ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್ | ಯಾದಗಿರಿ ಜಿಲ್ಲೆಯ ಮೂಲಸೌಕರ್ಯಕ್ಕೆ ಬೇಕಿದೆ ಆದ್ಯತೆ

ರಸ್ತೆ, ಚರಂಡಿ, ಶುದ್ಧ ನೀರಿನ ಘಟಕಕ್ಕೆ ಅನುದಾನ ಸಿಗುವುದೇ? ಜಿಲ್ಲಾ ಕೇಂದ್ರದಲ್ಲೇ ಸೌಕರ್ಯಗಳ ಕೊರತೆ
Last Updated 18 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಯಾದಗಿರಿ: ಯಾದಗಿರಿ ಜಿಲ್ಲೆಯಾಗಿ 11 ವರ್ಷಗಳಾದರೂ ಇನ್ನೂ ಮೂಲಸೌಕರ್ಯ ವಂಚಿತ ಜಿಲ್ಲೆಯಾಗಿದೆ. ಈ ಬಾರಿಯಾದರೂ ಬಜೆಟ್‌ನಲ್ಲಿಪ್ಯಾಕೇಜ್‌ ಘೋಷಣೆ ಘೋಷಣೆಯಾಗುವ ಭರವಸೆ ಇಲ್ಲಿನ ಜನತೆಯಲ್ಲಿದೆ.

ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಸ್ಥಾನವನ್ನು ಹೊಂದಿದ್ದು, ಮೂಲಸೌಲಭ್ಯಗಳು ಇಂದಿಗೂ ಜನರಿಗೆ ತಲುಪುತ್ತಿಲ್ಲ.

ಯಾದಗಿರಿ, ಶಹಾಪುರ, ಸುರಪುರ ನಗರಸಭೆಗಳನ್ನು ಹೊಂದಿದ್ದರೆ, ಗುರುಮಠಕಲ್‌, ಕಕ್ಕೇರಾ, ಕೆಂಭಾವಿ ಪುರಸಭೆ ಸ್ಥಾನಮಾನ ಹೊಂದಿದೆ. ಹುಣಸಗಿ ಪಟ್ಟಣ ಪಂಚಾಯಿತಿಯಾಗಿದೆ. ವಡಗೇರಾ ತಾಲ್ಲೂಕು ಕೇಂದ್ರವಾದರೂ ಗ್ರಾಮ ‍ಪಂಚಾಯಿತಿ ಸ್ಥಾನ ಹೊಂದಿದೆ. ಆದರೆ, ಯಾದಗಿರಿಜಿಲ್ಲಾ ಕೇಂದ್ರದಲ್ಲೇ ಸೌಲಭ್ಯಗಳು ಇಲ್ಲದಿದ್ದರಿಂದ ಇನ್ನೂ ಗ್ರಾಮೀಣ ಮಟ್ಟದಲ್ಲಿ ಸೌಕರ್ಯ ಊಹಿಸಿಕೊಳ್ಳಲು ಸಾಧ್ಯವಿಲ್ಲದಂತೆ ಆಗಿದೆ.

ನಗರ, ಪಟ್ಟಣಗಳಿಗೆ ಗ್ರಾಮೀಣ ಭಾಗದಿಂದ ಸಾವಿರಾರು ಸಾರ್ವಜನಿಕರು ಬಂದು ಹೋಗುತ್ತಾರೆ. ಆದರೆ, ಅವರಿಗೆ ಅಗತ್ಯವಾಗಿ ಬೇಕಾಗುವ ಸೌಲಭ್ಯಗಳು ಇಂದಿಗೂ ಸಿಗುತ್ತಿಲ್ಲ. ಕೋವಿಡ್‌ ಕಾರಣದಿಂದ ಅನೇಕ ಗ್ರಾಮಗಳಿಗೆ ಬಸ್‌ ಸೌಲಭ್ಯ ಇಲ್ಲದಂತಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಶೌಚಾಲಯ, ಮೂತ್ರಾಲಯಗಳು ಇಲ್ಲ. ಇದರಿಂದ ಜಲಬಾಧೆ ತೀರಿಸಿಕೊಳ್ಳಲು ಸಂದುಗೊಂದಿನಲ್ಲಿ ತೆರಳುವುದು ಸಾಮಾನ್ಯವಾಗಿದೆ. ಕನಿಷ್ಠ ಸೌಲಭ್ಯಗಳನ್ನು ನಾಗರಿಕರಿಗೆ ಒದಗಿಸಲು ಸ್ಥಳೀಯ ಸಂಸ್ಥೆಗಳು ವಿಫಲವಾಗಿದೆ. ಇದರಿಂದ ಜನರು ರೊಚ್ಚಿಗೆದ್ದಿದ್ದಾರೆ.

ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಯಾದಗಿರಿ, ಸುರಪುರ ಮತಕ್ಷೇತ್ರದಲ್ಲಿ ಬಿಜೆಪಿ ಆಡಳಿತವಿದ್ದರೆ, ಗುರುಮಠಕಲ್‌ ಜೆಡಿಎಸ್‌, ಶಹಾಪುರ ಕಾಂಗ್ರೆಸ್‌ ಶಾಸಕರನ್ನು ಹೊಂದಿದೆ. ಈ ನಾಲ್ಕು ಕ್ಷೇತ್ರಗಳು ಇಂದಿಗೂ ಸೌಲಭ್ಯ ವಂಚಿತ ಪ್ರದೇಶವಾಗಿ ಉಳಿದಿವೆ.

ರಸ್ತೆಗಳೇ ಸರಿಯಿಲ್ಲ:ಜಿಲ್ಲಾ ಕೇಂದ್ರ ಹಿಡಿದು ಗ್ರಾಮೀಣ ಮಟ್ಟದಲ್ಲಿಯೂ ಉತ್ತಮ ಗುಣಮಟ್ಟದ ರಸ್ತೆಗಳಿಲ್ಲ. ನಗರ, ಪಟ್ಟಣಗಳಲ್ಲೂ ಸಿಸಿ ರಸ್ತೆ, ಡಾಂಬರೀಕರಣ ರಸ್ತೆಗಳಿಲ್ಲ. ಕಲ್ಲುಗಳು ಮೇಲೆದ್ದು, ನಡೆದಾಡಲು ಪರದಾಡಬೇಕಿದೆ. ಇಂದಿಗೂ ಮಣ್ಣಿನ ರಸ್ತೆಗಳಿದ್ದು, ಮಳೆಗಾಲದಲ್ಲಿ ಸಂಚಾರಕ್ಕೆ ಪರದಾಡಬೇಕಾಗಿದೆ. ಮಳೆಗಾಲದಲ್ಲಿ ರಸ್ತೆಗಳೇ ಕೆಸರು ಗದ್ದೆಗಳಾಗಿ ಮಾರ್ಪಟ್ಟಿರುತ್ತವೆ. ಆದರೂ ಸಾರ್ವಜನಿಕರು ಜನಪ್ರತಿನಿಧಿ, ಸಂಬಂಧಿಸಿದ ಅಧಿಕಾರಿಗಳನ್ನು ದೂರುತ್ತ ಸಂಚಾರ ಮಾಡುತ್ತಾರೆ.

ಶುದ್ಧ ಕುಡಿವ ನೀರಿನ ಘಟಕಗಳಿಲ್ಲ:ಜಿಲ್ಲೆಯ ಕೆಲ ಭಾಗಗಳಲ್ಲಿ ಅರ್ಸೆನಿಕ್‌ ಸೇರಿದಂತೆ ಕುಡಿಯಲು ಯೋಗ್ಯವಿಲ್ಲದ ನೀರು ಸೇವನೆ ಮಾಡುವುದು ಅನಿವಾರ್ಯವಾಗಿದೆ. ಆದರೂ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಆಡಳಿತ ಮಂಡಳಿಗಳು ವಿಫಲವಾಗಿವೆ.

ಹೆಸರಿಗೆ ಮಾತ್ರ ಶುದ್ಧ ನೀರಿನ ಘಟಕಗಳು ಆರಂಭಿಸಲಾಗಿದ್ದು, ಈಗ ಎಲ್ಲವೂ ಪಾಳು ಬಿದ್ದಿವೆ. ಕೆಲ ಗ್ರಾಮಗಳಲ್ಲಿ ಘಟಕ ಆರಂಭವಾದಾಗಲಿಂದಲೂ ಒಂದು ಹನಿ ನೀರು ಬಾರದೆ ಬಿಲ್‌ ಮಂಜೂರು ಮಾಡಿಸಲು ಕಾಮಗಾರಿ ಮಾಡಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ನಮ್ಮ ಹೊಲ ನಮ್ಮ ರಸ್ತೆ:ರೈತರು ಜಮೀನುಗಳಿಗೆ ತೆರಳಲು ಸರಿಯಾದ ರಸ್ತೆ ಇಲ್ಲದ ಕಾರಣ ನಮ್ಮ ಹೊಲ ನಮ್ಮ ರಸ್ತೆಗಾಗಿ ರೈತರು ಮನವಿ ಮಾಡಿಕೊಂಡಿದ್ದಾರೆ. ಆದರೆ, ಕೆಲ ಕಡೆ ಮಾತ್ರ ಇದು ಅನುಷ್ಠಾನಕ್ಕೆ ಬಂದಿದೆ. ಇದರಿಂದ ರೈತರು ಮಳೆಗಾಲದಲ್ಲಿ ಸಂಚಾರದ ಸಮಸ್ಯೆ ಎದುರಿಸುತ್ತಿದ್ದಾರೆ.

ಅಲ್ಲಲ್ಲಿ ನಮ್ಮ ಹೊಲ ನಮ್ಮ ರಸ್ತೆ ಹಾಕಿರುವ ಕಲ್ಲುಗಳು ಮೇಲೆದ್ದಿವೆ. ಇಂಥದಲ್ಲೇ ನಡೆದುಕೊಂಡು ಹೋಗುವ ಪರಿಸ್ಥಿತಿ ಏರ್ಪಟ್ಟಿದೆ.

ತುಂಬಿಹೋದ ಚರಂಡಿ:ನಗರ ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ಸರಿಯಾದ ನಿರ್ವಹಣೆ ಇಲ್ಲದೇ ಹೂಳು ತೆಗೆಯದಿದ್ದರಿಂದ ಮಲಿನ ನೀರು ನಿಂತು ಗಬ್ಬು ಬೀರುತ್ತಿದೆ. ಕೆಲವೊಮ್ಮೆ ರಸ್ತೆಗೆ ಬಂದು ನಿಲ್ಲುತ್ತವೆ. ಅದರಲ್ಲಿಯೇ ನಡೆದಾಡುವ ಪರಿಸ್ಥಿತಿ ಇದೆ. ಇದರಿಂದ ಸೌಕರ್ಯ ಕಲ್ಪಿಸುವ ಅಗತ್ಯವಿದೆ. ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳಿಗೆ ಮಾತ್ರ ಸೀಮಿತರಾಗದೇ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಅನುದಾನ ತಂದು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ.

***

ನಗರದ ವಿವಿಧ ಸೌಲಭ್ಯಗಳಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ. 15ನೇ ಹಣಕಾಸಿನ ಯೋಜನೆಯಡಿ ವಿವಿಧ ಕಾಮಗಾರಿಗೆ ಬೇಡಿಕೆ ಇಡಲಾಗುತ್ತಿದೆ. ನಗರೋತ್ಥಾನ ಹಂತ 3 ಮುಕ್ತಾಯವಾಗಿದ್ದು, ಈಗ ನಾಲ್ಕನೇ ಹಂತದ ಯೋಜನೆಗೆ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ.
-ಬಕ್ಕಪ್ಪ ಹೊಸಮನಿ, ನಗರಸಭೆ ಪ್ರಭಾರಿ ಪೌರಾಯುಕ್ತ

***

ಹೊಸ ತಾಲ್ಲೂಕುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಲ್ಲ. ಮೂಲಸೌಲಭ್ಯ ವಂಚಿತವಾಗಿವೆ. ರಸ್ತೆ, ಚರಂಡಿ ಇನ್ನೂ ನಿರ್ಮಾಣವಾಗಿಲ್ಲ. ಇದರಲ್ಲೇ ಸರ್ಕಾರ ಕಾಲ ಕಳೆದರೆ ಸುಸಜ್ಜಿತ ಸೌಲಭ್ಯಗಳು ಸಿಗುವುದು ಯಾವಾಗ. ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಜಿಲ್ಲೆಗೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು.
-ಮಾಣಿಕರೆಡ್ಡಿ ಕುರಕುಂದಿ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ

***

ಸರ್ಕಾರ ಈ ಬಜೆಟ್‌ನಲ್ಲಿ ಜಿಲ್ಲೆಯ ಮೂಲಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡಬೇಕು. ರೈತರು ಸೇರಿದಂತೆ ಸಾರ್ವಜನಿಕರು ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೂಡಲೇ ಸಂಬಂಧಿಸಿದ ಶಾಸಕರು ಒತ್ತಡ ತಂದು ಜಿಲ್ಲೆಗೆ ಆಗತ್ಯವಾಗಿ ಬೇಕಾಗಿರುವ ಸೌಕರ್ಯಗಳನ್ನು ಮಂಜೂರು ಮಾಡಿಸಬೇಕು.
-ಚನ್ನಾರೆಡ್ಡಿ ಗುರುಸುಣಗಿ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT