ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಕಟ್ಟಡ ನೆಲಸಮಕ್ಕೆ ಪರಿಶೀಲಿಸಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರ್‌ಸಿ ಸುಬೋಧ ಯಾದವ ಸೂಚನೆ
Last Updated 4 ಸೆಪ್ಟೆಂಬರ್ 2019, 15:26 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯ ಸರ್ಕಾರಿ ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಲು ತಾಂತ್ರಿಕವಾಗಿ ಪರಿಶೀಲನೆ ನಡೆಸಬೇಕು’ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸರ್ಕಾರಿ ಕಟ್ಟಡಗಳು 50 ವರ್ಷ ಹಳೆಯದಾಗಿದ್ದರೂ ನೆಲಸಮಗೊಳಿಸಲು ಯೋಗ್ಯವಿರುವುದಿಲ್ಲ. ಛತ್ತಿನ ಸಿಮೆಂಟ್ ಕಳಚಿ ಬೀಳುತ್ತಿದ್ದರೆ ಪ್ಲಾಸ್ಟರ್ ಹೋಗಿರಬಹುದು. ರಾಡ್‍ಗಳು ಕಂಡಾಕ್ಷಣ ಇಡೀ ಕಟ್ಟಡ ನೆಲಸಮಗೊಳಿಸುವ ನಿರ್ಧಾರಕ್ಕೆ ಬರುವುದು ಬೇಡ. ಕೆಲ ಕಟ್ಟಡಗಳು 100-200 ವರ್ಷಗಳಷ್ಟು ಹಳೆಯದಾಗಿದ್ದರೂ ಇನ್ನೂ ಸದೃಢವಾಗಿವೆ. ಹಾಗಾಗಿ, ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ಗಳು ತಾಂತ್ರಿಕವಾಗಿ ಪರಿಶೀಲನೆ ನಡೆಸಬೇಕು’ ಎಂದರು.

‘2019-20ನೇ ಸಾಲಿನಲ್ಲಿ ಎಚ್‍ಕೆಆರ್‌ಡಿಬಿಯಿಂದ ಯಾದಗಿರಿ ಜಿಲ್ಲೆಯ 288 ಕಾಮಗಾರಿಗಳ ಕ್ರಿಯಾಯೋಜನೆಗೆ ಜುಲೈ 27ರಂದು ಮಂಜೂರಾತಿ ನೀಡಲಾಗಿದೆ. ಈ ಕಾಮಗಾರಿಗಳ ಕುರಿತಂತೆ ಸಂಬಂಧಪಟ್ಟ ಅನುಷ್ಠಾನ ಇಲಾಖೆಗಳು ತಿಂಗಳಲ್ಲಿ ಸ್ಥಳ ಪರಿಶೀಲನೆ ನಡೆಸಬೇಕು. ಒಂದು ವೇಳೆ ಕಾಮಗಾರಿಗಳ ಬದಲಾವಣೆ ಇದ್ದಲ್ಲಿ ಸಕಾರಣದೊಂದಿಗೆ ತಿಂಗಳೊಳಗೆ ವರದಿ ನೀಡಬೇಕು. ₹ 30 ಲಕ್ಷ ವರೆಗಿನ ಕಾಮಗಾರಿಗಳನ್ನು 3 ತಿಂಗಳಲ್ಲಿ ಪ್ರಾರಂಭಿಸಬೇಕು. ₹ 30 ಲಕ್ಷಗಳಿಂದ ₹ 1 ಕೋಟಿ ವರೆಗಿನ ಕಾಮಗಾರಿಗಳನ್ನು 5 ತಿಂಗಳಲ್ಲಿ ಪ್ರಾರಂಭಿಸಬೇಕು’ ಎಂದು ಸೂಚಿಸಿದರು.

‘2018-19ನೇ ಸಾಲಿನ ಬಾಕಿ ಕಾಮಗಾರಿಗಳನ್ನು ಈ ತಿಂಗಳ ಅಂತ್ಯದೊಳಗೆ ಆರಂಭಿಸಬೇಕು. ಅ. 15ರ ನಂತರ ಯಾವುದೇ ಕಾಮಗಾರಿಗಳು ಆರಂಭಿಸಲು ಬಾಕಿ ಉಳಿಯಬಾರದು. 2016-17ನೇ ಸಾಲಿನ ಕಾಮಗಾರಿಗಳನ್ನು ಅಕ್ಟೋಬರ್ ಅಂತ್ಯದೊಳಗೆ ಮತ್ತು 2017-18ನೇ ಸಾಲಿನ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು’ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

‘ಕಾಮಗಾರಿ ಪಡೆದ ಇಲಾಖೆಗಳೊಂದಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್‍ಕೆಆರ್‌ಡಿಬಿಯಿಂದ ಅನುಮೋದನೆ ಆಗಿರುವ ಕಾಮಗಾರಿಗಳನ್ನು ಸರಿಯಾಗಿ ಅನುಷ್ಠಾನ ಆಗುವ ರೀತಿಯಲ್ಲಿ ಕಾಳಜಿ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ಎಇಇಗೆ ನೋಟಿಸ್:
ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯ ಯಾದಗಿರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು, ’ನಮ್ಮ ಹೊಲ ನಮ್ಮ ದಾರಿ’ ಕಾಮಗಾರಿಗಳ ಕುರಿತು ಮಂಡಳಿಯ ತಂತ್ರಾಂಶದಲ್ಲಿ ತಪ್ಪು ಮಾಹಿತಿ ಸಲ್ಲಿಸಿದ್ದಕ್ಕೆ ಕಾರಣ ಕೇಳಿ ನೋಟಿಸ್ ನೀಡುವಂತೆ ಪ್ರಾದೇಶಿಕ ಆಯುಕ್ತರು ಸೂಚಿಸಿದರು.

ಜಿ.ಪಂ.ಸಿಇಒ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಮುಖ್ಯ ಯೋಜನಾಧಿಕಾರಿ ಸುನೀಲ್ ಬಿಸ್ವಾಸ್, ಎಚ್‍ಕೆಆರ್‌ಡಿಬಿ ಉಪ ನಿರ್ದೇಶಕಿ ಸುಜಾತಾ ಕಾಳಗಿ, ಸಿಎಫ್‍ಒ ಅಶ್ವಿನಿ, ಎಂಜಿನಿಯರ್ ಶಿವಶಂಕರಪ್ಪ ಗುರಗುಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT