ಮಂಗಳವಾರ, ಫೆಬ್ರವರಿ 7, 2023
27 °C
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಭತ್ತಕ್ಕೆ ಹೆಚ್ಚಿದ ಬೇಡಿಕೆ, ಹಿಂಗಾರಿ ಬೆಳೆಗೆ ಸಿದ್ಧತೆ

ಯಾದಗಿರಿ। ಭತ್ತಕ್ಕೆ ಬಂಪರ್‌ ಬೆಲೆ, ರೈತರ ಸಂತಸ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಭತ್ತೆ ಬೇಡಿಕೆ ಹೆಚ್ಚಿದ್ದು, ರೈತರು ಬಂಪರ್‌ ಬೆಲೆಯ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಭತ್ತ ಕಟಾವು ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಇಳುವರಿಯೂ ಉತ್ತಮವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಜಿಲ್ಲೆಯ ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಬಹುತೇಕ ಕಡೆ ಭತ್ತ ಕಟಾವು ಮುಗಿದಿದ್ದು, ತಡವಾಗಿ ನಾಟಿ ಮಾಡಿದ ಭತ್ತದ ಫಸಲು ಮಾತ್ರ ಅಲ್ಲಲ್ಲಿ ಉಳಿದುಕೊಂಡಿದೆ.

ಬಂಪರ್ ಭತ್ತದ ಇಳುವರಿ: ಅಚ್ಚುಕಟ್ಟು ಬಹುತೇಕ ಪ್ರದೇಶದಲ್ಲಿ ಸೋನಾಮಸೂರಿ ತಳಿಯ ಭತ್ತವನ್ನು ನಾಟಿ ಮಾಡಲಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಆರ್‌ಎನ್‌ಆರ್ ತಳಿಯ ಭತ್ತವನ್ನು ನಾಟಿ ಮಾಡಲಾಗಿತ್ತು. ಎಕರೆಗೆ ₹ 35 ರಿಂದ ₹ 40 ಸಾವಿರದವರೆಗೂ ಖರ್ಚಾಗಿದ್ದು, ಎರಡೂ ತಳಿಗಳು ಉತ್ತಮ ಇಳುವರಿ ಬಂದಿದೆ. ಭತ್ತದ ದರ ₹ 1,650 ರಿಂದ ₹ 1,700 ವರೆಗೆ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ರೈತರ ನಿರೀಕ್ಷೆಯಾಗಿದೆ.

ಎರಡು ಎಕರೆ ಜಮೀನನಲ್ಲಿ ಭತ್ತ ಈ ಬಾರಿ ಉತ್ತಮ ಇಳುವರಿ ಬಂದಿದೆ. ಕಟಾವಿನ ನಂತರ 4 ದಿನ ಬಯಲಿನಲ್ಲಿ ಒಣಗಲು ಹಾಕಿದ್ದೇವೆ. ಖರೀದಿದಾರರು ಜಮೀನಿಗೆ ಬಂದು ಖರೀದಿ ಮಾಡಿಕೊಂಡು ತೆರಳುತ್ತಿದ್ದಾರೆ. ಇದರಿಂದ ಈ ಬಾರಿ ಉತ್ತಮ ದರ ಸಿಕ್ಕಿದೆ ಎಂದು ಯುವ ರೈತ ಶಿವರಾಜ ಅಮರಪ್ಪ ಹೇಳುತ್ತಾರೆ.

ಪ್ರತಿ ಬಾರಿಯೂ ಭತ್ತದ ದರ ₹ 1,200 ರಿಂದ ₹ 1,300 ದರ ಇರುತ್ತಿತ್ತು. ಈ ಬಾರಿ ₹ 400ರಷ್ಟು ಹೆಚ್ಚಳವಾಗಿದ್ದು, ರೈತರಿಗೆ ಸಂತಸ ಉಂಟು ಮಾಡಿದೆ.

ರಸ್ತೆ ಬದಿ ರಾಶಿ: ಸುರಪುರ, ಹುಣಸಗಿ ತಾಲ್ಲೂಕಿನ ಭತ್ತದ ಅಕ್ಕಪಕ್ಕದ ಜಮೀನುಗಳಲ್ಲಿ ಈಗ ಭತ್ತದ ರಾಶಿ ಕಾಣಿಸುತ್ತದೆ. ರಸ್ತೆ ಪಕ್ಕದಲ್ಲೇ ಭತ್ತ ಒಣಗಲು ಹಾಕಲಾಗಿದೆ. ರಾತ್ರಿ ವೇಳೆ ತಾಡಪತ್ರಿ ಹೊದಿಸಲಾಗುತ್ತದೆ. ಕೆಲ ಕಡೆ ಒಂದು ಬದಿಯ ರಸ್ತೆಯನ್ನೇ ಅಕ್ರಮಿಸಿಕೊಳ್ಳಲಾಗಿದೆ. ವಾಹನ ಸವಾರರು ರಾತ್ರಿ ವೇಳೆ ಎಚ್ಚರ ತಪ‍್ಪಿದರೆ ಭತ್ತದ ಕಣದ ಮೇಲೆ ವಾಹನ ಹತ್ತಿಸುವ ಸಂಭವ ಇರುತ್ತದೆ.

ಹೊರ ಜಿಲ್ಲೆಗಳ ಖರೀದಿದಾರರು: ಜಿಲ್ಲೆಯ ಭತ್ತ ಕಟಾವು ಮಾಡಿದ ಪ್ರದೇಶಕ್ಕೆ ಅಕ್ಕಪಕ್ಕದ ಜಿಲ್ಲೆಗಳಲ್ಲದೇ, ಹೊರ ರಾಜ್ಯಗಳಿಂದಲೂ ಖರೀದಿದಾರರು ಬಂದು ಖರೀದಿ ಮಾಡಿಕೊಂಡು ತೆರಳಿತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಗಿಂತ ಹೊರ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 100ರಿಂದ ₹ 200ದರ ಹೆಚ್ಚಳವಿದೆ. ಹೊರ ಜಿಲ್ಲೆಯವರಿಗೆ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎನ್ನುವುದು ಭತ್ತ ಮಾರಾಟಗಾರರ ಮಾತಾಗಿದೆ.

ಮೊದಲ ವಾರದಲ್ಲಿ ಮಳೆ: ನವೆಂವರ್ ಮೊದಲ ವಾರದಲ್ಲಿ ಅಕಾಲಿಕ ಮಳೆಯಿಂದ ಕಾಳು ಕಟ್ಟಿದ ಭತ್ತ ನೆಲಕ್ಕುರಳಿ ಬಿದ್ದಿತ್ತು. ಇದರಿಂದ ಕೆಲ ರೈತರಿಗೆ ನಷ್ಟವಾಗಿದೆ. ಭತ್ತ ಕಟಾವು ಮುಗಿದ್ದಿರಿಂದ ಹಿಂಗಾರು ಹಂಗಾಮಿನಲ್ಲಿ ಭತ್ತ ನಾಟಿ ಮಾಡಲು ಭತ್ತದ ಸಸಿಗಳನ್ನು ಮಾಡಲಾಗಿದೆ. ಮಾರ್ಚ್‌ ಅಂತ್ಯದ ವರೆಗೆ ನೀರು ಹರಿಸಲಾಗುತ್ತಿದೆ.

***

ಈ ಬಾರಿ ಭತ್ತ ಉತ್ತಮ ಇಳುವರಿ ಬಂದಿದ್ದು, ಧಾರಣಿಯೂ ಚೆನ್ನಾಗಿದೆ. ಇದರಿಂದ ಲಾಭ ಸಿಗಲಿದೆ. ಖರೀದಿದಾರರು ಜಮೀನಿಗೆ ಬಂದು ಖರೀದಿ ಮಾಡುತ್ತಿದ್ದಾರೆ
ಶಿವರಾಜ ಅಮರಪ್ಪ, ಯುವ ರೈತ

***

ಭತ್ತ ಕಟಾವು ಮಾಡಿ ರಾಶಿ ಮಾಡಿದ್ದು, ಹಿಂಗಾರು ಬೆಳೆಗೆ ಸಿದ್ಧತೆ ನಡೆಸಿದ್ದೇವೆ. ಆದರೆ, ಗೊಬ್ಬರ ದರ ₹ 1,500 ದರವಿದೆ. ಭತ್ತ ಇದಕ್ಕಿಂತ ಸ್ಪಲ್ಪ ಹೆಚ್ಚಿದೆ
ಸಂತೋಷ ವಾಗಣಗೇರಾ, ಯುವ ರೈತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು