ಶುಕ್ರವಾರ, ಡಿಸೆಂಬರ್ 13, 2019
17 °C

ಸನ್ನತಿ: ಸಭೆ ಕರೆಯಲು ‌ಕೆಪಿಆರ್‌ಎಸ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ತಾಲ್ಲೂಕಿನ ಚಾಮನಳ್ಳಿ, ಹೋರುಂಚಾ ಗ್ರಾಮಗಳಲ್ಲಿ ಸನ್ನತಿ ಏತ ನೀರಾವರಿ ಯೋಜನೆಯ ಕಾಲುವೆ ನೀರು ಹರಿಯುವ ಮೊದಲೇ ಕಾಲುವೆಗಳು ಶಿಥಿಲಗೊಂಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಕೆಪಿಆರ್‌ಎಸ್ ತಾಲ್ಲೂಕು ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಹಾಗೂ ತಾಲ್ಲೂಕು ಅಧ್ಯಕ್ಷ ಮುದುಕಪ್ಪ ಚಾಮನಳ್ಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ಸಮಸ್ಯೆ ವಿವರಿಸಿದರು.

2015-16ನೇ ಸಾಲಿನಲ್ಲಿ ಭೂಸ್ವಾಧೀನ ಪಡಿಸಿಕೊಂಡ ಸುಮಾರು 100 ಎಕರೆ ರೈತರ ಜಮೀನಿಗೆ ಇದುವರೆಗೆ ಪರಿಹಾರ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದು, ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಕಾಮಗಾರಿ ಕಳಪೆಯಾಗಿದ್ದು ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ತಕ್ಷಣ ಕ್ರಮ ವಹಿಸಿ ಕಳೆದ 4 ವರ್ಷಗಳಿಂದ ಜಮೀನು ಕಳೆದುಕೊಂಡ ರೈತರಿಗೆ ಭೂಸ್ವಾಧೀನದ ಮೊತ್ತ ಪರಿಹಾರ ಬಡ್ಡಿ ಸಮೇತ ನೀಡಬೇಕು. ಕಳಪೆಯಾಗಿರುವ ಕಾಮಗಾರಿ ತನಿಖೆ ನಡೆಸಬೇಕು. ಈ ಯೋಜನೆಯಡಿ ಯರಗೋಳವರೆಗೆ ನೀರು ತಲುಪಿದೆ. ಆದರೆ, ಚಾಮನಳ್ಳಿ, ಹೋರುಂಚಾ ಭಾಗಕ್ಕೆ ನೀರು ಇನ್ನು ಹರಿಯುತ್ತಿಲ್ಲ. ತಕ್ಷಣ ನೀರು ಹರಿಸಲು ಕ್ರಮ ಕೈಗೊಂಡು ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಕ್ಷಣ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಇಲ್ಲವಾದಲ್ಲಿ  ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ರಹಿಮಾನ್, ಆಂಜಿನೇಯ ಹೆಡಿಗಿಮುದ್ರಿ, ಚಂದಾಸಾಬ ಹೆಡಿಗಿಮುದ್ರಿ, ಚಂದ್ರಕಾಂತ ಹೆಡಿಗಿಮುದ್ರ, ರಫೀಕ್ ಸುರಪುರ ಇದ್ದರು.

ಪ್ರತಿಕ್ರಿಯಿಸಿ (+)