ಬುಧವಾರ, ಜನವರಿ 29, 2020
28 °C
ಅನಧಿಕೃತ ಹತ್ತಿ ಖರೀದಿ ಕೇಂದ್ರಗಳ ಮೇಲೆ ದಾಳಿ

16 ಖರೀದಿ ಕೇಂದ್ರಗಳ ತೆರವು; ₹23.78 ಲಕ್ಷ ದಂಡ ವಸೂಲಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ 16 ಅನಧಿಕೃತ ಹತ್ತಿ ಖರೀದಿ ಕೇಂದ್ರಗಳ ಮೇಲೆ ಎಪಿಎಂಸಿ ಅಧಿಕಾರಿಗಳು ದಾಳಿ ಮಾಡಿ ₹23.78 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಒಂದೂವರೆ ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಪರವಾನಗಿ ಇಲ್ಲದೆ ಖರೀದಿ ಮಾಡುತ್ತಿದ್ದವರಿಗೆ ಶುಲ್ಕದ ಮೂರರಷ್ಟು ದಂಡ ವಿಧಿಸಿ ವಸೂಲಿ ಮಾಡಿದ್ದಾರೆ. ಸರ್ಕಾರಕ್ಕೆ ಸೇರಬೇಕಾಗಿದ್ದ ಶುಲ್ಕವನ್ನು ತಪ್ಪಿಸಿಕೊಳ್ಳುತ್ತಿದ್ದವರಿಗೆ ಹಾಗೂ ತೂಕದಲ್ಲಿ ವ್ಯತ್ಯಾಸ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದವರಿಗೆ ಎಚ್ಚರಿಕೆ ಕೊಟ್ಟಂತಾಗಿದೆ.

ಹತ್ತಿ ಖರೀದಿದಾರರು ಎಪಿಎಂಸಿಯಿಂದ ಲೈಸೆನ್ಸ್‌ ಪಡೆಯಬೇಕು. ಅಲ್ಲದೆ ಮಾರುಕಟ್ಟೆ ಪ್ರಾಂಗಣದಲ್ಲಿಯೇ ಖರೀದಿ ಮಾಡಬೇಕು. ಅನಧಿಕೃತ ಖರೀದಿದಾರರಿಂದ ರೈತರಿಗೆ ನಷ್ಟವೇ ಹೊರತು ಲಾಭ ಇಲ್ಲ.

ಅನಧಿಕೃತ ಹತ್ತಿ ಖರೀದಿದಾರರು ರೈತರಿಗೆ ತೂಕದಲ್ಲಿ ಮತ್ತು ದರದಲ್ಲಿ ವ್ಯತ್ಯಾಸ ಮಾಡಿ ಮೋಸ ಮಾಡಿದ ಅನೇಕ ಉದಾಹರಣೆಗಳಿವೆ. ಹೀಗಾಗಿ ಸರ್ಕಾರದ ವತಿಯಿಂದಲೇ ₹5550 ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತಿದೆ.

ಅನಧಿಕೃತ ಹತ್ತಿ ಖರೀದಿ ಕೇಂದ್ರದಲ್ಲಿ ಗುಣಮಟ್ಟದ ತೂಕದ ಯಂತ್ರಗಳಿಲ್ಲ. ತೂಕದಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ರೈತರಿಂದ ದೂರುಗಳು ಬಂದಿದ್ದವು. 

ರೈತರು ಕಷ್ಟಪಟ್ಟು ಬಿತ್ತನೆ ಮಾಡಿ, ಬೆಳೆ ಕೈಸೇರಲು ಎಕರೆಗೆ 40 ಸಾವಿರ ಖರ್ಚು ತಗುಲುತ್ತಿದೆ. ಇಷ್ಟೆಲ್ಲ ಖರ್ಚಾದರೂ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಅನಧಿಕೃತ ಖರೀದಿದಾರರು ವಂಚಿಸುತ್ತಿದ್ದಾರೆ ಎಂದು ರೈತರು ದೂರುತ್ತಾರೆ.

‘ಎಪಿಎಂಸಿ ಮಾರುಕಟ್ಟೆ ಅಥವಾ ಖರೀದಿ ಕೇಂದ್ರದಲ್ಲಿ ರೈತರು ನೇರವಾಗಿ ಬಂದು ಮಾರಾಟ ಮಾಡಬೇಕು. ಅನಧಿಕೃತ ಅಂಗಡಿಗಳಲ್ಲಿ ಮಾರಾಟ ಮಾಡಿದರೆ ಮೋಸ ಹೋಗುವುದೇ ಜಾಸ್ತಿ. ಈಗಾಗಲೇ ಅನಧಿಕೃತ ಅಂಗಡಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಿ ಅಂಗಡಿಗಳನ್ನು ‌‌‌‌ತೆರವುಗೊಳಿಸಲಾಗಿದೆ. ರೈತರು ಯಾವುದೇ ಕಾರಣಕ್ಕೂ ಅನಧಿಕೃತ ವ್ಯಾಪಾರಿಗಳ ಮೊರೆ ಹೋಗಬಾರದು’ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಭೀಮರಾಯ ಎಂ.ಹೇಳುತ್ತಾರೆ.ಒಂದೂವರೆ ತಿಂಗಳಲ್ಲಿ ಅನಧಿಕೃತ ಹತ್ತಿ ಖರೀದಿ ಕೇಂದ್ರಗಳಿಗೆ ತೆರಳಿ ಅವುಗಳನ್ನು ತೆರವುಗೊಳಿಸಿ ಅವರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಭೀಮರಾಯ ತಿಳಿಸಿದರು.

ಈ ಹಿಂದೆ ವರ್ತಕರ ಸಭೆ ಕರೆಯಲಾಗಿತ್ತು. ಎಪಿಎಂಸಿಯಲ್ಲಿ ಮಾರಾಟ ಮಾಡಲು ತಿಳಿಸಲಾಗಿತ್ತು. ಆದರೆ, ಒಬ್ಬರೂ ಬರಲಿಲ್ಲ. ಹೀಗಾಗಿ ಅನಧಿಕೃತವಾಗಿ ತಲೆ ಎತ್ತಿದ ಹತ್ತಿ ಖರೀದಿ ಕೇಂದ್ರಗಳ ಮೇಲೆ ನಿರಂತರ ದಾಳಿ ಮಾಡಲಾಗುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ಶರಣಗೌಡ ಕಾಳಬೆಳಗುಂದಿ ತಿಳಿಸಿದರು.

ವಸೂಲಿ ಮಾಡಿರುವ ಮೊತ್ತ (₹ ಲಕ್ಷಗಳಲ್ಲಿ)

ಯಾದಗಿರಿ;₹11 ಲಕ್ಷ

ಶಹಾಪುರ;₹10 ಲಕ್ಷ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು