ಭಾನುವಾರ, ಏಪ್ರಿಲ್ 18, 2021
31 °C
ಆಶನಾಳ ಗ್ರಾಮದಲ್ಲಿ ಅತಿ ಸಣ್ಣ, ಸಣ್ಣ ಕೈಗಾರಿಕೆಗಳಿಗಾಗಿ 302 ಎಕರೆ ಜಮೀನಿಗೆ ಪ್ರಸ್ತಾವನೆ

ಬಜೆಟ್‌ ನಿರೀಕ್ಷೆ: ಯಾದಗಿರಿ ಜಿಲ್ಲೆಯಲ್ಲಿ ‌ಸಣ್ಣ ಕೈಗಾರಿಕೆಗಳಿಗಿಲ್ಲ ಉತ್ತೇಜನ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ವಿವಿಧ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಯಾದಗಿರಿ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನವಿಲ್ಲದಂತಾಗಿದೆ.

ನಗರ ಸಮೀಪದ ಆಶನಾಳ ಗ್ರಾಮದಲ್ಲಿ ಅತಿ ಸಣ್ಣ, ಸಣ್ಣ ಕೈಗಾರಿಕೆಗಳಿಗಾಗಿ ಕರ್ನಾಟಕ ರಾಜ್ಯ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ 302 ಎಕರೆ ಜಮೀನಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇನ್ನೂ ಭೂಮಿ ಸ್ವಾಧೀನ ಪಡಿಸಿಕೊಂಡಿಲ್ಲ.  ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲವಾಗುತ್ತದೆ.

ಯಾದಗಿರಿ ತಾಲ್ಲೂಕು ಕೈಗಾರಿಕಾ ವಸಾಹತು ಆಗಿ 25 ವರ್ಷವಾಗಿದೆ. ಆದರೆ, ಇನ್ನು ಹೊಸ ಕೈಗಾರಿಕಾ ವಸಾಹತುಗಳಿಗಾಗಿ ಸರ್ಕಾರದ ವತಿಯಿಂದ ಜಮೀನು ಸ್ವಾಧೀನ ಪಡಿಸಿಕೊಂಡಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ.

ತಾಲ್ಲೂಕಿನ ಬಂದಳ್ಳಿ ಗ್ರಾಮದಲ್ಲಿ ಹೈಟೆಕ್ ಜವಳಿ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿ ಮುಗಿದಿದ್ದು, ಯಾವುದೇ ತರಬೇತಿ ನಡೆಯುತ್ತಿಲ್ಲ. ಯಂತ್ರಗಳು ಬಂದಿಲ್ಲ. ಇದರಿಂದ ತರಬೇತಿಗೆ ಅಡ್ಡಿಯಾಗಿದೆ. 

ಹೈಟೆಕ್‌ ಸ್ಪಿನ್ನಿಂಗ್‌, ವೀವಿಂಗ್‌, ಸಿದ್ಧ ಉಡುಪು ತಯಾರಿಕೆ, ಕ್ಯಾಡ್‌ ಕ್ಯಾಮ್‌ ಡಿಸೈನ್‌ ಮತ್ತು ಸಾಫ್ಟ್‌ ಸ್ಕಿಲ್‌ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆದರೆ, ಆರಂಭ ಮಾಡದ ಕಾರಣ ಕನಸಾಗಿ ಉಳಿದಿದೆ. ಕೋವಿಡ್‌ ಸಂದರ್ಭದಲ್ಲಿ ಕ್ವಾರಂಟೈನ್ ಮಾಡಲು ಕಟ್ಟಡ ಬಳಕೆಯಾಗಿದೆ. ಆದರೆ, ತರಬೇತಿಗೆ ಇನ್ನೂ ಚಾಲನೆ ಸಿಕ್ಕಿಲ್ಲ.

ಸ್ಥಾಪನೆಯಾಗದ ಕೈಗಾರಿಕೆಗಳು: ತಾಲ್ಲೂಕಿನ ಕಡೇಚೂರ-ಬಾಡಿಯಾಳ ಗ್ರಾಮದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು 2010ರಲ್ಲಿ ಕೆಐಎಡಿಬಿ ವತಿಯಿಂದ 3,232 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಕಲ್ಯಾಣಿ ಸ್ಟಿಲ್ಸ್‌, ಕೊಕೊ-ಕೋಲಾ ಕಾರ್ಖಾನೆ, ಜವಳಿ ಪಾರ್ಕ್‌, ಫಾರ್ಮಾಸೂಟಿಕಲ್ಸ್‌ ಪಾರ್ಕ್‌ ಮತ್ತು ಇನ್ನಿತರ ಬೃಹತ್‌ ಕೈಗಾರಿಕೆ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಸ್ಥಾಪನೆಯಾಗಿಲ್ಲ. ಇದರಿಂದ ನಿರುದ್ಯೋಗ, ಗುಳೆ ಹೋಗುವುದು ಸಾಮಾನ್ಯವಾಗಿದೆ.

‘ದೂರದ ಬೆಂಗಳೂರು, ಪುಣೆ, ಮುಂಬೈ, ಗೋವಾ ಸೇರಿ ವಿವಿಧ ಸ್ಥಳಗಳಿಗೆ ಗುಳೆ ಹೋಗುವುದು ಸಾಮಾನ್ಯ. ಹೀಗಾಗಿ ಗುಳೆ ತಪ್ಪಿಸಲು ಸಣ್ಣ ಕೈಗಾರಿಕೆ ಮತ್ತು ಬೃಹತ್‌ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು. ಈ ಮೂಲಕ ಈ ಭಾಗಕ್ಕೆ ಶಾಪದ ಗುಳೆ ತೊಲಗಿಸಬೇಕು’ ಎನ್ನುತ್ತಾರೆ ಜಿಲ್ಲಾ ವಾಣಿಜ್ಯೋದ್ಯಮಿ ಸಂಘದ ಅಧ್ಯಕ್ಷ ಹನುಮದಾಸ ಮುಂದಡಾ.

‘ಜಿಲ್ಲೆಯಲ್ಲಿ ಯುರೇನಿಯಂ ಸಂಪನ್ಮೂಲ ಇದೆ. ರಕ್ಷಣಾ ಮತ್ತು ವಿದ್ಯುತ್ ಉತ್ಪಾದನಾ ಉದ್ದೇಶಗಳಿಗಾಗಿ ಬಳಸುವ ಸಂಸ್ಕರಿಸಿದ ಯುರೇನಿಯಂ ಲಭ್ಯವಿದೆ. ಇಲ್ಲಿ ಹೂಡಿಕೆ ಮಾಡಲು ವಿಫುಲ ಅವಕಾಶಗಳಿವೆ. ಕೈ ಮಗ್ಗ ಸಾಂಪ್ರದಾಯಿಕ ಕರಕುಶಲವಾಗಿದೆ. ಸರ್ಕಾರ ಇಲ್ಲಿಯೇ ಹೂಡಿಕೆ ಸಮಾವೇಶ ಏರ್ಪಡಿಸಬೇಕು’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ ಅಧ್ಯಕ್ಷ ಕೆ.ಬಿ.ಅರಸಪ್ಪ ಹೇಳುತ್ತಾರೆ.

***
‌ಆಶನಾಳ ಗ್ರಾಮದಲ್ಲಿ ಅತೀ ಸಣ್ಣ ಹಾಗೂ ಸಣ್ಣ ಕೈಗಾರಿಕೆಗಳಿಗಾಗಿ 302 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವವನ್ನು ಕೆಐಎಡಿಬಿ ಮೂಲಕ ಸಲ್ಲಿಸಲಾಗಿತ್ತು. ಆದರೆ, ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
-ಹನುಮದಾಸ ಮುಂದಡಾ, ಅಧ್ಯಕ್ಷ, ಜಿಲ್ಲಾ ವಾಣಿಜ್ಯೋದ್ಯಮಿ ಸಂಘ

***

ಸಣ್ಣ ಕೈಗಾರಿಕೆಗಳಿಗೆ ಸರ್ಕಾರ ಉತ್ತೇಜನ ನೀಡಬೇಕು. ಕೈಗಾರಿಕೆಗಳ ಮೂಲಸೌಕರ್ಯಕ್ಕಾಗಿ ಈ ಬಜೆಟ್‌ನಲ್ಲಿ ₹500 ಕೋಟಿ ಮೀಸಲಿಡಲು ಮನವಿ ಮಾಡಲಾಗಿದೆ. ಹೊಸ ಕೈಗಾರಿಗಳನ್ನು ಸ್ಥಾಪನೆ ಮಾಡಬೇಕು.
-ಕೆ.ಬಿ. ಅರಸಪ್ಪ, ಅಧ್ಯಕ್ಷ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)

***

ಹೊಸ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಇದರಿಂದ ಯುವಕರಿಗೆ ಅನುಕೂಲವಾಗುತ್ತಿದೆ. ಉದ್ಯೋಗವಿಲ್ಲದೆ ಗುಳೆ ಹೋಗುವುದು ಸಾಮಾನ್ಯವಾಗಿದೆ. ಸಂಪನ್ಮೂಲ ಇದ್ದರೂ ಬಳಕೆಯಾಗುತ್ತಿಲ್ಲ.
-ಚಂದ್ರಕಾಂತ ಹಾಗರಗಿ, ಜಿಲ್ಲಾ ಉದ್ದಿಮೆದಾರ

***

ಆಶನಾಳ ಗ್ರಾಮದಲ್ಲಿ ಸಣ್ಣ ಕೈಗಾರಿಕೆಗೆ ಭೂಮಿ ಸ್ವಾಧೀನ ಪಡೆಸಿಕೊಳ್ಳಲು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಕಡೇಚೂರು–ಬಾಡಿಯಾಳ ಕೈಗಾರಿಕೆಗಳು ಅನುಷ್ಠಾನ ಹಂತದಲ್ಲಿವೆ. ಇನ್ನೂ ಒಂದು ವರ್ಷದಲ್ಲಿ ಸ್ಪಷ್ಟ ಚಿತ್ರಣ ಕಂಡು ಬರಲಿದೆ
-ಮಾಣಿಕ್ ವಿ.ರಘೋಜಿ, ಪ್ರಭಾರಿ ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು