ಸೋಮವಾರ, ನವೆಂಬರ್ 18, 2019
28 °C
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಅಧ್ಯಕ್ಷತೆಯಲ್ಲಿ ಶಾಂತಿಪಾಲನಾ ಸಭೆ

‘ಶಾಂತಿಯಿಂದ ಈದ್-ಮಿಲಾದ್ ಆಚರಿಸಿ’

Published:
Updated:
Prajavani

ಯಾದಗಿರಿ: ನವೆಂಬರ್ 10 ರಂದು ನಡೆಯುವ ಈದ್-ಮಿಲಾದ್ ಹಬ್ಬವನ್ನು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಈದ್-ಮಿಲಾದ್ ಹಬ್ಬದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸುಪ್ರೀಂ ಕೋರ್ಟ್ ನವೆಂಬರ್ 15 ರಂದು ನೀಡುವ ಅಯೋಧ್ಯ ತೀರ್ಪು ಕುರಿತಂತೆ ಪರ ಹಾಗೂ ವಿರೋಧ ವ್ಯಕ್ತಪಡಿಸಬಾರದು. ಸಂಭ್ರಮಾಚರಣೆ ಅಥವಾ ಪ್ರತಿಭಟನೆ ಮಾಡುವಂತಿಲ್ಲ. ಸಮಾಜದಲ್ಲಿ ಶಾಂತಿ ನೆಲೆಸಲು ಎಲ್ಲ ವರ್ಗದ ಜನರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ‘ಸಮಾಜದ ಮುಖಂಡರು ಹಾಗೂ ಹಿರಿಯರು ಯುವಕರಿಗೆ ತಿಳಿವಳಿಕೆ ನೀಡಿ ಈದ್-ಮಿಲಾದ್ ಹಬ್ಬದ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ವಾಟ್ಸ್ಆ್ಯ ಪ್‌ನಲ್ಲಿ ಹರಿದಾಡುವ ಅನಗತ್ಯ ವಿಷಯಗಳನ್ನು ನಂಬಬಾರದು. ಅನಗತ್ಯ ಸಂದೇಶಗಳನ್ನು ಫಾರ್ವರ್ಡ್ ಮಾಡುವವರ ಬಗ್ಗೆ ತಿಳಿದುಬರುತ್ತದೆ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಅಯೋಧ್ಯೆ ತೀರ್ಪು ಕುರಿತಂತೆ ಸಾರ್ವಜನಿಕವಾಗಿ ಪರ-ವಿರೋಧ ಆಚರಣೆ ಮಾಡುವುದಕ್ಕೆ ಅವಕಾಶ ಇಲ್ಲ. ಜಿಲ್ಲೆಯ ಹಿಂದೂ-ಮುಸ್ಲಿಂ ಸಹೋದರರು ತೀರ್ಪನ್ನು ಸಮಾನ ಮನಸಿನಿಂದ ಸ್ವೀಕರಿಸಬೇಕು. ತೀರ್ಪಿನ ಮುಂಚಿತವಾಗಿ ನಗರದಲ್ಲಿ ಜಾಗೃತಿ ಮೂಡಿಸಲಾಗುವುದು. ಯಾರಾದರೂ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವುದು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

‘ಹಿಂದೂ-ಮುಸ್ಲಿಂ ಧರ್ಮಗಳ ಮುಖಂಡರು ಮಾತನಾಡಿ, ಅಯೋಧ್ಯೆ ವಿಷಯವಾಗಿ ಸುಪ್ರೀಂ ಕೋರ್ಟ್ ಯಾವುದೇ ತೀರ್ಪು ನೀಡಿದರೂ ಗೌರವದಿಂದ ಸ್ವೀಕರಿಸುತ್ತೇವೆ. ಅಹಿತಕರ ಘಟನೆಗಳು ಜರುಗದಂತೆ ಸಹಕರಿಸುತ್ತೇವೆ’ ಎಂದು ವಾಗ್ದಾನ ಮಾಡಿದರು.

ಡಿವೈಎಸ್‌ಪಿ ಯು.ಶರಣಪ್ಪ, ಪಿಎಸ್‌ಐ ವೀರಣ್ಣ ಎಸ್.ಮಗಿ, ಪೌರಾಯುಕ್ತ ರಮೇಶ ಸುಣಗಾರ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದಪ್ಪ ಎಸ್.ಹೊಟ್ಟಿ, ಸಾಹಿತಿಗಳಾದ ಅಯ್ಯಣ್ಣ ಹುಂಡೇಕಾರ್, ಚಂದ್ರಕಾಂತ ಕರದಳ್ಳಿ, ಬಾಬು ಧೋಕಾ, ಗಣೇಶ ಬಾಪಕರ್, ಲಾಯಕ್‌ ಹುಸೇನ್ ಬಾದಲ, ಗುಲಾಮ್ ಸಮದಾನಿ ಮೂಸಾ, ಜಹೀರುದ್ದೀನ್, ವಾಹೀದ್ ಮಿಯಾ, ಮೊಹಮ್ಮದ್ ನಿಯಾಜ್‌ ಅಹಮ್ಮದ್, ಡಾ.ಅಲಿಂ, ಇನಾಯತ್ ಉರ್ ರೆಹಮಾನ್, ಫೀರ್ ಅಹಮ್ಮದ್, ನಿಂಗಪ್ಪ ಹಾಗೂ ಮಾಣಿಕರೆಡ್ಡಿ ಕೆ. ಇದ್ದರು.

ಪ್ರತಿಕ್ರಿಯಿಸಿ (+)