ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಹುಲ್ಲು ಸುಟ್ಟರೆ ಮಣ್ಣಿನ ಫಲವತ್ತತೆ ಹಾಳು: ವಿಜ್ಞಾನಿಗಳು ಎಚ್ಚರಿಕೆ

ಭತ್ತದ ಹುಲ್ಲಿನ ತ್ಯಾಜ್ಯ ಗೊಬ್ಬರದಂತೆ ಬಳಕೆಯಾಗಲಿ: ಕೃಷಿ ವಿಜ್ಞಾನಿಗಳ ಸಲಹೆ
Last Updated 3 ಡಿಸೆಂಬರ್ 2022, 5:37 IST
ಅಕ್ಷರ ಗಾತ್ರ

ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಭತ್ತ ನಾಟಿಗೆ ಸಿದ್ಧತೆ ನಡೆಯುತ್ತಿದ್ದು, ಇದರ ಮಧ್ಯೆ ಭತ್ತದ ಹುಲ್ಲು ಸುಡುತ್ತಿರುವುದು ಕಂಡು ಬರುತ್ತಿದೆ.

ಡಿಸೆಂಬರ್‌ 12ರಿಂದ ಪೂರ್ಣ ಪ್ರಮಾಣದಲ್ಲಿ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ನಾರಾಯಣಪುರ ಎಡದಂಡೆ ಕಾಲುವೆ ಜಾಲದಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿವೆ.

ಮುಂಗಾರು ಹಂಗಾಮಿನ ಭತ್ತದ ಕೊಯ್ಲು ಮುಗಿದು ರೈತರಿಗೆ ಉತ್ತಮ ದರ ಸಿಗುತ್ತಿದೆ. ಇದರಿಂದ ಮತ್ತೊಂದು ಅವಧಿಯ ಭತ್ತ ನಾಟಿಗೆ ಸಸಿ ಮಡಿಗಳನ್ನು ಅಲ್ಲಲ್ಲಿ ಮಾಡಲಾಗಿದೆ. ಇದರ ಮಧ್ಯೆ ಭತ್ತದ ಕಟಾವು ಆಗಿರುವ ಗದ್ದೆಗಳಲ್ಲಿ ಬೆಂಕಿ ಹಚ್ಚಿ ‍ಪರಿಸರಕ್ಕೂ ಮಾಲಿನ್ಯ ಉಂಟುಮಾಡುವಂತ ಪ್ರಕ್ರಿಯೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದು ಕೊನೆಗಾಣಬೇಕು ಎನ್ನುವುದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆಯಾಗಿದೆ.

ಯಂತ್ರದ ಬಳಕೆ:

ಕೂಲಿಕಾರರ ಸಮಸ್ಯೆಯಿಂದ ಯಂತ್ರದ ಮೂಲಕ ಭತ್ತ ಕಟಾವು ಮಾಡುತ್ತಿದ್ದು, ಇದು ಕೂಡ ಹುಲ್ಲು ಸುಡಲು ಕಾರಣವಾಗಿದೆ.

ಕೂಲಿಕಾರರು ಭತ್ತದ ಬುಡದಲ್ಲಿ ಕಟಾವು ಮಾಡುವುದರಿಂದ ಹುಲ್ಲು ಹಾಳಾಗದೇ ಜಾನುವಾರುಗಳಿಗೆ ಒಣ ಮೇವು ಸಿಗುತ್ತದೆ. ಆದರೆ, ಯಂತ್ರವೂ ಭತ್ತದ ಅರ್ಧ ಭಾಗದಿಂದ ಕಟಾವು ಮಾಡುವುದರಿಂದ ಹುಲ್ಲು ಸಿಗುವುದರಿಂದ ಇದನ್ನು ಸುಡುವುದು ಸೂಕ್ತ ಎಂದು ರೈತರು ಹೇಳುವ ಮಾತಾಗಿದೆ.

ಮುಂಗಾರು ಹಂಗಾಮಿನ ಭತ್ತದ ಕೊಯ್ಲು ನಂತರ ಹಿಂಗಾರಿಗೆ ಸಿದ್ಧತೆ ಮಾಡಿಕೊಳ್ಳಲು ಹೆಚ್ಚಿನ ಕಾಲವಕಾಶ ಇಲ್ಲದಿರುವುದು ಹುಲ್ಲು ಸುಡಲು ಮತ್ತೊಂದು ಕಾರಣವಾಗಿದೆ. ಭತ್ತ ಕಟಾವು ನಂತರ 15ರಿಂದ 20 ದಿನಗಳ ಕಾಲ ಮಾತ್ರ ಇರುತ್ತದೆ. ಇದರಿಂದ ಹಿಂಗಾರಿಗೆ ಸಿದ್ಧತೆ ಮಾಡಿಕೊಳ್ಳಲು ಸುಡುವ ಪ್ರಕ್ರಿಯೆಯನ್ನು ರೈತರು ರೂಢಿಸಿಕೊಂಡಿದ್ದಾರೆ.

ರೈತರು ಹುಲ್ಲು ಏಕೆ ಸುಡುತ್ತಾರೆ?: ಭತ್ತ ಅತಿ ನಿಧಾನವಾಗಿ ಕೊಳೆಯುವ ಗುಣ ಹೊಂದಿದೆ. ಮುಂದಿನ ಬೆಳೆಗೆ ಬೇಗ ತಾಕುಗಳನ್ನು ತಯಾರಿಸಲು, ಉಳಿದ ಪದ್ಧತಿಗಳಾದ ಮೇಲು ಹೊದಿಕೆ, ಕೊಳೆಸುವುದು. ಇವು ಸಮಯ ಹಾಗೂ ಅಧಿಕ ಹಣ ಖರ್ಚು ತೆಗೆದುಕೊಳ್ಳುತ್ತದೆ. ರೋಗ ಹಾಗೂ ಕೀಟ ಬಾಧೆ ಹೆಚ್ಚಾಗಿದ್ದರೆ, ಭತ್ತದ ಹುಲ್ಲು ನಿರ್ವಹಣೆ ಯಂತ್ರೋಪಕರಣಗಳ ಕೊರತೆ. ಇದರಿಂದ ರೈತರು ಭತ್ತದ ಹುಲ್ಲು ಸುಡುತ್ತಾರೆ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.

ದುಷ್ಪರಿಣಾಮಗಳು:

ಭತ್ತದ ಹುಲ್ಲು ಸುಡುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಸೂಕ್ಷ್ಮಾಣು ಜೀವಿಗಳು ಸತ್ತು ಹೋಗುತ್ತವೆ. ವಾತಾವರಣ ಕಲುಷಿತಗೊಳ್ಳುತ್ತದೆ. ವಾಯು ಮಾಲಿನ್ಯ ಉಂಟಾಗುತ್ತದೆ.

ಭತ್ತದ ಹುಲ್ಲಿನಿಂದ ದನಕರುಗಳಿಗೆ ಮೇವು, ಹುಲ್ಲಿನ ಕೊಳೆಯುವಿಕೆಯಿಂದ ಮಣ್ಣಿನ ಆರೋಗ್ಯ ಸುಧಾರಿಸುತ್ತದೆ. ಭೂಮಿಯ ಹೊದಿಕೆಯಾಗಿ ಉಪಯೋಗಿಸಬಹುದು. ಜೈವಿಕ ಅನಿಲ ತಯಾರಿಸಬಹುದು. ಜೈವಿಕ ವಿಘಟನೆಗೊಳ್ಳುವ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ.

ನಿರ್ವಹಣೆ ಹೇಗೆ?

‘ಭತ್ತದ ಕಟಾವು ಯಂತ್ರಕ್ಕೆ ಕಟಾವು ಬ್ಲೇಡ್‌ಗಳನ್ನು ಅಳವಡಿಸಬಹುದು. ರೋಟೋವೇಟರ್‌ ಬಳಸಿ ಭತ್ತದ ಹುಲ್ಲನ್ನು ಕತ್ತರಿಸಿದ ನಂತರ ಅದಕ್ಕೆ 50 ಕೆ.ಜಿ ಯೂರಿಯಾ ಪಸರಿಸುವುದು ಅಥವಾ ಹುಲ್ಲು ಕೊಳೆಯುವ ಸೂಕ್ಷ್ಮಾಣು ಜೀವಿಗಳನ್ನು (ವೇಸ್ಟ್ ಡಿಕಾಂಪೋಸರ್-ತ್ಯಾಜ್ಯ ವಿಭಜಕ) ಬಳಸಿ ತೆಳುವಾಗಿ ನೀರನ್ನು ಬಿಡುವುದರಿಂದ ನಿರ್ವಹಣೆ ಮಾಡಬಹುದು‘ ಎಂದು ಭೀಮರಾಯನಗುಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಶಿವಾನಂದ ಹೊನ್ನಾಳಿತಿಳಿಸುತ್ತಾರೆ.

***

ಭತ್ತದ ಹುಲ್ಲು ಸುಡುವುದರಿಂದ ಮಣ್ಣಿನನಲ್ಲಿರುವ ಪೋಷಾಕಾಂಶಗಳು ಹಾಳಾಗುತ್ತವೆ. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ.ಆದರೂ ರೈತರು ಇದಕ್ಕೆ ಒಗ್ಗಿಕೊಂಡಿದ್ದಾರೆ.
– ಡಾ.ಜೈಪ್ರಕಾಶ ನಾರಾಯಣ್, ಕವಡಿಮಟ್ಟಿ ಕೆವಿಕೆ ಮುಖ್ಯಸ್ಥ

**

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತದ ಕಟಾವು ಭರದಿಂದ ಸಾಗಿದ್ದು, ಕಟಾವಿನ ನಂತರ ಭತ್ತದ ಹುಲ್ಲನ್ನು ರೈತರು ಶೇಖರಿಸಿ ಇಟ್ಟುಕೊಳ್ಳಬೇಕು. ಅದನ್ನು ಸುಡುವುದರಿಂದ ಭೂಮಿಗೆ ಹಾನಿಯಾಗುತ್ತದೆ
ಮಲ್ಲನಗೌಡ ಮುದನೂರು, ರೈತ ಮುಖಂಡ

***

ಉಳಿದಂತ ಹುಲ್ಲನ್ನು ಹಾಗೂ ಕಟಾವು ಮಾಡಿದ ತಳಭಾಗದ ಹುಲ್ಲನ್ನು ಸುಡಲಾಗುತ್ತದೆ‌. ಸುಡದೆ ಇದ್ದಲ್ಲಿ ಎರಡು ಮೂರು ಬಾರಿ ಪಟ್ಲರ್ ಹೊಡೆಯುವ ಅನಿವಾರ್ಯತೆ ಇರುವುದರಿಂದ ಖರ್ಚು ಹೆಚ್ಚಾಗುತ್ತದೆ. ಸಮಯಾವಕಾಶ ಕೂಡಾ ಬೇಕಾಗುತ್ತದೆ
ನಿಂಗನಗೌಡ ಬಸವನಗೌಡ್ರ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT