾನೆ. ಅಪಸ್ಮಾರವು ಉಂಟಾಗಬಹುದು. ಜಪಾನೀಸ್ ಎನ್‌ಸೆಫಲೈಟಿಸ್ (ಜೆಇ) ಮಾರಕ ಕಾಯಿಲೆಯನ್ನು ತಡೆಗಟ್ಟಲು ಲಸಿಕೆ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ. ಅಧಿಕಾರಿಗಳು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಈಗಾಗಲೇ ರಾಜ್ಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆ ಸೇರಿದಂತೆ 10 ಜಿಲ್ಲೆಗಳಲ್ಲಿ ಜೆಇ ಲಸಿಕೆಯನ್ನು ಮಕ್ಕಳಿಗೆ 9 ತಿಂಗಳು ತುಂಬಿದ ನಂತರ ಮೊದಲಬೇ ಡೋಸ್ ಮತ್ತು 1.5 ವರ್ಷದ ವಯಸ್ಸಿನಲ್ಲಿ 2ನೇ ಡೋಸ್ (ಜೆಇ) ಲಸಿಕೆ ಚುಚ್ಚುಮದ್ದು ನೀಡಲಾಗುತ್ತಿದೆ ಎಂದರು.

ಯಾದಗಿರಿ ಜಿಲ್ಲೆಗಳಲ್ಲಿ ಜೆಇ ನಾನ್ ಟ್ರಾನ್ಸ್ಮಿಷನ್ ಸಮಯದಲ್ಲಿ ಜೆಇ ಲಸಿಕಾ ಅಭಿಯಾನ ಹಮ್ಮಿಕೊಳ್ಳಲು ನಿರ್ದೇಶಿಸಿದ್ದು, ಈ ಅಭಿಯಾನದಲ್ಲಿ 1 ರಿಂದ 15 ವರ್ಷದ ಮಕ್ಕಳಿಗೆ ಒಂದು ಡೋಸ್ ಜೆಇ ಲಸಿಕೆ ಚುಚ್ಚುಮದ್ದು ನೀಡಲಾಗುವುದು ಎಂದು
ಹೇಳಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮಲ್ಲಪ್ಪ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.