ಶನಿವಾರ, ಸೆಪ್ಟೆಂಬರ್ 18, 2021
26 °C
ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ, 20 ಸಾವಿರ ಲಸಿಕೆ ನೀಡಲು ಆದೇಶ

ಯಾದಗಿರಿ: ಲಸಿಕೆ ನಿರಾಕರಿಸಿದರೆ ಪಡಿತರ ರದ್ದು; ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಯಾರು ನಿರಾಕರಿಸುತ್ತಾರೋ ಅಂಥವರಿಗೆ ಪಡಿತರ ನೀಡದಂತೆ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಲಸಿಕೆ ವಿತರಣೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜನಸಂದಣಿ ಇರುವ ಸ್ಥಳ ಮತ್ತು ಶಾಲೆ, ಪಂಚಾಯಿತಿ ಕೇಂದ್ರಗಳಲ್ಲಿ ಲಸಿಕೆ ಕೇಂದ್ರಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತಿದಿನ ಜಿಲ್ಲೆಯಲ್ಲಿ 15,000 ರಿಂದ 20,000 ಸಾವಿರ ಲಸಿಕೆಗಳನ್ನು ನೀಡಬೇಕು. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ದಿನದಲ್ಲಿ 12 ಗಂಟೆಗಳ ಕಾಲ ಲಸಿಕೆ ನೀಡಿದಾಗ ಮಾತ್ರ ಪ್ರತಿದಿನದ ಗುರಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಲ್ಲಿ ನಾಮಫಲಕ ಹಾಕುವುದರ ಮೂಲಕ ಜನರಿಗೆ ಲಸಿಕೆ ಜಾಗೃತಿ ಮೂಡಿಸಬೇಕು ಎಂದರು. ತಹಶೀಲ್ದಾರ್‌ ಮತ್ತು ಅಧಿಕಾರಿಗಳು ಪ್ರತಿದಿನ ಒಂದು ಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅದರ ವರದಿ ನೀಡುವಂತೆ ಸೂಚಿಸಿದರು. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ಮತ್ತು ಬೀದಿ ನಾಟಕಗಳನ್ನು ಹಮ್ಮಿಕೊಳ್ಳುವುದು ಅಗತ್ಯ, ನರೇಗಾ ಕಾರ್ಮಿಕರಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಶಿಕ್ಷಕರಿಗೆ ಕಡ್ಡಾಯವಾಗಿ ಲಸಿಕೆ ನೀಡಬೇಕು. ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಲಸಿಕೆ ನೀಡಬೇಕು ಎಂದರು.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಲಸಿಕೆ ಹಾಕುವುದರಲ್ಲಿ ಆಶಾಕಾರ್ಯಕರ್ತೆಯರು ಪ್ರಮುಖ ಪಾತ್ರವಹಿಸಬೇಕು. ಅವರು ಪ್ರತಿದಿನ ಶೇ 50ರಷ್ಟು ಲಸಿಕೆ ನೀಡುವಿಕೆಯ ಗುರಿ ಮುಗಿಸಬೇಕು. ಆಶಾಕಾರ್ಯಕರ್ತೆಯರು ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಯಾರು ಕಾರ್ಯನಿರ್ವಹಿಸುವುದಿಲ್ಲವೋ ಅಂಥವರ ವಿರುದ್ಧ ಕ್ರಮ ಜರುಗಿಸಲು ತಿಳಿಸಿದರು.

ಪ್ರತಿ ಗ್ರಾಮದಲ್ಲಿರುವ ಆಶಾಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕರು, ಪಿಡಿಒಗಳು ಮತ್ತು ಗ್ರಾಮ ಲೆಕ್ಕಿಗರು ಸೇರಿ ಜನರ ಮನವೊಲಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡುವುದು ಅವರ ಜವಾಬ್ದಾರಿ. ಲಸಿಕೆ ನೀಡಿಕೆಯಲ್ಲಿ ಕಡಿಮೆ ಸಾಧನೆ ಮಾಡುವ ವೈದ್ಯಾಧಿಕಾರಿ, ಸಿಬ್ಬಂದಿ, ಆಶಾಕಾರ್ಯಕರ್ತೆಯರ ವಿರುದ್ಧ ಕ್ರಮ ಜರುಗಿಸಲು ನಿದೇರ್ಶಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಇಂದುಮತಿ, ಜಿಲ್ಲಾ ನೋಡಲ್ ಅಧಿಕಾರಿ ಡಾ.ಭಗವಂತ ಅನವಾರ್, ಕ್ಷಯರೋಗ ನಿಯಂತ್ರಣಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ, ಡಾ.ಲಕ್ಷ್ಮಿಕಾಂತ, ಕಾರ್ಯಕ್ರಮ ಅಧಿಕಾರಿ ಸಾಧಿಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು