ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸಿದ್ಧ ಉಡುಪು ಬೆಳ್ಳಿ, ಬಂಗಾರ ಖರೀದಿ ಜೋರು

ಕಳೆದ ವರ್ಷಕ್ಕಿಂತ ಶೇ 10ರಷ್ಟು ವ್ಯಾಪಾರ ಇಳಿಕೆ
Last Updated 13 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಯಾದಗಿರಿ: ದೀಪಾವಳಿ ಹಬ್ಬದ ಪ್ರಯುಕ್ತ ಬಟ್ಟೆ, ಚಿನ್ನ, ಬೆಳ್ಳಿ, ಖರೀದಿ ಜೋರಾಗಿದೆ. ಆದರೆ, ಕಳೆದ ವರ್ಷಕ್ಕೆ ಹೊಲಿಸಿದರೆ ಶೇ 10ರಷ್ಟು ವ್ಯಾಪಾರ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಕೋವಿಡ್‌ನಿಂದ ನಷ್ಟ ಅನುಭವಿಸಿದ್ದ ವ್ಯಾಪಾರಿಗಳು, ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಗ್ರಾಹಕರು ಬಾರದೆ ನಷ್ಟದ ಸುಳಿಯಲ್ಲಿ ಸಿಲುಕಿದ್ದೇವೆ ಎಂದು ತಿಳಿಸುತ್ತಾರೆ.

ಕಳೆದ ಬಾರಿ ಕೃಷ್ಣಾ ನದಿ ಪ್ರವಾಹ ಬಂದರೂ ಹಬ್ಬದ ವೇಳೆ ಅಂತಹ ಸಮಸ್ಯೆಯಾಗಲಿಲ್ಲ. ಆದರೆ, ಈ ಬಾರಿ ಕೃಷ್ಣಾ, ಭೀಮಾ ನದಿ ಪ್ರವಾಹ ಒಂದೆಡೆಯಾದರೆ ಅತಿವೃಷ್ಟಿಯಿಂದ ಬೆಳೆಗಳೆಲ್ಲ ಹಾಳಾಗಿವೆ. ಇದರಿಂದ ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಕೋವಿಡ್‌ನಿಂದ ಸಮಸ್ಯೆಯಾದರೂ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಬೇಕು. ಹೀಗಾಗಿ ಬಟ್ಟೆ ಖರೀದಿಸಲು ಅಂಗಡಿಗೆ ಬಂದಿದ್ದೇನೆ ಎಂದು ಗ್ರಾಹಕ ರಾಜೇಶ ಕುಮಾರು ತಿಳಿಸಿದರು.

ಸಿದ್ಧ ಉಡುಪಿಗೆ ಬೇಡಿಕೆ:

ಬಟ್ಟೆ ಖರೀದಿಸಿ ಹೊಲಿಸುವುದು ಕಡಿಮೆಯಾಗಿದ್ದು, ಸಿದ್ಧ ಉಡುಪುಗೆ ಬೇಡಿಕೆ ಹೆಚ್ಚಾಗಿದೆ. ರೆಡಿಮೆಡ್‌ ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರು ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಮಕ್ಕಳ ಉಡು‍ಪು ಹೆಚ್ಚು ಮಾರಾಟವಾಗುತ್ತವೆ ಎಂದು ಸಿದ್ಧ ಉಡುಪು ವ್ಯಾಪಾರಿ ಮಹಮ್ಮದ್ ಶೇಖ್ ತಿಳಿಸಿದರು.

ಬಂಗಾರ ದರ:
10 ಗ್ರಾಂ ಬಂಗಾರ 24 ಕ್ಯಾರೆಟ್‌ ₹52,600, 22 ಕ್ಯಾರೆಟ್‌ ₹49,010 ದರವಿದೆ. ಬೆಳ್ಳಿ ಕೆಜಿಗೆ ₹63 ಸಾವಿರ ಇದೆ. ಬೆಳ್ಳಿಯಲ್ಲಿ ಕಾಯಿನ್‌, ಕಾಲು ಚೈನ್‌, ಬಂಗಾರದಲ್ಲಿ ಕಿವಿಯೋಲೆ, ಉಂಗುರ ಖರೀದಿ ಮಾಡಿದ್ದಾರೆ ಎಂದು ಚಿನ್ನದ ವ್ಯಾಪಾರಿಗಳು ತಿಳಿಸಿದರು.

ಕಳೆದ ವಾರದಿಂದ ವ್ಯಾಪಾರದಲ್ಲಿ ಏರಿಕೆ ಕಂಡಿದೆ. ಇಷ್ಟೊತ್ತಿಗೆ ಹೆಚ್ಚಿನ ವಹಿವಾಟು ಆಗಬೇಕಿತ್ತು. ಆದರೆ, ಈ ಬಾರಿ ನಿಧಾನವಾಗಿದೆ ಎಂದು ಜುವೆಲ್ಲರಿ ಮಾಲಿಕ ಉದಯ ನಾಗೂರ ತಿಳಿಸುತ್ತಾರೆ.

ಮಹಿಳಾ ಟೈಲರ್‌ ಬಿಡುವಿಲ್ಲದ ಕೆಲಸ:
ರವಿಕೆಗಾಗಿ ಮಹಿಳಾ ಟೈಲರ್‌ ಬಳಿ ವಾರದಿಂದಲೂ ತುಂಬಾ ಬೇಡಿಕೆ ಇದೆ. ₹120ರಿಂದ ₹500 ತನಕ ಒಂದು ರವಿಕೆಗೆ ಬೇಡಿಕೆ ಇದೆ. ಇದರಲ್ಲಿ ಹಲವಾರು ವಿನ್ಯಾಸಗಳಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಲಿಯಲು ಹೆಚ್ಚಿನ ಬೇಡಿಕೆಯಿದೆ ಎಂದು ಟೈಲರ್‌ ಶ್ರೀದೇವಿ ಸೋಮರೆಡ್ಡಿ ವಿವರಿಸಿದರು.

ಪಾಲನೆಯಾಗದ ನಿಯಮ:
ಕೋವಿಡ್‌ ಮಧ್ಯೆಯೂ ದೀಪಾವಳಿ ಹಬ್ಬ ಬಂದಿದ್ದು, ಜನ ಮೈಮರೆತು ತಿರುಗಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಇಳಿಕೆಯಾಗಿದ್ದು, ಎಲ್ಲಿಯೂ ಅಂತರ ಕಾಪಾಡಿಕೊಂಡಿಲ್ಲ. ಹಲವಾರು ವ್ಯಾಪಾರಿಗಳು ಮಾಸ್ಕ್‌ ಧರಿಸಿಲ್ಲ. ಇದರಿಂದ ಹಬ್ಬದ ನಂತರ ಕೋವಿಡ್‌ ಹೆಚ್ಚಳವಾದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

***

ದೀಪಾವಳಿ ಹಬ್ಬದ ಅಂಗವಾಗಿ ಶುಕ್ರವಾರ ಜನರು ಬೆಳ್ಳಿ ಖರೀದಿ ಮಾಡಿದ್ದಾರೆ. ವಾರದಿಂದ ವ್ಯಾಪಾರ ಜೋರಾಗಿ ಶುರವಾಗಿದೆ
ಉದಯ ನಾಗೂರ, ಚಿನ್ನಾಭರಣ ವ್ಯಾಪಾರಿ

***

ಸದ್ಯಕ್ಕೆ ಹೆಚ್ಚಿನ ಗ್ರಾಹಕರು ಬರುತ್ತಿಲ್ಲ. ಆದರೆ, ಹಬ್ಬದ ದಿನ ಹತ್ತಿರ ಬಂದಾಗ ಗ್ರಾಹಕರು ಹೆಚ್ಚು ಬರುವ ನಿರೀಕ್ಷೆ ಇದೆ
ದೀಪಕ್‌ ಪ್ಯಾರಸಬಾದಿ, ಬಟ್ಟೆ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT