ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪ: ಪೊಲೀಸರ ವಿರುದ್ಧ ದೂರು

Last Updated 20 ಆಗಸ್ಟ್ 2021, 3:27 IST
ಅಕ್ಷರ ಗಾತ್ರ

ಶಹಾಪುರ: ರಸ್ತೆ ಅಪಘಾತದಲ್ಲಿಪೊಲೀಸ್‌ ವಾಹನ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆಪಾದನೆಯಡಿ ಪೊಲೀಸರ ವಿರುದ್ಧವೇ ಶಹಾಪುರ ಜೆಎಂಎಫ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ಸಿನಿಮಾ ಶೈಲಿಯಲ್ಲಿ ನಡೆದ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.

ಯಾದಗಿರಿಯ ಅಶೋಕ ನಗರ ತಾಂಡಾದ ನಿವಾಸಿ ವೆಂಕಟೇಶ ಅಪಘಾತದಲ್ಲಿ ಮೃತಪಟ್ಟಿದ್ದ. ಆತನ ತಾಯಿ ಹಿರಿಬಾಯಿ ಅವರು ಕಲಬುರ್ಗಿ ಹೈಕೋರ್ಟ್ ನಿರ್ದೇಶನದಂತೆ ಗೋಗಿ ಠಾಣೆಯಲ್ಲಿ ಸಿವಿಲ್ ಪೊಲೀಸ್ ಹಾಗೂ ವಾಹನ ಚಾಲಕ ಬಾಪುಗೌಡ ವಿರುದ್ಧ ಅಪರಾಧ ಕಲಂ 279, 304(ಎ) ಐಪಿಸಿ ಅಡಿ ಕೃತ್ಯ ಎಸಗಿದ ಬಗ್ಗೆ ಖಾಸಗಿ ದೂರು ಸಲ್ಲಿಸಿದರು. ಜೆಎಂಎಫ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ಅವರು ಈವಿಚಾರಣೆ ಕೈಗೆತ್ತಿಕೊಂಡರು. ಬಳಿಕ ವಡಗೇರಾ ಠಾಣೆಯ ಪಿಎಸ್ಐ ಅವರಿಗೆ ‘ಈ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು’ ಎಂದು ದೂರುದಾರರ ವಕೀಲ ಆರ್.ಎಂ.ಹೊನ್ನಾರಡ್ಡಿ ತಿಳಿಸಿದರು.

ಪ್ರಕರಣದ ಹಿನ್ನೆಲೆ: 2021ರ ಮಾರ್ಚ್ 3ರಂದು ವೆಂಕಟೇಶ (21) ಅವರು ಕನ್ಯಾಕೊಳ್ಳುರ ತಾಂಡಾದಿಂದ ಯಾದಗಿರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಮನಗನಾಳ ಗ್ರಾಮದ ಹತ್ತಿರ ಸಂಜೆ 5:30ರ ವೇಳೆಗೆ ಕಾನ್‌ಸ್ಟೆಬಲ್‌ ಬಾಪುಗೌಡ ಅವರು ಪೊಲೀಸ್ ಜೀಪ್‌ (ಕೆಎ33 ಜಿ.160) ಚಲಾಯಿಸಿಕೊಂಡು ಬರುತ್ತಿದ್ದರು. ಜತೆಗೆ ಸಿಬ್ಬಂದಿ ಸಹ ಇದ್ದರು. ಚಾಲಕನ ಅಜಾಗರೂಕತೆಯಿಂದ ಜೀಪ್‌ ಬೈಕ್ ಸವಾರಿನಿಗೆ ಡಿಕ್ಕಿ ಹೊಡೆಯಿತು. ಗಾಯಗೊಂಡ ವೆಂಕಟೇಶ ಅವರನ್ನು ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟ ಎಂದು ದೂರಿನಲ್ಲಿ ಹಿರಿಬಾಯಿ ತಿಳಿಸಿದ್ದಾರೆ.

ಬಳಿಕ ವಡಗೇರಾ ಠಾಣೆಗೆ ತೆರಳಿ ದೂರು ಸಲ್ಲಿಸಿದರೂ ಪೊಲೀಸರು ದೂರು ತೆಗೆದುಕೊಳ್ಳದೆ ಹಿಂದಕ್ಕೆ ಕಳುಹಿಸಿದ್ದರು. ಇದರಿಂದ ಹತಾಶೆಯಾದ ಮಹಿಳೆ ಹೈಕೋರ್ಟ್ ಮೊರೆ ಹೋದರು. ಕಲಬುರ್ಗಿ ಹೈಕೋರ್ಟ್ ಪೀಠವು ಖಾಸಗಿ ದೂರು ಸಲ್ಲಿಸುವಂತೆ ನಿರ್ದೇಶನ ನೀಡಿ, ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ದೋಷಾರೋಪಣ ಪತ್ರ ಸಲ್ಲಿಸದಂತೆ ಆದೇಶ ನೀಡಿದೆ.

ಪೊಲೀಸರ ದೂರು: ಅಪಘಾತದ ದಿನ (2021ರ ಮಾರ್ಚ್ 3) ಯಾದಗಿರಿಯಲ್ಲಿ ವಾರ್ಷಿಕ ಕ್ರೀಡಾಕೂಟ ಮುಗಿಸಿಕೊಂಡು ವಾಪಸ್ ಬರುತ್ತಿದ್ದೆವು. ಸಂಜೆ 6.30ರ ಸುಮಾರಿಗೆ ಬೈಕ್ ಸವಾರ ಕಾರು ಹಿಂದಿಕ್ಕುವ ಬರದಲ್ಲಿ ನೆಲಕ್ಕೆ ಬಿದ್ದನು. ಗಾಯಗೊಂಡ ಆತನನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಯಿತು. ಬೈಕ್ ಸವಾರ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಪೊಲೀಸ್ ಜೀಪ್‌ಗೆ ಡಿಕ್ಕಿಹೊಡೆದಿದ್ದಾನೆ ಎಂದುಜೀಪ್ ಚಾಲಕ ಬಾಪುಗೌಡ ವಡಗೇರಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೋಷಾರೋಪಣ ಪತ್ರ ಸಲ್ಲಿಕೆ: ವಡಗೇರಾ ಠಾಣೆಯ ಪೊಲೀಸರು ಪ್ರಕರಣದ ಬಗ್ಗೆ ತರಾತುರಿಯಲ್ಲಿ ದೋಷಾರೋಪಣ ಪತ್ರ ಸಿದ್ಧಪಡಿಸಿಶಹಾಪುರ ನ್ಯಾಯಾಲಯಕ್ಕೆ ಸಲ್ಲಿಸಿ ಕೈ ತೊಳೆದುಕೊಂಡಿದ್ದಾರೆ ಎಂಬ ಆಪಾದನೆ ಇದೆ. ಈ ಪ್ರಕರಣವುಈಗ ತೀವ್ರ ಕುತೂಹಲ ಮೂಡಿಸಿದೆ.

----

*ರಸ್ತೆ ಅಪಘಾತದಲ್ಲಿ ಬೈಕ್ ಸವಾರನ ಸಾವಿಗೆ ಕಾರಣವಾದ ಪೊಲೀಸ್ ಜೀಪ್‌ ಚಾಲಕನ ರಕ್ಷಣೆಗಾಗಿ ಇಡೀ ಇಲಾಖೆ ಯತ್ನಿಸಿತ್ತು. ಈಗ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ

-ಜಿಡಗೆ ಕೈಲಾಸ, ಹೈಕೋರ್ಟ್ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT